ಕೊಳ್ಳೇಗಾಲ ನಗರಸಭೆಗೆ 5 ಮಂದಿ ನಾಮನಿರ್ದೇಶನಕ್ಕೆ ಶಿಫಾರಸು

| Published : Nov 17 2024, 01:19 AM IST

ಸಾರಾಂಶ

ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮಂಜುನಾಥ್ ಅವರು, ಕೊಳ್ಳೇಗಾಲ ನಗರಸಭೆಗೆ ನೇಮಕಗೊಳ್ಳಲಿರುವ 5 ಮಂದಿ ಗುರುತಿಸಿಕೊಂಡಿರುವ ಕ್ಷೇತ್ರಗಳ ಬಗ್ಗೆ ಸಮಗ್ರ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.

ಎನ್ ನಾಗೇಂದ್ರಸ್ವಾಮಿ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ನಗರಸಭೆಗೆ ಐದು ಮಂದಿ ನಾಮನಿರ್ದೇಶನ ಸದಸ್ಯರನ್ನು ನೇಮಿಸಿ ಆದೇಶಿಸುವಂತೆ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ರಾಜ್ಯ ಸರ್ಕಾರಕ್ಕೆ ಶಿಫಾರಸು ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ಪರಿಶೀಲನೆಗೆ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮಂಜುನಾಥ್ ಅವರು, ನೇಮಕಗೊಳ್ಳಲಿರುವ 5 ಮಂದಿ ಗುರುತಿಸಿಕೊಂಡಿರುವ ಕ್ಷೇತ್ರಗಳ ಬಗ್ಗೆ ಸಮಗ್ರ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.

ನಗರಸಭೆ ಮಾಜಿ ಸದಸ್ಯ ಶಿವಮಲ್ಲು (ಕುರುಬ), ಮಾಜಿ ನಾಮ ನಿರ್ದೇಶನ ಸದಸ್ಯ ನರಸಿಂಹನ್ (ಬ್ರಾಹ್ಮಣ), ಶಾಸಕರ ಕಟ್ಟಾ ಬೆಂಬಲಿಗ ಬಸ್ತಿಪುರ ಸ್ವಾಮಿ ನಂಜಪ್ಪ (ದಲಿತ), ನೂರ್ ಮೊಹಲ್ಲಾದ ಅನ್ಸರ್ ಬೇಗ್ (ಮುಸ್ಲಿಂ), ಬೀಮಾನಗರದ ಕ್ರೈಸ್ತ ಮುಖಂಡ ಜೆ.ದೇವಾನಂದ್ ಅವರನ್ನು ನೇಮಿಕಗೊಳಿಸುವಂತೆ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೆ ಶಿಫಾರಸು ಪತ್ರ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ 5 ಮಂದಿ ಮೊದಲಿಗೆ ಪಟ್ಟಣದ (ನಗರ ಪ್ರದೇಶ) ವಾಸಿಗಳೇ, ಸಮಾಜ ಮುಖಿ ಸೇವಕರೆ, ನಗರಸಭೆಯ ಕಾರ್ಯವೈಖರಿ ಬಗ್ಗೆ ತಿಳಿದಿರುವರೇ, ಇವರೆಲ್ಲರೂ ಆರೋಗ್ಯ ಶಿಕ್ಷಣ, ನಗರ ಯೋಜನೆ ಮತ್ತು ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಬಗ್ಗೆ ಅಗತ್ಯ ಮಾಹಿತಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದು ಈ ಸಂಬಂಧ ಜಿಲ್ಲಾಧಿಕಾರಿ ಪರಿಶೀಲಿಸಿ ನಗರಾಭಿವೃದ್ಧಿ ಇಲಾಖೆಗೆ ವರದಿ ಶಿಫಾರಸು ಬಳಿಕ ಐದು ಮಂದಿ ನೇಮಕಾತಿ ಅಧಿಕೃತ ಆದೇಶ ಹೊರ ಬೀರಳಿದೆ.

