ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ನಾಗರಿಕರಿಗೆ ನೀರಿನ ಬಿಲ್ ಕುರಿತು ಸಮಸ್ಯೆ ಪರಿಹಾರಕ್ಕೆ ಜನವರಿ 3ರಂದು ಬೆಳಗ್ಗೆ 11 ಗಂಟೆಯಿಂದ ಸಂಜೆಯವರೆಗೆ ಅಹವಾಲು ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದ್ದಾರೆ.ಮೇಯರ್ ಸುಧೀರ್ ಶೆಟ್ಟಿಕಣ್ಣೂರು ಅವರ ಅಧ್ಯಕ್ಷತೆಯಲ್ಲಿ ಪಾಲಿಕೆಯ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಪಾಲಿಕೆ ಮುಖ್ಯ ಕಚೇರಿಯಲ್ಲಿ ಮತ್ತು ಸುರತ್ಕಲ್ ವಲಯ ಕಚೇರಿಯಲ್ಲಿ ಅಹವಾಲು ಸ್ವೀಕಾರ ನಡೆಯಲಿದ್ದು, ಸಂಬಂಧಪಟ್ಟ ಎಂಜಿನಿಯರ್‌ಗಳು, ಮೀಟರ್ ಇನ್ಸ್‌ಪೆಕ್ಟರ್ ಸ್ಥಳದಲ್ಲಿ ಇರುತ್ತಾರೆ. ಅಲ್ಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.
ಮಂಗಳೂರು ನಗರದಲ್ಲಿ ಸುಮಾರು 12,000ಕ್ಕೂ ಅಧಿಕ ನೀರಿನ ಮೀಟರ್ ದುರಸ್ತಿಯಾಗಬೇಕಾಗಿದೆ. ಪರಿಶೀಲನೆ ನಡೆಸಿ ಹೊಸ ಮೀಟರ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ನೀರಿನ ಬಿಲ್ ಸಮಸ್ಯೆಗೆ ಪ್ರತ್ಯೇಕ ಹೆಲ್ಪ್ ಲೈನ್ನ್ ತೆರೆಯಲಾಗುವುದು ಎಂದು ಮಂಗಳೂರು ಮೇಯರ್ ಮಹಾನಗರ ಪಾಲಿಕೆ ಸಭೆಯಲ್ಲಿ ತಿಳಿಸಿದರು.ಪ್ರತಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ಮಾತನಾಡಿ, ನಗರದ ಕೆಲವೊಂದು ಮನೆಗಳ ನೀರಿನ ಬಿಲ್ 7,500 ರು.ನಿಂದ 30,000 ರು. ವರೆಗೂ ಬರುತ್ತಿದೆ. ದಿನದಲ್ಲಿ 50 ಮಂದಿ ನೀರಿನ ಬಿಲ್ ಸಮಸ್ಯೆ ಹೇಳುತ್ತಿದ್ದಾರೆ. ತಂತ್ರಾಂಶ ಕೂಡ ಜನಸ್ನೇಹಿಯಾಗಿಲ್ಲ. ಬಾಸ್ಕರ್ ಅವರ ಮೇಯರ್ ಅವಧಿಯ ಬಳಿಕ ನೀರಿನ ಅದಾಲತ್ ನಡೆದಿಲ್ಲ ಎಂದರು. ಮಾಜಿ ಮೇಯರ್ ಶಶಿಧರ ಹೆಗ್ಡೆ ಮಾತನಾಡಿ, ನೀರಿನ ಬಿಲ್ ಸಮಸ್ಯೆ ಹಲವಾರು ವರ್ಷದಿಂದ ಬಾಕಿ ಉಳಿದಿದೆ. ಮನೆಗಳಿಗೆ ನೀರಿನ ಬಿಲ್ ನೀಡುವ ಕೆಲಸವೂ ಸರ್ಮಕವಾಗಿ ನಡೆಯುತ್ತಿಲ್ಲ. ನಗರದಲ್ಲಿ ಸುಮಾರು 90,285 ನೀರಿನ ಮೀಟರ್ ಇದ್ದು, 12,500 ಮೀಟರ್ ಕಾರ್ಯನಿರ್ವಹಿಸುತ್ತಿಲ್ಲ. ಹೊಸ ಮೀಟರ್ ಕೂಡ ಅಳವಡಿಸುತ್ತಿಲ್ಲ. ಅವುಗಳ ಬಿಲ್ ಪಾವತಿಯಾದರೆ ಪಾಲಿಕೆ ಆದಾಯವೂ ಹೆಚ್ಚಾಗಲಿದೆ ಎಂದು ಹೇಳಿದರು.
