ಪ್ರಗತಿಪರ ಕೃಷಿಕರನ್ನು ಗುರುತಿಸಿ ಪ್ರೋತ್ಸಾಹಿಸಿ: ಶಾಸಕ ಎಚ್.ಟಿ.ಮಂಜು

| Published : Jan 05 2025, 01:30 AM IST

ಸಾರಾಂಶ

ಕೆ.ಆರ್.ಪೇಟೆ ತಾಲೂಕು ವ್ಯಾಪ್ತಿಯಲ್ಲಿ ನೂರಾರು ರೈತರು ಕೃಷಿಯಲ್ಲಿ ಹೊಸ ಹೊಸ ಪ್ರಯೋಗ ಮಾಡಿ ಕೃಷಿಯನ್ನು ಲಾಭದಾಯಕವನ್ನಾಗಿ ಮಾಡಿಕೊಂಡಿದ್ದಾರೆ. ಹೀಗಾಗಿ ಪ್ರಗತಿಪರ ಕೃಷಿಕರನ್ನು ಗುರುತಿಸಿ ಕೃಷಿ ಕ್ಷೇತ್ರದ ರೋಲ್‌ಮಾಡಲ್ ಗಳನ್ನಾಗಿ ಇಲಾಖೆಗಳು ಬಿಂಬಿಸಿ ನೆರೆಹೊರೆಯ ಇತರೆ ಕೃಷಿಕರ ಮೇಲೆ ಪರಿಣಾಮ ಬೀರುವಂತೆ ಮಾಡಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪ್ರಗತಿಪರ ಕೃಷಿಕರನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ರೋಡ್ ಮಾಡಲ್‌ಗಳನ್ನಾಗಿ ಬಿಂಬಿಸಿದರೆ ಕೃಷಿ ಕ್ಷೇತ್ರದ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.

ಪಟ್ಟಣದ ಪಶುಪಾಲನಾ ಮತ್ಯು ವೈದ್ಯಕೀಯ ಸೇವಾ ಕೇಂದ್ರದ ಆವರಣದಲ್ಲಿ ಅವರು ಪಶು ಸಂಗೋಪನಾ ಇಲಾಖೆ ಮತ್ತು ಮೀನುಗಾರಿಕೆ ಇಲಾಖೆಯಿಂದ ಫಲಾನುಭವಿಗಳಿಗೆ ಸಲಕರಣೆ ವಿತರಿಸಿ ಮಾತನಾಡಿದರು.

ತಾಲೂಕು ವ್ಯಾಪ್ತಿಯಲ್ಲಿ ನೂರಾರು ರೈತರು ಕೃಷಿಯಲ್ಲಿ ಹೊಸ ಹೊಸ ಪ್ರಯೋಗ ಮಾಡಿ ಕೃಷಿಯನ್ನು ಲಾಭದಾಯಕವನ್ನಾಗಿ ಮಾಡಿಕೊಂಡಿದ್ದಾರೆ. ಹೀಗಾಗಿ ಪ್ರಗತಿಪರ ಕೃಷಿಕರನ್ನು ಗುರುತಿಸಿ ಕೃಷಿ ಕ್ಷೇತ್ರದ ರೋಲ್‌ಮಾಡಲ್ ಗಳನ್ನಾಗಿ ಇಲಾಖೆಗಳು ಬಿಂಬಿಸಿ ನೆರೆಹೊರೆಯ ಇತರೆ ಕೃಷಿಕರ ಮೇಲೆ ಪರಿಣಾಮ ಬೀರುವಂತೆ ಮಾಡಬೇಕು ಎಂದರು.

ಕೃಷಿ ವಲಯ ಅಭಿವೃದ್ಧಿ ಹೊಂದಬೇಕಾದರೆ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಬೇಕು. ಈ ಐದು ಇಲಾಖೆಗಳು ಪರಸ್ಪರ ಒಗ್ಗೂಡಿ ಕೆಲಸ ಮಾಡಿ ಸರ್ಕಾರದ ಸವಲತ್ತುಗಳು ಮತ್ತು ನವೀನ ತಾಂತ್ರಿಕತೆಯನ್ನು ಕೃಷಿಕರಿಗೆ ತಲುಪಿಸಿ ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡಬೇಕು ಎಂದರು.

