ಮಾಲೂರು ಕ್ಷೇತ್ರದ ಮರು ಎಣಿಕೆ ಪೂರ್ಣ

| Published : Nov 12 2025, 02:15 AM IST

ಸಾರಾಂಶ

ಸುಪ್ರೀಂಕೋರ್ಟ್‌ ಆದೇಶದ ಅನ್ವಯ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತಎಣಿಕೆ ಕಾರ್ಯ ಮಂಗಳವಾರ ಪೊಲೀಸ್‌ ಬಿಗಿ ಭದ್ರತೆಯಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಕೋಲಾರ

ಸುಪ್ರೀಂಕೋರ್ಟ್‌ ಆದೇಶದ ಅನ್ವಯ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತಎಣಿಕೆ ಕಾರ್ಯ ಮಂಗಳವಾರ ಪೊಲೀಸ್‌ ಬಿಗಿ ಭದ್ರತೆಯಲ್ಲಿ ನಡೆಯಿತು. ಇಡೀ ದೇಶದಲ್ಲೇ ವಿಧಾನಸಭಾ ಕ್ಷೇತ್ರವೊಂದರ ಮರು ಮತಎಣಿಕೆ ನಡೆಸಿರುವುದು ಇದೇ ಪ್ರಥಮ ಎನ್ನಲಾಗಿದ್ದು, ಭಾರೀ ಕುತೂಹಲ ಮೂಡಿಸಿದೆ. ಆದರೆ, ಫಲಿತಾಂಶವನ್ನು ಪ್ರಕಟಿಸದೆ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗುತ್ತಿದೆ.

ಮರು ಮತಎಣಿಕೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಭದ್ರತಾ ಕೊಠಡಿಯಲ್ಲಿದ್ದ ಇವಿಎಂ ಯಂತ್ರಗಳನ್ನು ಸೋಮವಾರ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಟಮಕದ ತೋಟಗಾರಿಕೆ ವಿಶ್ವವಿದ್ಯಾನಿಲಯದ ಮತ ಎಣಿಕೆ ಕೇಂದ್ರದ ಸ್ಟ್ರಾಂಗ್ ರೂಮಿಗೆ ತರಲಾಗಿತ್ತು. ಮಂಗಳವಾರ ಬೆಳಗ್ಗೆ 9 ಗಂಟೆಗೆ ಮತ ಎಣಿಕೆ ಕಾರ್ಯ ಶುರುವಾಗಿ, ಸಂಜೆ ವೇಳೆಗೆ ಮುಕ್ತಾಯವಾಯಿತು.

ಮಾಧ್ಯಮದವರಿಗೆ ನಿರ್ಬಂಧ:

ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಮರು ಮತಎಣಿಕೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಣಿಕೆ ಕೇಂದ್ರದೊಳಗೆ ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಎಣಿಕೆ ಕೇಂದ್ರದ ಒಳಗೆ ಮೊಬೈಲ್ ಪೋನ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆಯನ್ನೂ ನಿಷೇಧಿಸಲಾಗಿತ್ತು. ಮತಕೇಂದ್ರದ ಒಳಗೆ ಅಭ್ಯರ್ಥಿ ಹಾಗೂ ಅವರ ಏಜೆಂಟ್‌ರನ್ನು ಹೊರತುಪಡಿಸಿ ಬೇರೆ ಯಾರಿಗೂ ಪ್ರವೇಶ ನೀಡಲಾಗಿರಲಿಲ್ಲ.

ಕಳೆದ ಎರಡೂವರೆ ವರ್ಷದ ಹಿಂದೆ, ಚುನಾವಣೆ ಬಳಿಕ ಇವಿಎಂ ಯಂತ್ರಗಳನ್ನು ಸ್ಟ್ರಾಂಗ್ ರೂಂನಲ್ಲಿ ಸುರಕ್ಷಿತವಾಗಿರಿಸಲಾಗಿತ್ತು. ಮತಎಣಿಕೆ ವೇಳೆ, ವಿವಿ ಪ್ಯಾಟ್ ಹಾಗೂ ಇವಿಎಂ ಎಣಿಕೆ ಎರಡೂ ನಡೆದಿದ್ದು, ಎರಡೂ ಹೊಂದಾಣಿಕೆಯಾದ ನಂತರದಲ್ಲಿ ಮತ ಎಣಿಕೆ ಕಾರ್ಯ ನಡೆಸಲಾಯಿತು.

