ಸಾರಾಂಶ
ರಾಜ್ಯದಲ್ಲಿ ಅತಿ ವೇಗವಾಗಿ ತಾಪಮಾನ ಏರಿಕೆಯಾಗುತ್ತಿದ್ದು, ರಾಯಚೂರು, ಮಂಗಳೂರು ನಂತರ ಬುಧವಾರ ಕಾರವಾರ ತಾಲೂಕಿನ ಸಾವಂತವಾಡದಲ್ಲಿ 42.9ಡಿಗ್ರಿ ಸೆಲ್ಸಿಯಸ್ ರಾಜ್ಯದಲ್ಲೇ ಅತಿ ಹೆಚ್ಚು ತಾಪಮಾನ ದಾಖಲಾಗಿದೆ.
ಕಲಬುರಗಿ : ರಾಜ್ಯದಲ್ಲಿ ಅತಿ ವೇಗವಾಗಿ ತಾಪಮಾನ ಏರಿಕೆಯಾಗುತ್ತಿದ್ದು, ರಾಯಚೂರು, ಮಂಗಳೂರು ನಂತರ ಬುಧವಾರ ಕಾರವಾರ ತಾಲೂಕಿನ ಸಾವಂತವಾಡದಲ್ಲಿ 42.9ಡಿಗ್ರಿ ಸೆಲ್ಸಿಯಸ್ ರಾಜ್ಯದಲ್ಲೇ ಅತಿ ಹೆಚ್ಚು ತಾಪಮಾನ ದಾಖಲಾಗಿದೆ.
ಕಳೆದ 10 ವರ್ಷಗಳಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ತಾಪಮಾನ ಏರಿಕೆ ಆಗಿರಲಿಲ್ಲ. ಮೇ ಎರಡನೇ ಅಥವಾ ಮೂರನೇ ವಾರದ ಅವಧಿಯಲ್ಲಿ 37 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ತಾಪಮಾನ ಇರುತ್ತಿತ್ತು. ಇದೇ ವೇಳೆಗೆ ಮಳೆ ಸುರಿದು ತಂಪೆರೆಯುತ್ತಿತ್ತು. ಆದರೆ ಈ ಭಾರಿ ಉತ್ತರ ಕರ್ನಾಟಕದ ಕಲಬುರಗಿ, ಬೀದರ್, ರಾಯಚೂರು
ಜಿಲ್ಲೆಗಿಂತಲೂ ಹೆಚ್ಚಿನ ತಾಪಮಾನ ಉತ್ತರ ಕನ್ನಡದಲ್ಲಿ ಕಂಡು ಬಂದಿದ್ದು ಇಲ್ಲಿಯ ಜನರನ್ನು ಕಂಗೆಡಿಸಿದೆ. ಆತಂಕಕ್ಕೂ ಕಾರಣವಾಗಿದೆ.
ಇದೇ ಅವಧಿಯಲ್ಲಿ ಕಾರವಾರ ತಾಲೂಕಿನ ಕಿನ್ನರದಲ್ಲಿ ೪೧.೮, ಕುಮಟಾ ತಾಲೂಕಿನ ಮಿರ್ಜಾನನಲ್ಲಿ 40.7, ಮುಂಡಗೋಡ ತಾಲೂಕಿನ ಪಾಳಾದಲ್ಲಿ 40, ಅಂಕೋಲಾದಲ್ಲಿ 40.5, ಅವರ್ಸಾದಲ್ಲಿ 40.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಜನರು ಮನೆಯಿಂದ ಹೊರ ಬರಲೂ ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ತಿಂಗಳು ಫೆಬ್ರವರಿ ಮಾಸಾಂತ್ಯದಲ್ಲಿ ಹೆಚ್ಚು ತಾಪಮಾನ ಹಾಗೂ ಬಿಸಿ ಗಾಳಿಯ ಸಮಸ್ಯೆ ಎದುರಿಸಿದ್ದ ಇಲ್ಲಿನ ಜನ ಈಗಿನ ಬಿಸಿಲು ಕಂಡು ದಿಗಿಲುಗೊಂಡಿದ್ದಾರೆ.
ಇದೇ ವೇಳೆ ಬುಧವಾರ ಕಲಬುರಗಿ ಜಿಲ್ಲೆಯಲ್ಲಿ 38 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಪಕ್ಕದ ಬೀದರ್, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯಲ್ಲಿ ತಾಪಮಾನ 38 ರಿಂದ 39 ಡಿಗ್ರಿ ಸೆಲ್ಸಿಯಸ್ ಒಳಗಡೆಯೇ ಇತ್ತು. ಕಳೆದ 3 ದಿನಗಳ ಹಿಂದೆ ರಾಯಚೂರಲ್ಲಿ ತಾಪಮಾನ 41 ಡಿಗ್ರಿ ದಾಟಿದ್ದರೆ ಕಲಬುರಗಿಯಲ್ಲಿ 40 ಡಿಗ್ರಿ ದಾಟಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.