ವಿದ್ಯಾರ್ಥಿಗಳು ನಾಲ್ಕೈದು ಬಾರಿ ಹೋರಾಟ ನಡೆಸಿದರೂ ಮಲಗಿದ್ದ ರಾಜ್ಯ ಸರ್ಕಾರ ಯಾವಾಗ ವಿದ್ಯಾರ್ಥಿಗಳ ಜತೆ ಬಿಜೆಪಿ ಹೋರಾಟಕ್ಕೆ ಇಳಿಯಿತೋ ಆಗ ಎಚ್ಚೆತ್ತುಕೊಂಡ ಕ್ಯಾಬಿನೆಟ್‌ನಲ್ಲಿ ಚರ್ಚೆ ನಡೆಸಿ ಹುದ್ದೆಗಳ ಭರ್ತಿಗೆ ಮುಂದಾಗಿದೆ. ಇದು ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕರಿಗೆ ಸಂತಸ ತಂದಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

ಹುಬ್ಬಳ್ಳಿ:ಬಿಜೆಪಿ ಹಾಗೂ ಆಕ್ಸಾ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ಹೆದರಿ ರಾಜ್ಯ ಸರ್ಕಾರ 56 ಸಾವಿರ ಹುದ್ದೆಗಳ ನೇಮಕಕ್ಕೆ ನಿರ್ಧರಿಸಿದೆ. ಇದು ವಿದ್ಯಾರ್ಥಿಗಳ ಹಾಗೂ ಬಿಜೆಪಿ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ನಾಲ್ಕೈದು ಬಾರಿ ಹೋರಾಟ ನಡೆಸಿದರೂ ಮಲಗಿದ್ದ ರಾಜ್ಯ ಸರ್ಕಾರ ಯಾವಾಗ ವಿದ್ಯಾರ್ಥಿಗಳ ಜತೆ ಬಿಜೆಪಿ ಹೋರಾಟಕ್ಕೆ ಇಳಿಯಿತೋ ಆಗ ಎಚ್ಚೆತ್ತುಕೊಂಡ ಕ್ಯಾಬಿನೆಟ್‌ನಲ್ಲಿ ಚರ್ಚೆ ನಡೆಸಿ ಹುದ್ದೆಗಳ ಭರ್ತಿಗೆ ಮುಂದಾಗಿದೆ. ಇದು ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕರಿಗೆ ಸಂತಸ ತಂದಿದೆ ಎಂದರು.

ಆದಷ್ಟು ಬೇಗ ನೇಮಕಾತಿಗೆ ನೋಟಿಫಿಕೇಶನ್ ಹೊರಡಿಸಬೇಕು. ನೆಪ ಹೇಳಿ ಅನಗತ್ಯ ವಿಳಂಬ ಮಾಡಬಾರದು. ಈಗಾಗಲೇ ಅನೇಕ ಅಭ್ಯರ್ಥಿಗಳ ವಯಸ್ಸು ದಾಟುತ್ತಿದೆ. ಮತ್ತೆ ವಿಳಂಬ ಮಾಡುವುದರಿಂದ ಬಹುತೇಕ ಅಭ್ಯರ್ಥಿಗಳು ಸರ್ಕಾರಿ ಉದ್ಯೋಗದಿಂದ ವಂಚಿತರಾಗುತ್ತಾರೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಕೆಪಿಎಸ್‌ಸಿಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರವಿದೆ. ಅದರ ಕರಿನೆರಳು ಈಗಿನ ನೇಮಕಾತಿ ಮೇಲೆ ಬೀಳದಂತೆ ನೋಡಿಕೊಳ್ಳಬೇಕು. ಆಗ ಮಾತ್ರ ಅರ್ಹ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ ಎಂದ ಅವರು, ವಿದ್ಯಾರ್ಥಿಗಳು ನ್ಯಾಯಯುತ ಬೇಡಿಕೆ ಇಟ್ಟುಕೊಂಡು ಹೋರಾಟ ಮಾಡಿದ್ದಾರೆ. ಅವರನ್ನು ಗುರಿಯನ್ನಾಗಿ ಇಟ್ಟುಕೊಂಡು ವಿದ್ಯಾರ್ಥಿ ನಾಯಕರ ಮೇಲೆ ಪ್ರಕರಣ ಹಾಕಲು ಮುಂದಾಗಿರುವುದು ಖಂಡನೀಯ ಎಂದರು.ಒಳಮೀಸಲಾತಿ ಕುರಿತು ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು ಅದರ ಬಗ್ಗೆ ನ್ಯಾಯಾಲಯ ಯಾವ ನಿರ್ಧಾರ ಮಾಡುತ್ತದೆಯೋ ಅದರಂತೆ ನಡೆದುಕೊಳ್ಳೋಣ. ಅದೇ ಕಾರಣ ಇಟ್ಟುಕೊಂಡು ನೇಮಕಾತಿ ಮುಂದೂಡಬಾರದು. ಮೊದಲಿದ್ದ ಒಳ ಮೀಸಲಾತಿ ನಿಯಮದಂತೆ ನೇಮಕಾತಿ ಮಾಡಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ 12 ವರ್ಷಗಳಲ್ಲಿ ಏಳು ಲಕ್ಷಕ್ಕೂ ಹೆಚ್ಚು ಹುದ್ದೆಗಳ ಭರ್ತಿ ಮಾಡಿದೆ. 17 ಕೋಟಿಗೂ ಹೆಚ್ಚು ಇಪಿಎಫ್‌ ಅಂಕೌಂಟ್‌ಗಳು ಕ್ರಿಯೇಟ್ ಆಗಿವೆ. ಇದೇ ಎಷ್ಟೊಂದು ಉದ್ಯೋಗಗಳು ಸೃಷ್ಟಿಯಾಗಿವೆ ಎಂಬುದಕ್ಕೆ ಸಾಕ್ಷಿ ಎಂದರು.ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ರಾಮಣ್ಣ ಬಡಿಗೇರ ಸೇರಿದಂತೆ ಅನೇಕರು ಇದ್ದರು.