ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳ
ಮುಧೋಳದ ರೋಟರಿ ಸಂಸ್ಥೆಯು ಗ್ಲೋಬಲ್ ಗ್ರ್ಯಾಂಟ್ ಪಡೆದು ಪಟ್ಟಣದಲ್ಲಿ ದೊಡ್ಡ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು, ಅದಕ್ಕೆ ಬೇಕಾದ ಹಣಕಾಸಿನ ನೆರವನ್ನು ರೋಟರಿ ಫೌಂಡೇಶನ್ ನೀಡಲಿದೆ. ಇನ್ನುಳಿದ ಅರ್ಧ ಮೊತ್ತಕ್ಕೆ ಸ್ಥಳೀಯ ಉದ್ಯಮಿಗಳ ಸಹಾಯ ಪಡೆದುಕೊಳ್ಳಬೇಕೆಂದು ಪಿಡಿಜಿ ರೋಟರಿಯನ್ ಡಾ.ಗಿರೀಶ ಮಸೂರಕರ ಹೇಳಿದರು.ನಗರದ ಡಾ.ಅಂಬೇಡ್ಕರ್ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮುಧೋಳ ತಾಲೂಕು ರೋಟರಿ ಸಂಸ್ಥೆಯ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪ್ರಮಾಣವಚನ ಬೋಧಿಸಿದ ಬಳಿಕ ಮಾತನಾಡಿ, ಸಾಮಾಜಿಕವಾಗಿ ಜನರ ಸೇವೆ ಮಾಡಲು ಈ ರೋಟರಿ ಸಂಸ್ಥೆ ಉತ್ತಮ ವೇದಿಕೆಯಾಗಿದೆ. ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡಲು ಪದಾಧಿಕಾರಿಗಳು ಸದಾ ಪ್ರಯತ್ನಿಸಬೇಕು. ಸ್ವಾಸ್ಥ್ಯ ಸಮಾಜ ನಿರ್ಮಾಣದ ಜೊತೆಗೆ ಅಸಹಾಯಕ ಜನರಿಗೆ ರೋಟರಿ ಸಂಸ್ಥೆಯು ಬೆನ್ನೆಲಬಾಗಬೇಕು. ಈ ಸಂಸ್ಥೆ ದೇಶದಲ್ಲಷ್ಟೇ ಅಲ್ಲದೆ ವಿದೇಶದಲ್ಲಿಯೂ ಸೇವಾ ಕಾರ್ಯ ಕೈಗೊಂಡಿದೆ. ರೋಟರಿ ಕ್ಲಬ್ ನ ಈ ಸಾಲಿನ ಧ್ಯೇಯ ವಾಕ್ಯವಾದ ಯುನೈಟ್ ಫಾರ್ ಗುಡ್ (ಒಳಿತಿಗಾಗಿ ಒಗ್ಗೂಡಿ) ಎಂಬ ಸಾಮಾಜಿಕ ಸಂದೇಶವನ್ನು ತಾವೆಲ್ಲರೂ ಪಾಲಿಸಿಕೊಂಡು ಹೋಗಬೇಕು. ರೋಟರಿ ಕ್ಲಬ್ ಯಾವುದೇ ಸೇವಾಪೇಕ್ಷೆ ಇಲ್ಲದೆ ಸಮಾಜದ ಒಳಿತಿಗಾಗಿ ಸೇವೆ ಮಾಡುತ್ತ ಬಂದಿದೆ. ಇದರಲ್ಲಿ ಆರೋಗ್ಯ, ಶಿಕ್ಷಣ, ಪರಿಸರ, ಸ್ವಚ್ಛತೆ, ಬಾಲಕಿಯರ ಸಬಲೀಕರಣ ಪೋಲಿಯೋ ನಿರ್ಮೂಲನೆ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗ ಹಮ್ಮಿಕೊಂಡಿದೆ ಎಂದರು. ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಹೇಶ ದಂಡೆನ್ನವರ, ಅಸಿಸ್ಟೆಂಟ್ ರೋಟರಿಯನ್ ನಾರಾಯಣ ಹೆರಕಲ್ ಸಾಂದರ್ಭಿಕವಾಗಿ ಮಾತನಾಡಿ, ನೂತನ ಪದಾಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.
ನೂತನ ಅಧ್ಯಕ್ಷ ಮಹಾದೇವ ಯಲಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಎಲ್ಲ ಪದಾಧಿಕಾರಿಗಳ ವಿಶ್ವಾಸ ಪಡೆದುಕೊಂಡು ನನ್ನ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದಾಗಿ ಹೇಳಿದರು.ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಜಿ ಸಾನ್ನಿಧ್ಯವಹಿಸಿ ಹಿತವಚನ ಹೇಳಿದರು. ನೂತನ ನೂತನ ಖಜಾಂಚಿ ಸಿದ್ದಣ್ಣ ಗಣಿ, ಮಾಜಿ ಕಾರ್ಯದರ್ಶಿ ಬಾಬಾಗೌಡ ಪಾಟೀಲ ಉಪಸ್ಥಿತರಿದ್ದರು.
ಕಳೆದ ಸಾಲಿನ ಸೇವಾ ವರದಿ ಪ್ರಸ್ತುತಪಡಿಸಲಾಯಿತು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸದಸ್ಯರಿಗೆ ಗೌರವ ಪತ್ರಗಳನ್ನು ನೀಡಿ, ಗೌರವಿಸಲಾಯಿತು.ಮಾಜಿ ಅಧ್ಯಕ್ಷ ಅಭಿಷೇಕ ತಲಾಠಿ ಸ್ವಾಗತಿಸಿದರು. ಸುಭಾಷ ರಾಮತೀರ್ಥ, ರಾಜಶೇಖರ ಮದರಖಂಡಿ ಮತ್ತು ವಿವೇಕ ಕಕರಡ್ಡಿ ಅತಿಥಿಗಳನ್ನು ಪರಿಚಯಿಸಿದರು. ರೋಟರಿಯನ್ ಗಿರೀಶ ಮೋದಿ, ಕಿರಣ ಟಂಕಸಾಲಿ ಮತ್ತು ವೀಣಾ ರಾಮತೀರ್ಥ ಕಾರ್ಯಕ್ರಮ ನಿರ್ವಹಿಸಿದರು, ನೂತನ ಕಾರ್ಯದರ್ಶಿ ಲಕ್ಷ್ಮಣ ಕಣಬೂರ ವಂದಿಸಿದರು.ರೋಟರಿ ಸಂಸ್ಥೆಯ ಹಾಲಿ ಮತ್ತು ಮಾಜಿ ಪದಾಧಿಕಾರಿಗಳು ಹಾಗೂ ಅಭಿಮಾನಿಗಳು ಇದ್ದರು.