ಮತ ಮರುಎಣಿಕೆ ಏಕೆ?:

2023ರ ವಿಧಾನಸಭಾ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ವೈ.ನಂಜೇಗೌಡ ಅವರು 248 ಮತಗಳಿಂದ ಬಿಜೆಪಿ ಅಭ್ಯರ್ಥಿ ಮಂಜುನಾಥ್ ಗೌಡ ಅವರನ್ನು ಸೋಲಿಸಿ ಆಯ್ಕೆಯಾಗಿದ್ದರು. ಆದರೆ, ಮತ ಎಣಿಕೆಯಲ್ಲಿ ಲೋಪವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಮಂಜುನಾಥ್ ಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ, ಹೈಕೋರ್ಟ್ ಮರು ಮತ ಎಣಿಕೆಗೆ ಆದೇಶ ನೀಡಿತ್ತು. ಅಲ್ಲದೆ, ಶಾಸಕ ಸ್ಥಾನದಿಂದ ನಂಜೇಗೌಡರ ಆಯ್ಕೆ ಅಸಿಂಧುಗೊಳಿಸಿತ್ತು.

ಹೈಕೋರ್ಟ್ ಆದೇಶವನ್ನು ಹಾಲಿ ಶಾಸಕ ಕೆ.ವೈ.ನಂಜೇಗೌಡ ಅವರು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಶಾಸಕ ಸ್ಥಾನದಿಂದ ನಂಜೇಗೌಡರ ಆಯ್ಕೆ ಅಸಿಂಧುಗೊಳಿಸಿದ್ದ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು. ಆದರೆ, ಮತಗಳ ಮರು ಎಣಿಕೆ ನಡೆಸಲು ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಮರು ಮತಎಣಿಕೆ ನಡೆಯಿತು.ಕಣ್ಣೀರು ಹಾಕಿದ ನಂಜೇಗೌಡ:ಮತಎಣಿಕೆ ಕೇಂದ್ರದಿಂದ ಹೊರ ಬಂದ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವರು, ಕುಟುಂಬದವರ ಜೊತೆ ಭಾವುಕರಾಗಿ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು. ಮತ ಕೇಂದ್ರದ ಹೊರಗೆ ಪತ್ನಿ, ಮಕ್ಕಳು, ಸೊಸೆಯಂದಿರ ಜೊತೆ ಕಣ್ಣೀರು ಹಾಕಿದರು.

ಬಳಿಕ, ಸುದ್ದಿಗಾರರ ಜೊತೆ ಮಾತನಾಡಿದ ನಂಜೇಗೌಡ, ಕಳೆದ ಬಾರಿ ಅಧಿಕಾರಿಗಳು ಸಂಪೂರ್ಣ ನ್ಯಾಯಸಮ್ಮತವಾಗಿ ಮತ ಎಣಿಕೆ ನಡೆಸಿದ್ದರು. ಈಗ ನಡೆದಿರುವ ಮರು ಮತ ಎಣಿಕೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಅಧಿಕಾರಿಗಳು ಕಾನೂನು ಪ್ರಕಾರ ಏನು ಮಾಡಬೇಕಿತ್ತೋ ಅದನ್ನೇ ಮಾಡಿದ್ದಾರೆ. ಸುಪ್ರೀಂಕೋರ್ಟ್ ನೀಡುವ ಯಾವುದೇ ಸೂಚನೆಗೆ ನಾವು ಬದ್ದರಾಗಿದ್ದೇವೆ ಎಂದು ಹೇಳಿದರು.ಮಾಜಿ ಶಾಸಕ ಮಂಜುನಾಥ್ ಗೌಡ ಅವರು ಮುಂದೆ ನನ್ನ ಬಗ್ಗೆ ಏನು ಹೇಳಿದರೂ ಪ್ರತಿಕ್ರಿಯೆ ನೀಡುವುದಿಲ್ಲ. ಇಂದಿನಿಂದ ಯಾರ ಮೇಲೂ ಟೀಕೆ ಮಾಡುವುದಿಲ್ಲ. ಕೌಂಟರ್ ನೀಡುವುದಿಲ್ಲ. ಆದರೆ, ನಮಗೆ ಆಗಿರುವ ನೋವು ಅವರಿಗೆ ಶಾಪವಾಗುತ್ತದೆ ಎಂದರು.