ಶಾಸಕರು ಸೂಚಿಸಿರುವ 5 ಮಂದಿ ಪೈಕಿ ನರಸಿಂಹನ್ ಅವರು ಈಗಾಗಲೇ 2 ಬಾರಿ ನಾಮನಿರ್ದೇಶನ ಸದಸ್ಯರಾಗಿ ನೇಮಕಗೊಂಡಿದ್ದು ಈ ಬಾರಿ ಪುನಃ ಶಿಫಾರಸು ಹಿನ್ನೆಲೆ ನೇಮಕಗೊಂಡರೆ ಮೂರು ಬಾರಿ ಅವರು ನಾಮನಿರ್ದೇಶನ ಸದಸ್ಯರಾದಂತಾಗುತ್ತದೆ. ಜಿ.ಎನ್.ನಂಜುಂಡಸ್ವಾಮಿ, ಎಸ್.ಜಯಣ್ಣ ಅವರು ಶಾಸಕರಾಗಿದ್ದ ವೇಳೆ ಪುರಸಭೆ, ನಗರಸಭೆ ಸದಸ್ಯರಾಗಿ ನೇಮಕಗೊಂಡಿದ್ದು ಈ ಬಾರಿ ಶಾಸಕ ಎ.ಆರ್.ಕೃಷ್ಣಮೂರ್ತಿ ಶಿಫಾರಸಿನ ಹಿನ್ನೆಲೆ ಮೂರು ಬಾರಿಯೂ ನೇಮಕಗೊಂಡಿದ್ದಾರೆ ಎನ್ನಲಾಗಿದೆ.

ಅದೇ ರೀತಿಯಲ್ಲಿ ಶಿವಮಲ್ಲು ಪತ್ನಿ ಮಂಗಳಗೌರಿ ಅವರು 2 ಬಾರಿ ನಗರಸಭೆ ಸದಸ್ಯರಾಗಿ, ಒಮ್ಮೆ ಅಧ್ಯಕ್ಷರಾಗಿದ್ದರು, ಶಿವಮಲ್ಲು ಮಾತ್ರ ಒಮ್ಮೆ ಸದಸ್ಯರಾಗಿದ್ದರು. ಕಳೆದ ಬಾರಿ ಶಿವಮಲ್ಲು ಅವರ ಪತ್ನಿಗೆ ನಗರಸಭೆಯಿಂದ ಕಾಂಗ್ರೆಸ್ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಅವರಿಗೆ ಶಾಸಕರು ಶಿಫಾರಸು ಮಾಡಿದ್ದಾರೆ. ಉಳಿದಂತೆ ಅನ್ಸರ್ ಬೇಗ್ ಮತ್ತು ಸ್ವಾಮಿ ನಂಜಪ್ಪ ಅವರು ಶಾಸಕ ಕೃಷ್ಣಮೂರ್ತಿ ಅವರಿಗೆ ನಿಷ್ಟರು.

ಶಾಸಕರು ಯಾವುದೆ ಪಕ್ಷದಲ್ಲಿರಲಿ, ಯಾವುದೆ ಸಭೆ, ಸಮಾರಂಭಗಳಲ್ಲಿ ಕಾಣಿಸಿಕೊಂಡರು ಸಹಾ ಅವರ ಜೊತೆ ಗುರುತಿಸಿಕೊಳ್ಳುವ ಮೂಲಕ ಹಲವು ವರುಷಗಳ ಕಾಲ ಗುರುತಿಸಿಕೊಂಡು ವ್ಯಕ್ತಿ ನಿಷ್ಟೆ ಪ್ರದರ್ಶಿಸಿದ್ದರು. ಅದರ ಫಲವಾಗಿ ಇಬ್ಬರಿಗೂ ಸಹಾ ನಾಮ ನಿರ್ದೇಶನ ಸದಸ್ಯ ಸ್ಥಾನಕ್ಕೆ ಶಿಫಾರಸ್ಸು ಮಾಡಿದ್ದು, ಈ ಶಿಫಾರಸು ಪತ್ರದಲ್ಲಿ ಶಾಸಕರು ತಮ್ಮ ಬೆಂಬಲಿಗರಿಗೆ ಹೆಚ್ಚು ಮನ್ನಣೆ ನೀಡಿರುವ ಕುರಿತು ಚರ್ಚೆಯಾಗುತ್ತಿದ್ದು ನೇಮಕಾತಿ ಆದೇಶ ಶೀಘ್ರ ಹೊರಬೀಳುವ ಸಾಧ್ಯತೆ ಇದೆ.

ನಾನು ಶಾಸಕ ಕೃಷ್ಣಮೂರ್ತಿ ಅವರಿಗೆ ನಿಷ್ಠರಾಗಿದ್ದೆ, ಹಲವು ವರುಷಗಳ ಕಾಲ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡದ್ದ ಪಕ್ಷನಿಷ್ಠೆ ಮತ್ತು ವ್ಯಕ್ತಿ ನಿಷ್ಠೆ ಹಿನ್ನೆಲೆ ನನಗೆ ನಗರಸಭೆ ನಾಮನಿರ್ದೇಶನ ಸದಸ್ಯ ಸ್ಥಾನಕ್ಕಾಗಿ ಶಾಸಕರು ಶಿಫಾರಸು ಪತ್ರ ನೀಡಿರುವುದು ಸಂತಸ ತಂದಿದೆ ಎನ್ನುತ್ತಾರೆ ನಂಜಪ್ಪ.