ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾಗಿರುವ ಮಳೆ ಪ್ರಮಾಣದ ಮಾಹಿತಿ ಸರಿಯಾಗಿ ದಾಖಲಾಗಿಲ್ಲ. ಅಲ್ಲದೇ 125ಕ್ಕೂ ಹೆಚ್ಚಿನ ಮಳೆ ಮಾಪನ ಕೇಂದ್ರಗಳು ದುರಸ್ತಿಯಲ್ಲಿದ್ದುದ್ದರಿಂದಾಗಿ ಮಳೆ ಮಾಪನ ಸರಿಯಾಗಿ ಆಗದೆ, ರೈತರಿಗೆ ಸಿಗಬೇಕಾದ ಬೆಳೆ ವಿಮೆ ಪರಿಹಾರ ಮೊತ್ತ ವಿತರಣೆಯಲ್ಲಿ ಅನ್ಯಾಯವಾಗಿದೆ. ಇದರಿಂದಾಗಿ ರೈತರು ಆರ್ಥಿಕ ನಷ್ಟ ಅನುಭವಿಸಂತಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾಗಿರುವ ಮಳೆ ಪ್ರಮಾಣದ ಮಾಹಿತಿ ಸರಿಯಾಗಿ ದಾಖಲಾಗಿಲ್ಲ. ಅಲ್ಲದೇ 125ಕ್ಕೂ ಹೆಚ್ಚಿನ ಮಳೆ ಮಾಪನ ಕೇಂದ್ರಗಳು ದುರಸ್ತಿಯಲ್ಲಿದ್ದುದ್ದರಿಂದಾಗಿ ಮಳೆ ಮಾಪನ ಸರಿಯಾಗಿ ಆಗದೆ, ರೈತರಿಗೆ ಸಿಗಬೇಕಾದ ಬೆಳೆ ವಿಮೆ ಪರಿಹಾರ ಮೊತ್ತ ವಿತರಣೆಯಲ್ಲಿ ಅನ್ಯಾಯವಾಗಿದೆ. ಇದರಿಂದಾಗಿ ರೈತರು ಆರ್ಥಿಕ ನಷ್ಟ ಅನುಭವಿಸಂತಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಜೆ ಬೆಳೆ ವಿಮೆ ಪಾವತಿಗೆ ಸಂಬಂಧಿಸಿದಂತೆ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ಈ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಬಾರಿ ಜಿಲ್ಲಾಧಿಕಾರಿಗಳ ಗಮನ ಸೆಳೆದು ಸುದೀರ್ಘವಾಗಿ ಚರ್ಚಿಸಲಾಗಿದೆ. ಅಲ್ಲದೇ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮಳೆ ಮಾಪನ ಕೇಂದ್ರಗಳ ದೋಷ ಮತ್ತು ವಿಮಾ ಮೊತ್ತ ಘೋಷಿಸುವಲ್ಲಿ ಅನುಸರಿಸಬಹುದಾದ ಕ್ರಮಗಳ ಬಗ್ಗೆಯೂ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ಆದಾಗ್ಯೂ ಸರಿಯಾದ ಪರಿಹಾರ ಮೊತ್ತ ದೊರೆಯದಿರುವುದು ಅತ್ಯಂತ ನೋವಿನ ಸಂಗತಿ. ಸಂತ್ರಸ್ಥತರು ಸಂಘಟಿತರಾಗಿ ಹೋರಾಟಕ್ಕೆ ಕರೆಕೊಡುವ ಮುನ್ನ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ವಿಮಾ ಕಂಪನಿಗಳು ಘೋಷಿಸುವ ಮೊತ್ತ ಅತ್ಯಂತ ಕಡಿಮೆಯಾಗಿದೆ. ಅದಕ್ಕೆ ಮಳೆ ಮಾಪನ ಯಂತ್ರಗಳು ದುರಸ್ತಿಯಲ್ಲಿರುವುದು ಕಾರಣವಾಗಿದೆ. ಆದರೂ ಮಳೆಮಾಪನವನ್ನು ಇತರೆ ಖಾಸಗಿ ಕಂಪನಿ ಅಥವಾ ಸಂಸ್ಥೆಗಳು ದಾಖಲಿಸಿರುವ ಮಳೆಪ್ರಮಾಣವನ್ನು ಪರ್ಯಾಯ ಕ್ರಮವಾಗಿ ಪರಿಗಣಿಸಿ, ಪರಿಶೀಲಿಸಿ, ಪರಿಹಾರ ಮೊತ್ತವನ್ನು ಘೋಷಿಸುವಲ್ಲಿ ಕ್ರಮವಹಿಸಬೇಕು ಎಂದು ಸೂಚಿಸಿದರು.