ನಿರ್ಮಿತಿ ಕೇಂದ್ರದಲ್ಲಿ ನೇಮಕ ಎಡವಟ್ಟು: ರಾಜ್ಯಾದ್ಯಂತ ಯೋಜನಾ ವ್ಯವಸ್ಥಾಪಕರ ದಾಖಲೆ ಪರಿಶೀಲನೆಗೆ ಆದೇಶ

| Published : May 14 2025, 12:15 AM IST

ನಿರ್ಮಿತಿ ಕೇಂದ್ರದಲ್ಲಿ ನೇಮಕ ಎಡವಟ್ಟು: ರಾಜ್ಯಾದ್ಯಂತ ಯೋಜನಾ ವ್ಯವಸ್ಥಾಪಕರ ದಾಖಲೆ ಪರಿಶೀಲನೆಗೆ ಆದೇಶ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರ ಕಾನೂನುಬಾಹಿರ ನೇಮಕಾತಿ ಕುರಿತಂತೆ ಲೋಕಾಯುಕ್ತದಲ್ಲಿ ದೂರು ದಾಖಲಾದ ಬೆನ್ನಲ್ಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಿರ್ಮಿತಿ ಕೇಂದ್ರದಡಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿರುವ ಯೋಜನಾ ವ್ಯವಸ್ಥಾಪಕರ ನೇಮಕ ಸಂಬಂಧ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರ ಕಾನೂನುಬಾಹಿರ ನೇಮಕಾತಿ ಕುರಿತಂತೆ ಲೋಕಾಯುಕ್ತದಲ್ಲಿ ದೂರು ದಾಖಲಾದ ಬೆನ್ನಲ್ಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಿರ್ಮಿತಿ ಕೇಂದ್ರದಡಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿರುವ ಯೋಜನಾ ವ್ಯವಸ್ಥಾಪಕರ ನೇಮಕ ಸಂಬಂಧ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಮಂಡ್ಯ ಜಿಲ್ಲೆಯಲ್ಲಿ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರನ್ನು ಗುತ್ತಿಗೆ ಆಧಾರದ ಮೇಲೆ ಕಾನೂನುಬಾಹಿರವಾಗಿ ನೇಮಕ ಮಾಡಿಕೊಂಡಿರುವುದಾಗಿ ದೂರು ಬಂದಿದೆ. ಈ ಬಗ್ಗೆ ಪರಿಶೀಲಿಸಿ ಕೈಗೊಂಡ ಕ್ರಮದ ಕುರಿತು ಕಚೇರಿಗೆ ವರದಿ ಮಾಡುವಂತೆ ವಸತಿ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ನವೀನ್‌ರಾಜ್ ಸಿಂಗ್ ಅವರಿಗೆ ಪತ್ರ ಮುಖೇನ ಸೂಚನೆ ನೀಡಿದ್ದಾರೆ.

ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಅವರು ಮಂಡ್ಯ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರನ್ನು ಕಾನೂನುಬಾಹಿರವಾಗಿ ನೇಮಕ ಮಾಡಿರುವ ಕುರಿತು ಎಲ್ಲಾ ದಾಖಲೆಗಳೊಂದಿಗೆ ಲೋಕಾಯುಕ್ತರು ಹಾಗೂ ಸರ್ಕಾರದ ಉನ್ನತಮಟ್ಟದ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಕೆ.ಆರ್.ರವೀಂದ್ರ ಅವರು ಸಲ್ಲಿಸಿದ ದೂರನ್ನು ಆಧಾರವಾಗಿಟ್ಟುಕೊಂಡು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಿರ್ಮಿತಿ ಕೇಂದ್ರದಡಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿರುವ ಯೋಜನಾ ವ್ಯವಸ್ಥಾಪಕರ ನೇಮಕ ಸಂಬಂಧ ದಾಖಲೆಗಳನ್ನು ಪರಿಶೀಲಿಸಿ ವರದಿಯನ್ನು ತುರ್ತಾಗಿ ಸಲ್ಲಿಸುವಂತೆ ತಿಳಿಸಿದ್ದಾರೆ.

