ರೆಡ್ ಗ್ಲೋಬ್ ದ್ರಾಕ್ಷಿ ಲಾಭದಾಯಕ ಬೆಳೆ

| Published : Jun 24 2024, 01:32 AM IST

ಸಾರಾಂಶ

ಜಿಲ್ಲೆಯಲ್ಲಿ ಬೆಂಗಳೂರು ಬ್ಲೂ, ದಿಲ್ ಖುಷ್, ಅನಾಬಿಷಾ, ಸೀಡ್ ಲೆಸ್, ಶರತ್, ಕೃಷ್ಣ ಸೇರಿದಂತೆ ಹಲವು ಬಗೆಯ ದ್ರಾಕ್ಷಿ ಬೆಳೆಯಲಾಗುತ್ತಿತ್ತು. ಆದರೆ ಕಾಲ ಕ್ರಮೇಣ ಅನುಕೂಲಸ್ಥ ಕೆಲವು ರೈತರು ಈಗ ಅಮೇರಿಕನ್ ತಳಿಯಾದ ರೆಡ್ ಗ್ಲೋಬ್ ದ್ರಾಕ್ಷಿ ಬೆಳೆಯಲು ಮುಂದಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯಲ್ಲಿ ವಿವಿಧ ತಳಿಯ ದ್ರಾಕ್ಷಿ ಬೆಳೆದು ದೇಶ ವಿದೇಶಗಳಿಗೆ ರಪ್ತು ಮಾಡುವುದರಲ್ಲಿ ಹೆಸರುವಾಸಿಯಾಗಿದೆ. ಸ್ವದೇಶಿ ದ್ರಾಕ್ಷಿಗೆ ಬೇಡಿಕೆ ಕಡಿಮೆಯಾದ ಕಾರಣ ಕೆಲವು ರೈತರು ಹೆಚ್ಚು ಆದಾಯ ತರುವ ವಿದೇಶಿ ತಳಿ ದ್ರಾಕ್ಷಿ ಬೆಳೆಯಲಾರಂಭಿಸಿದ್ದಾರೆ. ಅಲ್ಲದೆ ಅಮೆರಿಕನ್ ರೆಡ್ ಗ್ಲೋಬ್ ದ್ರಾಕ್ಷಿ ಬೆಳೆಯಲು ಮುಂದಾಗಿದ್ದಾರೆ.

ದೇಸಿಗೂ ಸೈ, ವಿದೇಶಿಗೂ ಸೈ ಎಂದು ತಾಲೂಕಿನ ಅಜ್ಜವಾರ ಗ್ರಾಮದ ಪ್ರತಿಪರ ರೈತ ಕೆ.ಆರ್.ರೆಡ್ಡಿ ಐದು ಎಕರೆ ಜಮೀನಿನಲ್ಲಿ ಅಮೆರಿಕನ್ ರೆಡ್ ಗ್ಲೋಬ್ ದ್ರಾಕ್ಷಿ ಬೆಳೆದು ಉತ್ತಮ ಆದಾಯ ಪಡೆಯುತ್ತಿದ್ದಾರೆ. ವಿದೇಶಿ ತಳಿಗೆ ಬೇಡಿಕೆ

ಜಿಲ್ಲೆಯಲ್ಲಿ ಬೆಂಗಳೂರು ಬ್ಲೂ, ದಿಲ್ ಖುಷ್, ಅನಾಬಿಷಾ, ಸೀಡ್ ಲೆಸ್, ಶರತ್, ಕೃಷ್ಣ ಸೇರಿದಂತೆ ಹಲವು ಬಗೆಯ ದ್ರಾಕ್ಷಿ ಬೆಳೆಯಲಾಗುತ್ತಿತ್ತು. ಆದರೆ ಕಾಲ ಕ್ರಮೇಣ ಸ್ವದೇಶಿ ದ್ರಾಕ್ಷಿಗೆ ಬೇಡಿಕೆ ಕಡಿಮೆಯಾದ ಕಾರಣ ಅನುಕೂಲಸ್ಥ ಕೆಲವು ರೈತರು ಈಗ ಅಮೇರಿಕನ್ ತಳಿಯಾದ ರೆಡ್ ಗ್ಲೋಬ್ ದ್ರಾಕ್ಷಿ ಬೆಳೆಯಲು ಮುಂದಾಗಿದ್ದಾರೆ.