ಕೆಲವು ಕಡೆಗಳಲ್ಲಿ ಸಾಮಾನ್ಯ ಮೊತ್ತ ಘೋಷಿಸಿದರೆ, ಇನ್ನೂ ಕೆಲವು ಕಡೆಗಳಲ್ಲಿ ಘೋಷಿಸಿದ ಮೊತ್ತ ಅತ್ಯಂತ ಕನಿಷ್ಠದ್ದಾಗಿದೆ. ಒಟ್ಟಾರೆಯಾಗಿ ವಿಮಾ ಕಂಪನಿಗಳು ರೈತರಿಂದ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಪಡೆದ ವಂತಿಗೆಯ ಮೊತ್ತಕ್ಕಿಂತ ಕಡಿಮೆಯಾಗಿದ್ದು, ಕಂಪನಿಗಳು ಲಾಭದಾಯಕವಾಗಿವೆ. ವಿಮಾಕಂಪನಿಗಳು ಸಂಪೂರ್ಣ ಬೆಳೆ ನಾಶವಾದಲ್ಲಿ ನೀಡುವ ಘೋಷಿತ ಪರಿಹಾರ ಮೊತ್ತವನ್ನು ಪ್ರಕಟಿಸಿ, ಸಂತ್ರಸ್ಥ ರೈತರಿಗೆ ವಿತರಿಸಲು ಮುಂದಾಗಬೇಕು ಎಂದರು.
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಇರುವ ಮಳೆ ಮಾಪನ ಕೇಂದ್ರಗಳು ಮತ್ತು ಇತರೆ ಮಳೆ ಮಾಪನ ಕೇಂದ್ರಗಳ ಸಮಗ್ರ ವರದಿ ಪಡೆದು, ತುಲನಾತ್ಮಕವಾಗಿ ಪರಿಶೀಲಿಸಿ, ವಾಸ್ತವ ಮಳೆ ಪ್ರಮಾಣವನ್ನು ನಿಗಧಿಪಡಿಸಬಹುದಾಗಿದೆ. ಆ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಮಳೆಮಾಪನ ಕೇಂದ್ರಗಳಲ್ಲಿ ಅವಾಸ್ತವಿಕ ವರದಿ, ಬೆಳೆ ಪರಿಹಾರ ಮೊತ್ತ ಘೋಷಿಸುವಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಕಾಲಕಾಲಕ್ಕೆ ಸರ್ಕಾರದ ಗಮನಸೆಳೆದು, ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಡುವಂತೆ ಸರ್ಕಾರಕ್ಕೆ ಲಿಖಿತ ವರದಿ ನೀಡಲಾಗಿದೆ. ಆದಾಗ್ಯೂ ವಿಮಾ ಕಂಪನಿಗಳು ಪುನಃ ಹಳೆಯ ಅವಾಸ್ತವಿಕ ವರದಿಯನ್ನೇ ಅನುಸರಿಸುತ್ತಿರುವುದು ಸರಿಯಲ್ಲ. ಈ ವಿಷಯವನ್ನು ಮಾನ್ಯ ಮುಖ್ಯಮಂತ್ರಿಗಳು ಸೇರಿದಂತೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ , ಮಾಜಿ ಸಚಿವ ಹರತಾಳು ಹಾಲಪ್ಪ, ರೈತ ಮುಖಂಡರುಗಳಾದ ಮಲ್ಲಿಕಾರ್ಜುನ ಹಕ್ರೆ, ಮೇಘರಾಜ, ಜಗದೀಶ್ ಸೇರಿದಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಜಿಲ್ಲೆ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ವಿಮಾ ಕಂಪನಿಗಳ ಪ್ರತಿನಿಧಿಗಳು, ರೈತ, ರೈತ ಮುಖಂಡರು ಉಪಸ್ಥಿತರಿದ್ದರು.
