ನಿಯಮ ಉಲ್ಲಂಘಿಸಿದ ಅಧಿಕಾರಿಗಳ ಮೇಲೆ ಶಿಸ್ತುಕ್ರಮಕ್ಕೆ ಶಿಫಾರಸು

| Published : Dec 19 2023, 01:45 AM IST

ನಿಯಮ ಉಲ್ಲಂಘಿಸಿದ ಅಧಿಕಾರಿಗಳ ಮೇಲೆ ಶಿಸ್ತುಕ್ರಮಕ್ಕೆ ಶಿಫಾರಸು
Share this Article
  • FB
  • TW
  • Linkdin
  • Email

ಸಾರಾಂಶ

ಗಜೇಂದ್ರಗಡ ಪುರಸಭೆ ಸಭಾ ಭವನದಲ್ಲಿ ಸೋಮವಾರ ಸ್ಥಾಯಿ ಸಮಿತಿ ಚೇರಮನ್‌ ಕನಕಪ್ಪ ಅರಳಿಗಿಡದ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಅಭಿವೃದ್ಧಿಪಡಿಸದ ಬಡಾವಣೆಗಳ ಕೆಲ ನಿವೇಶನಗಳ ಉತಾರಗಳನ್ನು ನೀಡಬಾರದು ಎಂಬ ನಿಯಮಗಳನ್ನು ಗಾಳಿಗೆ ತೂರಿ ಲಂಗು, ಲಗಾಮು ಇಲ್ಲದೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುತ್ತೇನೆ ಎಂದು ಅವರು ಎಚ್ಚರಿಸಿದರು.

ಪುರಸಭೆ ಸಭಾಭವನದಲ್ಲಿ ನಡೆದ ಸಭೆ

ಗಜೇಂದ್ರಗಡ: ಅಭಿವೃದ್ಧಿಪಡಿಸದ ಬಡಾವಣೆಗಳ ಕೆಲ ನಿವೇಶನಗಳ ಉತಾರಗಳನ್ನು ನೀಡಬಾರದು ಎಂಬ ನಿಯಮಗಳನ್ನು ಗಾಳಿಗೆ ತೂರಿ ಲಂಗು, ಲಗಾಮು ಇಲ್ಲದೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುತ್ತೇನೆ ಎಂದು ಪುರಸಭೆ ಸ್ಥಾಯಿ ಸಮಿತಿ ಚೇರಮನ್‌ ಕನಕಪ್ಪ ಅರಳಿಗಿಡದ ಹೇಳಿದರು.ಸ್ಥಳೀಯ ಪುರಸಭೆ ಸಭಾ ಭವನದಲ್ಲಿ ಸೋಮವಾರ ಸ್ಥಾಯಿ ಸಮಿತಿ ಚೇರಮನ್‌ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪುರಸಭೆ ಕೆಲ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಪರಿಯಿದು.

