ಉತ್ತರ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲೆಯ ಎಲ್ಲ ತಾಲೂಕುಗಳ ಕಾನೂನು ಸೇವಾ ಸಮಿತಿಗಳ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ರಾಷ್ಟ್ರೀಯ ಲೋಕ ಅದಾಲತ್’ನಲ್ಲಿ ದಾಖಲೆ ಪ್ರಮಾಣದ ಪ್ರಕರಣಗಳು ಇತ್ಯರ್ಥಗೊಂಡಿವೆ.

ಕಾರವಾರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲೆಯ ಎಲ್ಲ ತಾಲೂಕುಗಳ ಕಾನೂನು ಸೇವಾ ಸಮಿತಿಗಳ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ರಾಷ್ಟ್ರೀಯ ಲೋಕ ಅದಾಲತ್’ನಲ್ಲಿ ದಾಖಲೆ ಪ್ರಮಾಣದ ಪ್ರಕರಣಗಳು ಇತ್ಯರ್ಥಗೊಂಡಿವೆ.

ಜಿಲ್ಲೆಯಾದ್ಯಂತ ಒಟ್ಟು 23 ನ್ಯಾಯಪೀಠಗಳಲ್ಲಿ ನಡೆದ ರಾಜಿ ಸಂಧಾನ ಪ್ರಕ್ರಿಯೆಯಲ್ಲಿ ಬರೋಬ್ಬರಿ 1,12,761 ಪ್ರಕರಣಗಳನ್ನು ಸುಗಮವಾಗಿ ಬಗೆಹರಿಸಲಾಗಿದ್ದು, ಈ ಮೂಲಕ ಜಿಲ್ಲೆಯ ನ್ಯಾಯಾಂಗ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲಾಗಿದೆ. ಈ ಬಾರಿಯ ಅದಾಲತ್‌ನಲ್ಲಿ ಕೇವಲ ಪ್ರಕರಣಗಳ ಇತ್ಯರ್ಥ ಮಾತ್ರವಲ್ಲದೆ, ಸಾಲ ಮರುಪಾವತಿ, ಅಪಘಾತ ಪರಿಹಾರ ಹಾಗೂ ದಂಡ ಸೇರಿದಂತೆ ಒಟ್ಟು ₹34,79,60,390 (₹34.79 ಕೋಟಿ) ಹಣಕಾಸಿನ ವಹಿವಾಟು ನಡೆದಿದೆ. ಇದರಲ್ಲಿ 1,07,448 ವ್ಯಾಜ್ಯ ಪೂರ್ವ ಪ್ರಕರಣಗಳು ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 5,313 ಪ್ರಕರಣಗಳನ್ನು ಕಕ್ಷಿದಾರರ ಪರಸ್ಪರ ಸಮ್ಮತಿಯೊಂದಿಗೆ ಇತ್ಯರ್ಥಪಡಿಸಲಾಯಿತು.

ವಿಶೇಷವಾಗಿ 582 ಚೆಕ್ ಬೌನ್ಸ್ ಪ್ರಕರಣಗಳು, 173 ಸಿವಿಲ್ ಪ್ರಕರಣಗಳು ಹಾಗೂ 37 ಮೋಟಾರು ಅಪಘಾತ ಪರಿಹಾರ ಪ್ರಕರಣಗಳು ರಾಜಿಯಾಗಿರುವುದು ವಿಶೇಷವಾಗಿದೆ.

ನ್ಯಾಯಾಲಯದ ಮೆಟ್ಟಿಲೇರಿದ್ದ ಕೌಟುಂಬಿಕ ಕಲಹಗಳ ಐದು ಪ್ರಕರಣಗಳಲ್ಲಿ ಸಕಾರಾತ್ಮಕ ಫಲಿತಾಂಶ ಬಂದಿದ್ದು, ಅದಾಲತ್‌ನಲ್ಲಿ ದಂಪತಿಗಳು ತಮ್ಮ ವೈಮನಸ್ಯ ಮರೆತು ಒಂದಾಗಿದ್ದಾರೆ. ಭಟ್ಕಳ ಮತ್ತು ಅಂಕೋಲಾದಲ್ಲಿ ತಲಾ ಒಂದು ಪ್ರಕರಣದಲ್ಲಿ ದಂಪತಿಗಳು ಪುನಃ ಒಟ್ಟಿಗೆ ಜೀವನ ನಡೆಸಲು ಒಪ್ಪಿಕೊಂಡು ಪರಸ್ಪರ ಹೂಮಾಲೆ ಬದಲಿಸಿ ಸಂಸಾರ ಹೂಡಿರುವುದು ಅದಾಲತ್‌ನ ಸಾರ್ಥಕತೆಗೆ ಸಾಕ್ಷಿಯಾಯಿತು. ಇದರ ಜತೆಗೆ ಜೀವನಾಂಶಕ್ಕಾಗಿ ಸಲ್ಲಿಕೆಯಾಗಿದ್ದ 17 ಪ್ರಕರಣಗಳು ಹಾಗೂ 34 ಕುಟುಂಬಗಳ ಆಸ್ತಿ ವಿಭಜನೆ ಪ್ರಕರಣಗಳು ಸುಲಲಿತವಾಗಿ ರಾಜಿಯಾಗಿವೆ. ರಾಷ್ಟ್ರೀಯ ಲೋಕ ಅದಾಲತ್ ಅತ್ಯಂತ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಜಿಲ್ಲೆಯ ಎಲ್ಲ ನ್ಯಾಯಾಧೀಶರು, ವಕೀಲರು, ಪೊಲೀಸ್ ಇಲಾಖೆ, ನಗರಸಭೆ ಆಯುಕ್ತರು ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪರಮೇಶ್ವರ ಪ್ರಸನ್ನ ಬಿ. ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ.ಎಂ. ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಸಂಕೀರ್ಣ ಕಾನೂನು ಹೋರಾಟದ ಬದಲು ರಾಜಿ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಕಕ್ಷಿದಾರರು ತೋರಿದ ಆಸಕ್ತಿಯನ್ನು ಅವರು ಶ್ಲಾಘಿಸಿದ್ದಾರೆ.