ಸಾರಾಂಶ
- ಶೀಘ್ರ ಅಧಿಕಾರಿಗಳ ಸಭೆ ಕರೆದು ಕ್ರಮ: ಜಿಲ್ಲಾ ವರದಿಗಾರರ ಕೂಟಕ್ಕೆ ಡಿಸಿ ಭರವಸೆ- - - ಕನ್ನಡಪ್ರಭ ವಾರ್ತೆ ದಾವಣಗೆರೆ
ಮುದ್ರಣ ಮಾಧ್ಯಮ, ದೃಶ್ಯ ಮಾಧ್ಯಮಗಳ ಹೆಸರನ್ನು ಹೇಳಿಕೊಂಡು ಮರಳು ದಂಧೆ, ನ್ಯಾಯಬೆಲೆ ಅಂಗಡಿ, ಅಕ್ಕಿ ದಂಧೆಯವರು, ಖಾಸಗಿ ಆಸ್ಪತ್ರೆ, ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗೆ ಹಣಕ್ಕಾಗಿ ಪೀಡಿಸುತ್ತಿದ್ದಾರೆ. ಅಂಥವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ವರದಿಗಾರರ ಕೂಟದಿಂದ ಜಿಲ್ಲಾಧಿಕಾರಿಗೆ ಮನವಿ ಅರ್ಪಿಸಲಾಯಿತು.ನಗರದ ಜಿಲ್ಲಾಡಳಿತ ಭವನದಲ್ಲಿ ಬುಧವಾರ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಅವರಿಗೆ ಕೂಟದ ಗೌರವಾಧ್ಯಕ್ಷ ಬಿ.ಎನ್.ಮಲ್ಲೇಶ, ಅಧ್ಯಕ್ಷ ನಾಗರಾಜ ಎಸ್.ಬಡದಾಳ್, ಪ್ರಧಾನ ಕಾರ್ಯದರ್ಶಿ ಎಂ.ವೈ.ಸತೀಶ, ಪದಾಧಿಕಾರಿಗಳಾದ ಕೆ.ಚಂದ್ರಣ್ಣ, ಮಂಜುನಾಥ ಗೌರಕ್ಕಳವರ್, ಸಿದ್ದಯ್ಯ ಹಿರೇಮಠ, ರಮೇಶ ಜಹಗೀರದಾರ ಇತರರ ನೇತೃತ್ವದಲ್ಲಿ ಮನವಿ ಅರ್ಪಿಸಿ, ಮಾಧ್ಯಮಗಳು, ಪತ್ರಕರ್ತರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಲಾಯಿತು.
ಕೂಟದ ಬಿ.ಎನ್.ಮಲ್ಲೇಶ ಮಾತನಾಡಿ, ನಗರ, ಜಿಲ್ಲೆಯಲ್ಲಿ ಪ್ರೆಸ್, ಮೀಡಿಯಾ ಹೆಸರನ್ನು ವಾಹನಗಳ ಮೇಲೆ ಹಾಕಿಸಿಕೊಂಡು, ಮಾಧ್ಯಮಗಳ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಈ ಹಿಂದೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ನಿರ್ದಿಷ್ಟವಾಗಿ ಮಾಧ್ಯಮದವರಿಗೆ ಗುರುತಿನ ಪತ್ರ ನೀಡಿದ್ದು, ಅದೇ ರೀತಿ ಈಗಲೂ ಮಾಡಬೇಕು. ತುರ್ತು ಸಂದರ್ಭಗಳಲ್ಲಿ ನೈಜ ಪತ್ರಕರ್ತರಿಗೆ ಇಂಥವರಿಂದ ತೊಂದರೆಯಾಗುತ್ತಿದೆ ಎಂದರು.ಅಧ್ಯಕ್ಷ ನಾಗರಾಜ ಬಡದಾಳ್ ಮಾತನಾಡಿ, ಪತ್ರಕರ್ತರು ಯಾರೇ ಆಗಿದ್ದರೂ, ಯಾವುದೇ ಸಂಸ್ಥೆಗೆ ಸೇರಿದ್ದರೂ ತಪ್ಪು ಮಾಡಿದ್ದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ನಾನೇ ತಪ್ಪು ಮಾಡಿದ್ದರೂ ನನ್ನ ವಿರುದ್ಧದಿಂದಲೇ ಕ್ರಮ ಕೈಗೊಳ್ಳುವ ಕೆಲಸ ಶುರುವಾಗಲಿ ಎಂದರು.