----ತೀರ್ಥಹಳ್ಳಿ ತಾಲೂಕಿನ ಆಯ್ದ ಗ್ರಾಮಗಳಲ್ಲಿ ಕಳೆದ ಎರಡುವರೆ ವರ್ಷಗಳಲ್ಲಿ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾಗಿರುವ ಮಳೆ ಪ್ರಮಾಣ ವಾಸ್ತವಾಂಶಗಳಿಂದ ಕೂಡಿರುವುದಿಲ್ಲ. ಅದಕ್ಕೆ ಕಾರಣ ದೋಷಪೂರಿತ ಮಳೆ ಮಾಪನ ಕೇಂದ್ರಗಳೇ ಕಾರಣ. ಇದರಿಂದಾಗಿ ಸಂತ್ರಸ್ತ ರೈತರಿಗೆ ನಿರೀಕ್ಷಿತ ಪ್ರಮಾಣದ ಬೆಳೆ ನಷ್ಟದ ವಿಮಾ ಪರಿಹಾರ ಮೊತ್ತ ದೊರೆಯುತ್ತಿಲ್ಲ. ರೈತರಿಗೆ ಅನ್ಯಾಯವಾಗಿದೆ. ಅದನ್ನು ಸರಿಪಡಿಸಿಕೊಡಬೇಕು. ಮಳೆ ಮಾಪನ ಕೇಂದ್ರಗಳ ನಿರ್ವಹಣೆ ಸ್ಥಳೀಯರಿಗೆ ವಹಿಸಿ ಕೊಡಬೇಕು.
- ಕೆ.ವಿ.ಕೃಷ್ಣಮೂರ್ತಿ, ತೀರ್ಥಹಳ್ಳಿ.----
ವಿಮಾ ಕಂಪನಿ ಪಡೆದ ವಂತಿಗೆ, ಪರಿಹಾರ ನೀಡುವ ಕಂಪನಿ ಕೊಡುವ ಮೊತ್ತಕ್ಕಿಂತ ಅತಿ ಹೆಚ್ಚು. ಭಾರೀ ಪ್ರಮಾಣದ ಹಣ ಕಂಪನಿಗೆ ಉಳಿಯುತ್ತಿದೆ. ಹಿಂದಿನ ಸಾಲಿನಲ್ಲಿಯೂ ಹೀಗೆಯೇ ಆಗಿತ್ತು. ಈ ನ್ಯೂನತೆಗೆ ಟರ್ಮ್ಶೀಟ್ ಕೂಡ ಕಾರಣ. ಮುಂದಿನ ದಿನಗಳಲ್ಲಿ ಸಂಸದರು ಮತ್ತು ರೈತರ ಉಪಸ್ಥಿತಿಯಲ್ಲಿ ಸಭೆ ನಡೆಸಿ, ಸರಿಯಾದ ನಿರ್ಣಯ ಕೈಗೊಳ್ಳಬೇಕು. ವಿಮಾ ಕಂಪನಿಗಳಿಂದ ನಿರಂತರ ಮೋಸವಾಗುತ್ತಿದೆ. ಜಿಲ್ಲಾಧಿಕಾರಿಗಳು ವಿಮಾ ಕಂಪನಿಗಳ ವಿರುದ್ಧ ಕ್ರಮಕ್ಕೆ ಮುಂದಾಗಬೇಕು.-ಮಲ್ಲಿಕಾರ್ಜುನ ಹಕ್ರೆ, ಸಾಗರ.