ಅಣಬೆ ಫ್ಯಾಕ್ಟರಿ ಮುಚ್ಚಲು ನಿರ್ಣಯ:ತಿರುವೈಲ್ ವಾರ್ಡ್‌ನ ಓಂಕಾರ ನಗರದಲ್ಲಿ ಕಾರ್ಯಾಚರಿಸುತ್ತಿರುವ ಅಣಬೆ ಫ್ಯಾಕ್ಟರಿಯಿಂದ ಸಾರ್ವಜನಿಕರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ವಾಸನೆಯಿಂದಾಗಿ ಈ ಭಾಗದಲ್ಲಿ ಜನರು ಜೀವನ ನಡೆಸುವುದೇ ಕಷ್ಟವಾಗಿದೆ. ಮೇಯರ್, ವಿಪಕ್ಷ ನಾಯಕರನ್ನು ಒಳಗೊಂಡ ತಂಡ ಸ್ಥಳ ಪರಿಶೀಲಿಸಿದ್ದು, ಸಮಸ್ಯೆ ಅರಿವಾಗಿದೆ. ಅಣಬೆ ಫ್ಯಾಕ್ಟರಿ ಮುಚ್ಚಲು ತತ್‌ಕ್ಷಣ ನಿರ್ಣಯ ಕೈಗೊಳ್ಳಬೇಕು ಎಂದು ಸದಸ್ಯೆ ಹೇಮಲತಾ ರಘು ಸಾಲ್ಯಾನ್ ಒತ್ತಾಯಿಸಿದರು. ಮೇಯರ್ ಸುಧೀರ್ ಶೆಟ್ಟಿ ಉತ್ತರಿಸಿ, ಅಣಬೆ ಫ್ಯಾಕ್ಟರಿ ಪ್ರದೇಶಕ್ಕೆ ನಾನು ಭೇಟಿ ನೀಡಿದ್ದೆ, ವಾಸನೆ ಬರುತ್ತಿತ್ತು, ಸಮಸ್ಯೆಯ ಬಗ್ಗೆ ಸಾರ್ವಜನಿಕರೂ ಹೇಳಿಕೊಂಡಿದ್ದರು. ಊರಿನವರನ್ನು ಒಳಗೊಂಡಂತೆ ಸಭೆ ನಡೆಸಿದ್ದೇವೆ. ಅಲ್ಲಿ ಕೈಗೊಂಡ ನಿರ್ಣಯವನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ್ದೇವೆ ಎಂದರು. ಅಣಬೆ ಫ್ಯಾಕ್ಟರಿ ಮುಚ್ಚುವ ನಿಟ್ಟಿನಲ್ಲಿ ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದಿನ ಕ್ರಮಕೈಗೊಳ್ಳುತ್ತೇವೆ ಎಂದರು. ಫ್ಯಾಕ್ಟರಿ ಮುಚ್ಚಲು ನೀವು ಆದೇಶ ಮಾಡಿ ಎಂದು ಆಡಳಿತ ಪಕ್ಷದ ಸದಸ್ಯರು ಒತ್ತಾಯಿಸಿದರು. ಸದಸ್ಯರ ಒಮ್ಮತದ ನಿರ್ಧಾರದಂತೆ ಅಣಬೆ ಫ್ಯಾಕ್ಟರಿ ಬಂದ್ ಮಾಡಲು ಆದೇಶ ನೀಡುತ್ತೇನೆ ಎಂದು ಮೇಯರ್ ಹೇಳಿದರು.
ಬೀದಿ ನಿರ್ವಹಣೆ ಇಲ್ಲ:ಪಾಲಿಕೆ ಸದಸ್ಯ ಅಬ್ದುಲ್ ರವೂಫ್ ಮಾತನಾಡಿ, ನಗರದಲ್ಲಿರುವ ಬೀದಿ ದೀಪಗಳ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ. ಎಲ್‌ಇಡಿ ಬೀದಿ ದೀಪ ಅಳವಡಿಕೆ ಇನ್ನೂ ಆರಂಭಿಕ ಹಂತದಲ್ಲಿದೆ ಎಂದರು. ಶಶಿಧರ ಹೆಗ್ಡೆ ಮಾತನಾಡಿ, ಡಾರ್ಕ್ ಸ್ಥಳಗಳಿಗೆ ಬೀದಿ ದೀಪ ಅಳವಡಿಸಬೇಕು ಎಂದಿದೆ ಎಂದರು. ಮೇಯರ್ ಉತ್ತರಿಸಿ, ಕೆಟ್ಟು ಹೋದ ಬೀದಿ ದೀಪ ಅಳವಡಿಸಲು ಸೂಚನೆ ನೀಡುತ್ತೇನೆ. ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ನಗರಕ್ಕೆ 60,000 ಎಲ್‌ಇಡಿ ಬೀದಿ ದೀಪ ಅಳವಡಿಸಬೇಕು. ಗುತ್ತಿಗೆ ವಹಿಸಿದ ಕಂಪೆನಿ ಕೇವಲ 16,000 ಬೀದಿದೀಪ ಹಾಕಿದೆ. ಇದೀಗ ಮತ್ತೆ ಇಒಟಿ ಕೇಳಿದ್ದು, ಅದನ್ನು ನೀಡುತ್ತೇವೆ. ಬಳಿಕ ಕೆಲಸ ತ್ವರಿತಗತಿಯಲ್ಲಿ ನಡೆಯಲಿದೆ ಎಂದರು.ಉಪಮೇಯರ್ ಸುನೀತಾ, ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ವರುಣ್ ಚೌಟ, ಲೋಹಿತ್ ಅಮೀನ್, ಗಣೇಶ್, ಪಾಲಿಕೆ ಆಯುಕ್ತ ಆನಂದ್ ಇದ್ದರು.