ರಾಜ್ಯದಲ್ಲಿ ‘ಬಿಸಿಲು’ ಏಪ್ರಿಲ್‌ನಲ್ಲಿ ದಾಖಲೆ : 44.5 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ

| N/A | Published : Apr 22 2025, 01:45 AM IST / Updated: Apr 22 2025, 08:56 AM IST

ರಾಜ್ಯದಲ್ಲಿ ‘ಬಿಸಿಲು’ ಏಪ್ರಿಲ್‌ನಲ್ಲಿ ದಾಖಲೆ : 44.5 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ
Share this Article
  • FB
  • TW
  • Linkdin
  • Email

ಸಾರಾಂಶ

ಕಲಬುರಗಿ, ಬೀದರ್‌ ಜಿಲ್ಲೆಗಳಲ್ಲಿ ಸೋಮವಾರ ಈ ಬೇಸಿಗೆ ಕಾಲದ ಅತ್ಯಧಿಕ 44.5 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಕಲ್ಯಾಣ ಕರ್ನಾಟಕದ ಈ ಉಭಯ ಜಿಲ್ಲೆಗಳಲ್ಲಿ ಬಿಸಿಗಾಳಿ, ನಿರಂತರ ಉಷ್ಣ ಅಲೆಗಳಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

 ಕಲಬುರಗಿ :  ಕಲಬುರಗಿ, ಬೀದರ್‌ ಜಿಲ್ಲೆಗಳಲ್ಲಿ ಸೋಮವಾರ ಈ ಬೇಸಿಗೆ ಕಾಲದ ಅತ್ಯಧಿಕ 44.5 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಕಲ್ಯಾಣ ಕರ್ನಾಟಕದ ಈ ಉಭಯ ಜಿಲ್ಲೆಗಳಲ್ಲಿ ಬಿಸಿಗಾಳಿ, ನಿರಂತರ ಉಷ್ಣ ಅಲೆಗಳಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಇದಲ್ಲದೆ ಕಲ್ಯಾಣ ಕರ್ನಾಟಕ ಜಿಲ್ಲೆಗಳಾದ ಯಾದಗಿರಿಯಲ್ಲಿ 43.5, ರಾಯಚೂರಲ್ಲಿ 42. 6, ಬಳ್ಳಾರಿಯಲ್ಲಿ 40.5 ಹಾಗೂ ಬೆಳಗಾವಿ ವಿಭಾಗದಡಿ ಬರುವ ವಿಜಯಪುರ 42.1, ಬೆಳಗಾವಿ 40. 6, ಬಾಗಲಕೋಟೆ 40. 5 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗದೆ.

ಸಾಮಾನ್ಯವಾಗಿ ಏಪ್ರಿಲ್‌ ತಿಂಗಳಿನಲ್ಲಿ 40 ಅಥವಾ 41 ಡಿಗ್ರಿ ಸೆಲ್ಸಿಯಸ್ ತಾಮಾನ ಇರುತ್ತಿತ್ತು. ಕಳೆದ ವರ್ಷ ಇದೇ ದಿನ 40.4 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. ಮೇ ತಿಂಗಳ ಕೆಲವು ದಿನಗಳಲ್ಲಿ ಮಾತ್ರ 43 ಅಥವಾ 44 ಡಿಗ್ರಿಗೆ ತಾಪಮಾನ ಏರಿಕೆಯಾಗುಗುವುದು ಸಾಮಾನ್ಯ. ಆದರೆ 2018ರಲ್ಲಿ ಮಾತ್ರ ಈ ದಿನ 44.5 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು. ಈಗ ಬರೋಬ್ಬರಿ 7 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಏಪ್ರಿಲ್‌ ತಿಂಗಳಿನಲ್ಲೇ ತಾಪಮಾನ 44 ಡಿಗ್ರಿ ಸೆಲ್ಸಿಯಸ್‌ ದಾಟಿರುವುದು ಇಲ್ಲಿನ ಜನರಿಗೆ ದಿಗ್ಭ್ರಮೆ ಮೂಡಿಸಿದೆ. ಕಳೆದ 3ದಿನದಿಂದ ಕಲಬುರಗಿಯಲ್ಲಿ ನಿರಂತರ 43. 5ರಷ್ಟು ಉಷ್ಣತೆ ದಾಖಲಾಗಿತ್ತು. ಇದಾದ ನಂತರ ಅತ್ಯಧಿಕ 44. 5ರಷ್ಟು ತಾಪಮಾನ ದಾಖಲಾಗಿರುವುದರಿಂದ ಉಷ್ಣಗಾಳಿಗೆ ಜಿಲ್ಲೆಯಾದ್ಯಂತ ಜನ, ಜಾನುವಾರು ತತ್ತರಿಸಿ ಹೋಗಿದ್ದಾರೆ.

ಬೆಳಗ್ಗೆ 7ಗಂಟೆಯಿಂದಲೇ ಬಿಸಿಲಿನ ತಾಪ ಜನರನ್ನು ತಿಕ್ಕಿಮುಕ್ಕುತ್ತಿದೆ. ಇದರಿಂದಾಗಿ ರಸ್ತೆಯಲ್ಲಿ ವಾಹನಗಳ ಓಡಾಟ ಕೂಡಾ ತಗ್ಗಿದೆ. ಮಧ್ಯಾಹ್ನ 11 ರಿಂದ ಸಂಜೆ 6 ಗಂಟೆಯವರೆಗೂ ರಸ್ತೆಗಳು ನಿರ್ಜನವಾಗುತ್ತಿವೆ. ಬಿಸಿ ಗಾಳಿಗೆ ಹೆದರಿ ಜನ ಮನೆ ಬಿಟ್ಟು ಹೊರಗೆ ಬರಲು ಅಂಜುತ್ತಿದ್ದಾರೆ.

ಕಲಬುರಗಿಯಲ್ಲಂತೂ ಜನಜೀವನ ಬಿಸಿಲಿಗೆ ತತ್ತರಿಸಿ ಹೋಗಿದೆ. ಪ್ರಮುಖ ರಸ್ತೆ, ವೃತ್ತಗಳಲ್ಲಿರುವ ಸಿಗ್ನಲ್‌ ಲೈಟ್ ಬಿಸಿಲೇರುತ್ತಿದ್ದಂತೆಯೇ ನಿಲುಗಡೆ ಮಾಡಲಾಗುತ್ತಿದೆ. ಏಕೆಂದರೆ ರಸ್ತೆಗಳಲ್ಲಿ ನಿಂತು ಸಿಗ್ನಲ್‌ ಪಾಲಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಸಂಚಾರ ದಟ್ಟಣೆ ಇರುವ ರಿಂಗ್‌ ರಸ್ತೆ ರಾಮಮಂದಿರ, ಖರ್ಗೆ ಬಂಕ್‌, ಹಾಗರಗಾ ಕ್ರಾಸ್‌ ಸೇರಿ ಕೆಲವು ಪ್ರದೇಶಗಳಲ್ಲಿ ಮಾತ್ರ ಸಿಗ್ನಲ್‌ ಲೈಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಬಿಸಿಲಿನಿಂದ ತಪ್ಪಿಸಿಕೊಳ್ಳಲು ಹಸಿರು ಪರದೆ ನೆರಳ ಹೊದಿಕೆ ಹಾಕಬೇಕು ಎಂದು ಸಾರ್ವಜನಿಕರ ಆಗ್ರಹ ಕೇಳಿ ಬರುತ್ತಿದೆ.