ಮೀನುಗಾರಿಕೆ ಇಲಾಖೆ ಕೇವಲ ಮೀನು ಮರಿಗಳನ್ನು ಕೊಡುವುದು, ಸರ್ಕಾರದ ಸಹಾಯ ಧನದ ಮೂಲಕ ಬಂದ ಬಲೆ, ಹರಿಗೋಲು ಮುಂತಾದವುಗಳನ್ನು ಕೊಡುವುದಕ್ಕೆ ಮಾತ್ರ ಸೀಮಿತವಾಗಬಾರದು. ತಾಲೂಕು ವ್ಯಾಪ್ತಿಯಲ್ಲಿ ನೂರಾರು ಕೆರೆ ಕಟ್ಟೆಗಳಿವೆ. ಕೆರೆ ಕಟ್ಟೆಗಳಿರುವ ಭಾಗದ ಯುವಕರಿಗೆ ಅರಿವು ಮೂಡಿಸಿ ಮೀನುಗಾರಿಕೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಹೇಮಾವತಿ ನದಿ ಉಗಮ ಸ್ಥಾನದಿಂದ ಅದು ಕಾವೇರಿಯಲ್ಲಿ ಲೀನವಾಗುವವರೆಗೂ ಒಬ್ಬನೇ ವ್ಯಕ್ತಿಗೆ ಮೀನುಗಾರಿಕೆ ಗುತ್ತಿಗೆ ನೀಡಲಾಗುತ್ತಿತ್ತು. ಈಗ ಅದನ್ನು ತಪ್ಪಿಸಲಾಗಿದೆ. ನದಿ ಪ್ರದೇಶದಲ್ಲೂ ಗ್ರಾಮೀಣ ಯುವಕರಿಗೆ ಮೀನುಗಾರಿಕೆ ತರಬೇತಿ ನೀಡಿ ಮೀನುಗಾರಿಕೆ ಉದ್ಯಮವಾಗಿ ಪರಿವರ್ತಿಸುವ ಕೆಲಸವನ್ನು ಮೀನುಗಾರಿಕೆ ಇಲಖೆ ಮಾಡಬೇಕು ಎಂದರು.

ಪಶುಸಂಗೋಪನೆ ಈಗ ರೈತರಿಗೆ ಉಪ ಕಸುಬಾಗಿ ಉಳಿಯದೆ ಬದುಕುವ ಪ್ರಮುಖ ಕಸುಬಾಗಿ ಬೆಳೆದಿದೆ. ತಾಲೂಕಿನಾದ್ಯಂತ ಸುಮಾರು 22 ಸಾವಿರಕ್ಕೂ ಅಧಿಕ ರೈತರು ಹೈನುಗಾರಿಕೆಯನ್ನೇ ಮೂಲ ಕಸುಬನ್ನಾಗಿ ಮಾಡಿಕೊಂಡಿದ್ದಾರೆ. ಹೈನುಗಾರಿಕೆಯ ಜೊತೆಗೆ ಹಂದಿ ಸಾಕಣಿಕೆ, ಕೋಳಿ ಸಾಕಣಿಕೆ, ಮೇಕೆ ಸಾಕಣಿಕೆ ಮುಂತಾದವುಗಳಿಗೂ ಪಶು ಇಲಾಖೆ ಹೆಚ್ಚು ಒತ್ತು ನೀಡಬೇಕು ಎಂದರು.

ಇದೇ ವೇಳೆ ಪಶು ಇಲಾಖೆಯಿಂದ 21ನೇ ರಾಸುಗಳ ಗಣತಿ ಪ್ರಕ್ರಿಯೆಗೆ ಶಾಸಕರು ಚಾಲನೆ ನೀಡಿದರು. ತಾಲೂಕು ಪಶು ವೈದ್ಯಾಧಿಕಾರಿ ಡಾ.ಎಚ್.ಎಸ್.ದೇವರಾಜು ಮಾತನಾಡಿದರು. ಪಶು ಇಲಾಖೆಯಿಂದ ಅರ್ಹ ಫಲಾನುಭವಿಗಳಿಗೆ ಮೇವು ವಿದ್ಯುತ್ ಚಾಲಿತ ಮೇವು ಕತ್ತರಿಸುವ ಯಂತ್ರ, ಮೀನುಗಾರಿಕೆ ಇಲಾಖೆಯ ಬಲೆ, ಹರಿಗೋಲಿ ಮತ್ತಿತರ ಪರಿಕರಗಳನ್ನು ಶಾಸಕ ಎಚ್.ಟಿ.ಮಂಜು ವಿತರಿಸಿದರು.

ಈ ವೇಳೆ ಪಶು ಪಾಲನಾ ಇಲಾಖೆ ಆಡಳಿತ ವೈದ್ಯಾಧಿಕಾರಿ ಡಾ.ಎಚ್.ಎಸ್.ದೇವರಾಜು, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಜಗದೀಶ್, ಗಂಗಾ ಪರಮೇಶ್ವರಿ ಮೀನುಗಾರರ ಸಂಘದ ಅಧ್ಯಕ್ಷ ಶೇಖರ್, ಕಾರ್ಯದರ್ಶಿ ರಾಜು, ನಿರ್ದೇಶಕರಾದ ಸಿದ್ದರಾಜು, ನಂಜುಂಡಪ್ಪ ಸೇರಿದಂತೆ ಹಲವರಿದ್ದರು.