ರೆಡ್ ಗ್ಲೋಬ್ ದ್ರಾಕ್ಷಿಗೆ ರೈತರ ತೋಟದಲ್ಲಿ ಕೆಜಿಗೆ 100ರಿಂದ 115 ರುಪಾಯಿ ಇದೆ. ಕೇರಳ, ಆಂದ್ರಪ್ರದೇಶ, ತೆಲಾಂಗಣ, ತಮಿಳುನಾಡು, ಮಹಾರಾಷ್ಟ್ರ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಸೇರಿದಂತೆ ವಿವಿಧ ರಾಜ್ಯಗಳು ಸೇರಿದಂತೆ ವಿದೇಶಗಳಿಗೆ ರಪ್ತು ಆಗುತ್ತಿದೆ.

ಬೇಗ ಹಾಳಾಗುವುದಿಲ್ಲ

ರೆಡ್ ಗ್ಲೊಬ್ ದ್ರಾಕ್ಷಿಯು ತೋಟದಿಂದ ಕಟಾವು ಮಾಡಿದ ನಂತರ 20 ದಿನಗಳ ಕಾಲ ಶೀತಲೀಕರಣದಲ್ಲಿಡದಿದ್ದರೂ ಸಾಮಾನ್ಯವಾಗಿ ಹಾಳಾಗುವುದಿಲ್ಲ. ಹಣ್ಣು ಗಟ್ಟಿಯಾಗಿದ್ದು, ಕಲರ್ ಕಲರ್ ಆಗಿರುತ್ತದೆ. ಮಾಗಿದಷ್ಟು ರುಚಿ ಹೆಚ್ಚಾಗುತ್ತೆ. ಇದರಿಂದ ಕೆಲವು ಯುರೋಪ್ ದೇಶಗಳಲ್ಲಿ ರೆಡ್ ಗ್ಲೊಬ್ ದ್ರಾಕ್ಷಿ ಗೆ ಭಾರಿ ಬೇಡಿಕೆ ಇದೆ ಎಂದು ಕೆ.ಆರ್.ರೆಡ್ಡಿ ತಿಳಿಸಿದರು.

ರೆಡ್ ಗ್ಲೋಬ್ ದ್ರಾಕ್ಷಿ ದ್ರಾಕ್ಷಿ ಬೆಳೆಯಲು ಪ್ರತಿ ಎಕರೆಗೆ ಸುಮಾರು ಏಳು ಲಕ್ಷ ರೂ ಖರ್ಚಾಗುತ್ತದೆ. ಈ ಬಾರಿ ಎಕರೆಗೆ 10 ಟನ್ ನಂತೆ ಐದು ಎಕರೆಯಲ್ಲಿ 50 ಟನ್ ಬೆಳೆ ಬಂದಿದೆ. ರೆಡ್ ಗ್ಲೋಬ್ ದ್ರಾಕ್ಷಿಗಳು ದೊಡ್ಡದಾದ, ಬೀಜದ, ಗುಲಾಬಿ-ಕೆಂಪು ದ್ರಾಕ್ಷಿಗಳು ದೃಢವಾದ, ಗರಿಗರಿಯಾದ ಖಂಡವನ್ನು ಹೊಂದಿ, ಸಾಕಷ್ಟು ಸಿಹಿಯಾಗಿರುತ್ತವೆ. ದ್ರಾಕ್ಷಿಯನ್ನು ಔಷಧವಾಗಿ ಬಳಸಲಾಗುತ್ತದೆ.