ಸಾರ್ವಜನಿಕರ ಹಿತವನ್ನು ಕಾಪಾಡಬೇಕಿರುವುದು ಆಡಳಿತ ಹಾಗೂ ಅಧಿಕಾರಿಗಳ ಕರ್ತವ್ಯವಾಗಿದೆ. ಆದರೆ ಕೆಲ ಅಧಿಕಾರಿಗಳು ಕಾನೂನಿನ ನಿಯಮಗಳನ್ನು ಗಾಳಿಗೆ ತೂರಿ ಕೆಲಸ ನಿರ್ವಹಿಸುತ್ತಿದ್ದೀರಿ. ಪಟ್ಟಣದ ದೇಗಿನಾಳ ಪ್ಲಾಟ್‌ನಲ್ಲಿ ನಿವೇಶನಗಳನ್ನು ಅಭಿವೃದ್ಧಿ ಪಡಿಸದ ಹಿನ್ನೆಲೆ ಈ ಹಿಂದಿನ ಸಾಮಾನ್ಯ ಸಭೆಯಲ್ಲಿ ಠರಾವು ಪಾಸ್ ಮಾಡಿ ಪುರಸಭೆಯಲ್ಲಿ ೧೦ ಉತಾರಗಳನ್ನು ತಡೆಹಿಡಿಯಲಾಗಿತ್ತು. ಅಲ್ಲದೆ ಬಡಾವಣೆಗಳು ಅಭಿವೃದ್ಧಿಯಾಗದಿದಿದ್ದರೆ ಅಂತಹ ಬಡಾವಣೆಗಳಲ್ಲಿನ ಕೆಲ ಉತಾರಗಳನ್ನು ತಡೆಹಿಡಿದು ಬಡಾವಣೆಗಳನ್ನು ಅಭಿವೃದ್ಧಿಪಡಿಸಿದ ಬಳಿಕ ಉತಾರಗಳನ್ನು ವಿತರಿಸಬೇಕು ಎಂಬ ಸ್ಪಷ್ಟ ಕಾನೂನು ಇದ್ದರೂ ಸಹ ಅಧಿಕಾರಿಗಳು ನಿಯಮ ಹಾಗೂ ಆಡಳಿತ ಮಂಡಳಿಯ ಠರಾವು ಸಹ ಲೆಕ್ಕಿಸದೆ ಉತಾರಗಳನ್ನು ನೀಡುತ್ತೀರಿ ಎಂದರೆ ಹೇಗೆ ಎಂದು ಅಸಮಾಧನ ವ್ಯಕ್ತಪಡಿಸಿದ ಅವರು, ನೀವು ಎಲ್ಲ ಉತಾರಗಳನ್ನು ನೀಡಿದರೆ ಬಡಾವಣೆ ನಿರ್ಮಾಣ ಮಾಡುವವರು ಅಭಿವೃದ್ಧಿ ಏಕೆ ಮಾಡುತ್ತಾರೆ. ಪರಿಣಾಮ ಆ ಬಡಾವಣೆಯಲ್ಲಿ ನಿವೇಶನ ಖರೀದಿಸಿ ಜನರು ಪುರಸಭೆಗೆ ಬಂದು ಬಡಾವಣೆಯಲ್ಲಿ ರಸ್ತೆ ಸೇರಿ ಇತರ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಲು ಆರಂಭಿಸುತ್ತಾರೆ. ಆಗ ಜನರಿಗೆ ನಾವೇನು ಉತ್ತರ ನೀಡಬೇಕು. ಹೀಗಾಗಿ ಕಾಯ್ದಿರಿಸಿದ್ದ ಉತಾರಗಳನ್ನು ಮರಳಿ ಪಡೆವ ಕೆಲಸವನ್ನು ಅಧಿಕಾರಿಗಳು ಮಾಡದಿದ್ದರೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಎಚ್ಚರಿಸಿದರು.

ಪುರಸಭೆ ಸದಸ್ಯೆ ವಿಜಯಾ ಮಳಗಿ ಸರ್ಕಾರಿ ಶಾಲೆ ನಂ.೪ರ ಶಾಲಾ ಕೊಠಡಿಗಳಲ್ಲಿ ಹಾಗೂ ಮೈದಾನದಲ್ಲಿ ಚರಂಡಿ ನೀರು ಬರುತ್ತದೆ. ಪರಿಣಾಮ ವಿದ್ಯಾರ್ಥಿಗಳು ಹೇಗೆ ವಿದ್ಯಾಭ್ಯಾಸ ಮಾಡಬೇಕು ಎಂದು ಪ್ರಶ್ನಿಸಿದಾಗ, ಪುರಸಭೆ ಅಧಿಕಾರಿಗಳು ದುರಸ್ತಿ ಮಾಡಲು ಅಂದಾಜು ರು.೧೦ ಲಕ್ಷ ಬೇಕು ಎಂದಾಗ ಕೆಲ ಪುರಸಭೆ ಸದಸ್ಯರು ರು.೧೦ ಸಾವಿರ ಹಣ ಇಲ್ಲ ಎನ್ನುವ ಅಧಿಕಾರಿಗಳು ಇಷ್ಟು ದುಡ್ಡು ಎಲ್ಲಿಂದ ತರುತ್ತಾರೆ ಎಂಬ ದಾಟಿಯಲ್ಲಿ ಮಾತನಾಡಿದಾಗ ನಾನೇ ರು.೧೦ ಲಕ್ಷ ನೀಡುವೆ ದುರಸ್ತಿ ಮಾಡಿ ಎಂದಾಗ ನೀವು ನೀಡುತ್ತೀರಾ ಎಂದು ಸದಸ್ಯರು ಆಶ್ಚರ್ಯದಿಂದ ಪ್ರಶ್ನಿಸಿದಾಗ ಹೌದು ನೀಡುವೆ ಶಾಲಾ ಮಕ್ಕಳಿಗೆ ಅನುಕೂಲವಾಗಲಿ ಎಂದರು.

