ನಾವು ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರಾಗಿ ವರ್ಷಕ್ಕೊಮ್ಮೆ ರಕ್ತದಾನ ಮಾಡುವ ಮೂಲಕ ಮಾನವೀಯ ಮೌಲ್ಯ ಎತ್ತಿ ಹಿಡಿಯುವ ಕೆಲಸ ಮಾಡೋಣ

ಕನಕಗಿರಿ: ರೆಡ್ ಚಿಹ್ನೆಯು ನಂಬಿಕೆಯ ಸಂಕೇತವಾಗಿದ್ದು,ಯುದ್ಧ ಭೂಮಿಯಲ್ಲಿ ಗಾಯಗೊಂಡ ಶತ್ರುವಿಗೂ ಚಿಕಿತ್ಸೆ ನೀಡುವ ಈ ಸಂಸ್ಥೆಯ ಗುಣವು ದ್ವೇಷಕ್ಕಿಂತ ಮಾನವೀಯತೆ ದೊಡ್ಡದು ಎನ್ನುವ ಸಂದೇಶ ಸಾರುತ್ತಿದೆ ಎಂದು ಪಟ್ಟಣದ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಅಮರೇಶ ದೇವರಾಳ ಹೇಳಿದರು.

ಅವರು ಸ್ಥಳೀಯ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸಪ್ರದ ಕಾಲೇಜಿನಲ್ಲಿ ರೆಡ್ ಕ್ರಾಸ್ ಘಟಕದಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ರೆಡ್ ಕ್ರಾಸ್ ದಿನಾಚರಣೆಯಲ್ಲಿ ಮಾತನಾಡಿದರು.

ಮಾನವ ಕುಲಕ್ಕೆ ಸಲ್ಲಿಸಿದ ಅಪಾರ ಸೇವೆ ಮೆಚ್ಚಿ ಈ ಸಂಸ್ಥೆಗೆ ಮೂರು ಬಾರಿ ನೊಬೆಲ್ ಶಾಂತಿ ಪ್ರಶಸ್ತಿ (೧೯೧೭,೧೯೪೪ ಮತ್ತು ೧೯೬೩) ಲಭಿಸಿದೆ. ನಾವು ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರಾಗಿ ವರ್ಷಕ್ಕೊಮ್ಮೆ ರಕ್ತದಾನ ಮಾಡುವ ಮೂಲಕ ಮಾನವೀಯ ಮೌಲ್ಯ ಎತ್ತಿ ಹಿಡಿಯುವ ಕೆಲಸ ಮಾಡೋಣ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಬಜರಂಗಬಲಿ ಮಾತನಾಡಿ, ರಸ್ತೆ ಅಪಘಾತಗಳಾದಾಗ ಗಾಯಾಳುಗಳನ್ನು ರಕ್ಷಿಸದೇ ಫೋಟೋ ಅಥವಾ ವಿಡಿಯೊ ತೆಗೆಯುತ್ತಾ ನಿಲ್ಲುವ ಜನಗಳ ನಡುವೆ ಅಪಘಾತ ಉಂಟಾಗಿ ತುರ್ತು ಸಂದರ್ಭದಲ್ಲಿ ರಕ್ಷಣಾ ಮಾಡುವ ರೆಡ್ ಕ್ರಾಸ್ ಸಂಸ್ಥೆ ಕಾರ್ಯ ಶ್ಲಾಘನೀಯ. ವಿದ್ಯಾರ್ಥಿ ದಿಸೆಯಲ್ಲಿಯೇ ಇಂತಹ ಘಟಕಗಳ ಸದಸ್ಯರಾಗಿ ಮಾನವೀಯ ಗುಣ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ರೆಡ್ ಕ್ರಾಸ್ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಈ ವೇಳೆ ರೆಡ್ ಕ್ರಾಸ್ ಘಟಕದ ಸಂಯೋಜಕಿ ಸರ್ವಮಂಗಳಮ್ಮ, ಐಕ್ಯೂಎಸಿ ಘಟಕದ ಸಂಯೋಜಕ ರಕ್ಷಿತ್, ಸಾಂಸ್ಕೃತಿಕ ಘಟಕದ ಸಂಯೋಜಕ ಲಲಿತಾ ಕಿನ್ನಾಳ್, ಎನ್‌ಎಸ್‌ಎಸ್ ಘಟಕದ ಸಂಯೋಜಕ ವೀರೇಶ ಕೆಂಗಲ್, ಮಹಿಳಾ ಕೋಶದ ಸಂಯೋಜಕ ನಫೀಸ್ ಬಾನು, ಕ್ರೀಡಾ ಸಂಯೋಜಕ ಸಂಗಮೇಶ, ಉಪನ್ಯಾಸಕ ಸೋಮಶೇಖರ ಇತರರಿದ್ದರು.