ಪ್ರಧಾನ ಕಾರ್ಯದರ್ಶಿ ಎಂ.ವೈ.ಸತೀಶ ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಹಾಕಿ, ತಾವು ಪತ್ರಕರ್ತರೆಂದು ಅಧಿಕಾರಿ, ಸಿಬ್ಬಂದಿಗೆ ಹೆದರಿಸಿ, ಬೆದರಿಸುವ ಕೆಲಸವಾಗುತ್ತಿದೆ ಎಂದರು.ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಅವರು, 15 ದಿನದೊಳಗೆ ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ನಕಲಿ ಯುಟ್ಯೂಬ್ ಚಾನಲ್, ಅನಧಿಕೃತ ಚಾನಲ್ ಇತ್ಯಾದಿಗಳ ಬಗ್ಗೆ ವಾರ್ತಾ ಇಲಾಖೆಯಿಂದ ಮಾಹಿತಿ ತರಿಸಿಕೊಂಡು, ರದ್ದುಪಡಿಸುತ್ತೇವೆ. ನಿರ್ದಾಕ್ಷಿಣ್ಯ ಕ್ರಮ ಜರುಗಿಸುತ್ತೇವೆ. ಮಾಧ್ಯಮದವರ ಸಮ್ಮುಖವೇ ಆರ್‌ಟಿಒ, ಪಾಲಿಕೆ, ಕಂದಾಯ, ಜಿಪಂ, ತಾಪಂ ಅಧಿಕಾರಿಗಳ ಸಭೆ ಕರೆಯುತ್ತೇವೆ ಎಂದರು.
ಈ ಸಂದರ್ಭ ಖಜಾಂಚಿ ಪವನ್ ಐರಣಿ, ವಿವೇಕ್ ಬದ್ದಿ, ಸಂಜಯ್ ಕುಂದುವಾಡ, ಬಿ.ಸಿಕಂದರ್, ಆರ್.ರವಿಬಾಬು, ತೇಜಸ್ವಿನಿ ಪ್ರಕಾಶ, ಬಿ.ಕೆ.ಕಾವ್ಯ, ಸತೀಶ ಬಡಿಗೇರ, ಡಾ.ಸಿ.ವರದರಾಜ, ಪುನೀತ್ ಆಪ್ತಿ, ಆರ್.ಎಸ್.ತಿಪ್ಪೇಸ್ವಾಮಿ, ಡಾ. ಕೆ.ಜೈಮುನಿ, ಸುರೇಶ ಕುಣಿಬೆಳಕೆರೆ, ರಮೇಶ, ಶಿವರಾಜ ಈಳಿಗೇರ, ಸುರೇಶ ಕಕ್ಕರಗೊಳ್ಳ, ಚನ್ನಬಸವ ಶೀಲವಂತ, ಎಚ್.ಎಂ.ಪಿ.ಕುಮಾರ ಇತರರು ಇದ್ದರು.- - -
ಕೋಟ್ ನಾನು ಎಸಿ ಇದ್ದಾಗ 10-12 ಪತ್ರಿಕೆಗಳ ಟೈಟಲ್ ಡಿಕ್ಲರೇಷನ್ ರದ್ದುಪಡಿಸಿದ್ದೇವೆ. ಅಧಿಕೃತ ಪತ್ರಕರ್ತರ ಹೆಸರು, ಮೊಬೈಲ್ ನಂಬರ್, ಸಂಸ್ಥೆ ಹೆಸರನ್ನು ಪಡೆದು, ಅಧಿಕೃತ ಗುರುತಿನ ಪತ್ರ ನೀಡುತ್ತೇವೆ. ಆದಷ್ಟು ಬೇಗನೆ ವರದಿಗಾರರ ಕೂಟ ನೀಡಿರುವ ಮನವಿಗೆ ಸ್ಪಂದಿಸಿ, ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ತಪ್ಪು ಯಾರೇ ಮಾಡಿದ್ದರೂ ಕ್ರಮ ತಪ್ಪಿದ್ದಲ್ಲ- ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾಧಿಕಾರಿ
- - - -5ಕೆಡಿವಿಜಿ1:ದಾವಣಗೆರೆ ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ, ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ವರದಿಗಾರರ ಕೂಟದಿಂದ ಮನವಿ ಅರ್ಪಿಸಲಾಯಿತು.