ಪುರಸಭೆ ಸದಸ್ಯ ಮುದಿಯಪ್ಪ ಮುಧೋಳ ಪಟ್ಟಣದಲ್ಲಿ ಈ ಹಿಂದೆ ಶಾಸಕ ಕಳಕಪ್ಪ ಬಂಡಿ ಅವರು ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟಿಸಿದರು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವುಗಳ ಬಾಗಿಲು ಹಾಕಿವೆ. ಅದನ್ನು ಸರಿಪಡಿಸಿ ಎಂದಾಗ ಪುರಸಭೆ ಅಧಿಕಾರಿ ಪಿ.ಎನ್.ದೊಡ್ಡಮನಿ, ನಿರ್ವಹಣೆ ಮಾಡಲು ಯಾರು ಮುಂದೆ ಬರುತ್ತಿಲ್ಲ. ಈಗಾಗಲೇ ಪಟ್ಟಣದಲ್ಲಿ ಹೊಳೆ ನೀರು ಪೂರೈಕೆಯಾಗುತ್ತಿದೆ. ಹೊಳೆ ನೀರು ಶುದ್ಧೀಕರಣ ಆಗಿರುತ್ತದೆ. ಅದನ್ನು ಮತ್ತೆ ಶುದ್ಧೀಕರಿಸಲು ಬರುವುದಿಲ್ಲ ಎಂದರು.

ಪಟ್ಟಣದಲ್ಲಿ ನಲ್ಲಿ ಮೂಲಕ ಪೂರೈಸುತ್ತಿರುವ ನೀರು ಬಹಳಷ್ಟು ಪೋಲಾಗುತ್ತಿದೆ. ಮಿತವ್ಯಯ ಬಳಸಲು ಜಾಗೃತಿ ಮೂಡಿಸಬೇಕಿದೆ.

ಪಟ್ಟಣದ ಎಲ್ಲ ಚರಂಡಿಗಳಿಗೆ ಪೌಡರ್ ಹಾಕಿಸಿ, ಫಾಗಿಂಗ್ ಮಾಡಿಸಿ ಎಂದು ಆಗ್ರಹದ ಜತೆಗೆ ೨೨ನೇ ವಾರ್ಡಿನ ಅಂಗನವಾಡಿಗೆ ನೀರಿನ ವ್ಯವಸ್ಥೆಯಿಲ್ಲ ಸೇರಿ ಅನೇಕ ದೂರುಗಳ ಪಟ್ಟಿಯನ್ನು ಪುರಸಭೆ ಸದಸ್ಯರಾದ ಲಕ್ಷ್ಮಿ ಮುಧೋಳ, ಶರಣಪ್ಪ ಉಪ್ಪಿನಬೆಟಗೇರಿ, ಕೌಸರಬಾನು ಹುನಗುಂದ, ದೀಪಾ ಗೌಡರ ಸಭೆಯಲ್ಲಿ ಪ್ರಸ್ತಾಪಿಸಿದರು.