ಇದೇ ವಿಷಯವಾಗಿ ಸೋಮವಾರ ನವೀನ್‌ರಾಜ್ ಸಿಂಗ್ ಅವರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ನಡೆಸಿ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರ ನೇಮಕ ಕುರಿತಂತೆ ಸತ್ಯಾಸತ್ಯತೆಯ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸುವಂತೆ ಸೂಚಿಸಿದ್ದಾರೆ.

ಇದಲ್ಲದೆ ಮಂಡ್ಯ ನಿರ್ಮಿತಿ ಕೇಂದ್ರದಲ್ಲಿ ಯೋಜನಾ ವ್ಯವಸ್ಥಾಪಕರಾಗಿದ್ದ ವಿ.ವಿನೋದ್ ೧೩.೧೦.೨೦೨೨ರಂದು ಯೋಜನಾ ವ್ಯವಸ್ಥಾಪಕರ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ಜೊತೆ ಎಂ.ಟೆಕ್ ಇನ್ ಸಿವಿಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಪ್ರಥಮ ದರ್ಜೆಯಲ್ಲಿ ಪಾಸ್ ಮಾಡಿರುವುದಾಗಿ ೨೦೧೬ರ ಸ್ನಾತಕೋತ್ತರ ಪದವಿ ದಾಖಲೆ ಸಲ್ಲಿಸಿದ್ದರು.

ಆದರೆ, ವಿ.ವಿನೋದ್ ಎಂ.ಟೆಕ್ ಪದವಿ ಪಡೆದಿಲ್ಲವೆಂಬ ದೂರು ಬಂದ ಹಿನ್ನೆಲೆ ಜಿಲ್ಲಾಧಿಕಾರಿಗಳು ಪ್ರಮಾಣಪತ್ರದ ನೈಜತೆ ಪರಿಶೀಲನೆಗೊಳಪಡಿಸಿದಾಗ ವಿಶ್ವವಿದ್ಯಾಲಯದ ಪರೀಕ್ಷಾಂಗ ಉಪ ಕುಲಸಚಿವರು ವಿ.ವಿನೋದ್ ಎಂ.ಟೆಕ್ ಪದವಿ ಪಡೆಯದಿರುವುದು ಕಂಡುಬಂದಿತ್ತು. ಹಾಗಾಗಿ ವಿನೋದ್ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ.

ಇದಾದ ನಂತರ ಮೂವರು ಸೈಟ್ ಎಂಜಿನಿಯರ್‌ಗಳು ವಿದ್ಯಾರ್ಹತೆ ನಕಲಿ ದಾಖಲೆ ಕೊಟ್ಟು ನೇಮಕಗೊಂಡಿರುವುದನ್ನೂ ಕೆ.ಆರ್.ರವೀಂದ್ರ ಬಯಲಿಗೆಳೆದು ಆ ಮೂವರನ್ನೂ ಕೆಲಸದಿಂದ ವಜಾಗೊಳಿಸುವಲ್ಲಿ ಯಶಸ್ವಿಯಾಗಿದ್ದರು.

ಇದೀಗ ಕೆ.ಆರ್.ರವೀಂದ್ರ ಹಾಲಿ ಯೋಜನಾ ವ್ಯವಸ್ಥಾಪಕ ಬಿ.ಜಯಪ್ರಕಾಶ್ ಕಾನೂನುಬಾಹಿರ ನೇಮಕಾತಿಯ ದೂರು ರಾಜ್ಯದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿ ಎಲ್ಲಾ ಜಿಲ್ಲೆಗಳ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರ ನೇಮಕದ ಅಸಲಿಯತ್ತನ್ನೇ ಪರಿಶೀಲನೆಗೊಳಪಡಿಸುವಂತೆ ಮಾಡಿರುವುದು ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದೆ. ಕಾನೂನುಬಾಹಿರವಾಗಿ ಮತ್ತು ನಕಲಿ ವಿದ್ಯಾರ್ಹತೆ ದಾಖಲೆಗಳನ್ನು ಸಲ್ಲಿಸಿ ಹುದ್ದೆಗೆ ನೇಮಕಗೊಂಡಿರುವವರು ಒಳಗೊಳಗೇ ತಳಮಳಿಸುತ್ತಿದ್ದಾರೆ.