ಸಾರಾಂಶ
ಕನಕಪುರ: ನಗರದ ಪ್ರತಿಷ್ಠಿತ ರೂರಲ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಿರ್ಮಾಣ ಹಂತದಲ್ಲಿದ್ದ ಸ್ವಾಗತ ಕಮಾನು ಕುಸಿದು ಓರ್ವ ಕಾರ್ಮಿಕ ಮೃತಪಟ್ಟು, ಮತ್ತೋರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಿಹಾರ ಮೂಲದ ಮನೋಜ್(45) ಮೃತಪಟ್ಟವರು.ಸೋಮವಾರ ಬೆಳಿಗ್ಗೆ ಸ್ವಾಗತ ಕಮಾನಿಗೆ ಸಿಮೆಂಟ್ ಹಾಕುವ ವೇಳೆ ಕಾಮಗಾರಿಗೆ ಹಾಕಿದ್ದ ಸೆಂಟ್ರಿಂಗ್ ಮರಗಳು ದಿಢೀರನೆ ಕುಸಿದ ಪರಿಣಾಮ ಕೆಲಸದಲ್ಲಿ ನಿರತರಾಗಿದ್ದ ಕಾರ್ಮಿಕರು ಮೇಲಿಂದ ಕೆಳಗೆ ಬಿದ್ದು ಸೆಂಟ್ರಿಂಗ್ ಮರದ ಕೆಳಗೆ ಸಿಲುಕಿಕೊಂಡಿದ್ದ ಇಬ್ಬರು ಕಾರ್ಮಿಕರನ್ನು ಅಗ್ನಿಶಾಮಕ ದಳ ಹಾಗೂ ಪೊಲೀಸರು, ಸಾರ್ವಜನಿಕರ ನೆರವಿನಿಂದ ಜೆಸಿಬಿ ಯಂತ್ರದಿಂದ ಅವಶೇಷಗಳನ್ನು ತೆರವುಗೊಳಿ ಕಾರ್ಮಿಕರನ್ನು ಹೊರ ತರಲಾಯಿತು. ಓರ್ವ ಮೃತಪಟ್ಟು, ಮತ್ತೋರ್ವ ಕೂಲಿ ಕಾರ್ಮಿಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ದಯಾನಂದ ಸಾಗರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರೂರಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಚ್.ಕೆ.ಶ್ರೀಕಂಠು ಹಾಗೂ ಆಡಳಿತ ಮಂಡಳಿ ಸದಸ್ಯರು ಸ್ಥಳಕ್ಕಾಗಮಿಸಿದರು.
ಸಾರ್ವಜನಿಕರ ಆಕ್ರೋಶ:ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಅಭಿವೃದ್ಧಿ ವಿಚಾರವಾಗಿ ಕೋಟ್ಯಂತರ ರುಪಾಯಿಗಳನ್ನು ವೆಚ್ಚ ಮಾಡಿ ನಿರ್ಮಿಸುತ್ತಿರುವ ಕಾಮಗಾರಿ ವೇಳೆ ಯಾವುದೇ ಮುಂಜಾಗ್ರತಾ ಹಾಗೂ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದಿರುವುದು, ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣವಾಗಿದೆ ಗುತ್ತಿಗೆದಾರ ಹಾಗೂ ಕಾಮಗಾರಿ ವ್ಯವಸ್ಥಾಪಕನ ವಿರುದ್ಧ ದೂರು ದಾಖಲಿಸಿ ಮೃತ ಕಾರ್ಮಿಕನ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.