ಸಾರಾಂಶ
ಮುದ್ದೇಬಿಹಾಳ: ಶಾಸಕ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ತಮ್ಮ ಗೃಹ ಕಚೇರಿಯಲ್ಲಿ ತಾಲೂಕಿನ ಹಾಗೂ ಪಟ್ಟಣದ ವಿವಿಧ ಸಂಘ ಸಂಸ್ಥೆಯ ಮುಖಂಡರ, ಗಣ್ಯರ, ವಕೀಲ ಸಂಘದವರೊಂದಿಗೆ ಸಭೆ ನಡೆಸಿದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಪಟ್ಟಣದಲ್ಲಿ ಸೆಪ್ಟೆಂಬರ್ 1 ರಂದು ನಡೆಯಲಿರುವ ಎಪಿಎಂಸಿ ಬಡಾವಣೆಯಲ್ಲಿರುವ ರೆಡ್ಡಿ ಸಮಾಜದ ಬ್ಯಾಂಕಿನ ನೂತನ ಕಟ್ಟಡ ಉದ್ಘಾಟನೆ ಹಾಗೂ ಪಟ್ಟಣದ ಬಿದರಕುಂದಿ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ಉದ್ಯಾನ ಟ್ರೀ ಪಾರ್ಕ್ ಲೋಕಾರ್ಪಣೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಗುರುವಾರ ತಾಲೂಕು ಹಾಗೂ ಪಟ್ಟಣದ ವಿವಿಧ ಸಂಘ ಸಂಸ್ಥೆಯ ಮುಖಂಡರು, ಗಣ್ಯರು, ವಕೀಲ ಸಂಘದವರ ಸಭೆ ನಡೆಸಿ ಅವರು ಮಾತನಾಡಿದರು. ಮೊದಲಿನಿಂದಲೂ ಮುದ್ದೇಬಿಹಾಳ ಪಟ್ಟಣದಲ್ಲಿ ಸುಸಜ್ಜಿತ ಹಾಗೂ ಅತ್ಯಾಕರ್ಷಕ ಉದ್ಯಾನವನ ನಿರ್ಮಿಸಬೇಕು ಎಂಬ ಕನಸು ಕಂಡಿದ್ದೆ. ಅದರಂತೆ ಸದ್ಯ ಬಿದರಕುಂದಿ ವ್ಯಾಪ್ತಿಯ ಸುಮಾರು 35 ಎಕರೆ ಸರ್ಕಾರಿ ಜಾಗದಲ್ಲಿ ಸುಂದರ ಟ್ರೀಪಾರ್ಕ್ ನಿರ್ಮಾಣಗೊಳ್ಳುತ್ತಿದೆ ಎಂದರು.
ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದೆ. ಹೀಗಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಆಗಮಿಸಿ, ಉದ್ಘಾಟಿಸಲಿದ್ದಾರೆ. ಅದರಂತೆ ರೆಡ್ಡಿ ಸಮಾಜದ ಬ್ಯಾಂಕ್ ಹಲವು ವರ್ಷಗಳಿಂದ ಸಮಾಜಮುಖಿಯಾಗಿ ಹಣಕಾಸಿವ ಲೇವಾದೇವಿ ನಡೆಸುವ ಮೂಲಕ ಸಣ್ಣ ಮತ್ತು ಮಧ್ಯಮ ವ್ಯಾಪಾರಸ್ಥರ ಜನಸ್ನೇಹಿಯಾಗಿ ಬೆಳೆದುಬಂದಿದೆ. ಆದರೆ ಬ್ಯಾಂಕಿಗೆ ಸ್ವಂತ ಕಟ್ಟಡವಿಲ್ಲದೇ ಇಷ್ಟು ದಿನ ಬಾಡಿಗೆ ಕಟ್ಟಡದಲ್ಲಿ ಸೇವೆ ಪ್ರಾರಂಭಿಸಿತ್ತು. ಈಗ ಎಪಿಎಂಸಿ ಬಡಾವಣೆಯಲ್ಲಿ ರೆಡ್ಡಿ ಬ್ಯಾಂಕ್‌ನ ಸ್ವಂತ ಕಟ್ಟಡ ನಿರ್ಮಾಣಗೊಂಡಿದೆ. ಹೀಗಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಸಕ್ಕರೆ ಸಚಿವ ಶಿವಾನಂದ ಪಾಟೀಲ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ. ಈ ನಿಟ್ಟಿನಲ್ಲಿ ಪಟ್ಟಣದ ಎಲ್ಲ ವ್ಯಾಪಾರಸ್ಥರು, ಗಣ್ಯರು, ಸಾಹಿತಿಗಳು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಮಹಿಳಾ ಮುಖಂಡರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕೋರಿದರು.ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಸೆ.1 ರಂದು ಬೆಳಗ್ಗೆ 10.30ಕ್ಕೆ ಟ್ರೀ ಪಾರ್ಕ್ ಲೋಕಾರ್ಪಣೆಗೊಳಿಸಿದ ಬಳಿಕ ರೆಡ್ಡಿ ಬ್ಯಾಂಕಿನ ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ನಂತರ ಮಳೆಯ ಕಾರಣ ಕಾರ್ಯಕ್ರಮವನ್ನು ಆಲಮಟ್ಟಿ ರಸ್ತೆ ಮಾರ್ಗದಲ್ಲಿರುವ ಮದರಿ ಕಲ್ಯಾಣ ಮಂಟಪದಲ್ಲಿ ನಡೆಸಲು ತಿರ್ಮಾನಿಸಲಾಗಿದೆ. ಹೀಗಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಊಟ ಉಪಹಾರದ ವ್ಯವಸ್ಥೆ ಕೈಗೊಳ್ಳಲು ಮುಖಂಡರ ನೇತೃತ್ವದಲ್ಲಿ ತಿರ್ಮಾನಿಸಲಾಯಿತು.
ಈ ವೇಳೆ ನಿಕಟಪೂರ್ವ ಕಸಾಪ ಅಧ್ಯಕ್ಷ ಎಂ.ಬಿ.ನಾವದಗಿ, ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ ಬಿ.ಕೆ.ಬಿರಾದಾರ, ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ಕರ್ನಾಟಕ ಕೋ ಆಪ್ ಬ್ಯಾಂಕಿನ ಅಧ್ಯಕ್ಷ ಸಿ.ಎಲ್.ಬಿರಾದಾರ, ಅಬ್ದುಲಗಫೂರಸಾಬ್ ಮಕಾನಂದಾರ, ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ, ಸತೀಶ ಓಸ್ವಾಲ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ರಾಜುಗೌಡ ಕೊಂಗಿ, ವೆಂಕನಗೌಡ ಪಾಟೀಲ, ಅಮರೇಶ ಗೂಳಿ, ಸಂಗನಗೌಡ ಬಿರಾದಾರ, ಶರಣು ಸಜ್ಜನ, ಗಣೇಶ ಅನ್ನಗೋನಿ, ಬಿ.ಆರ್.ನಾಡಗೌಡ, ಸುರೇಶಗೌಡ ಪಾಟೀಲ, ಕಾಮರಾಜ ಬಿರಾದಾರ, ಗೋಪಿ ಮಡಿವಾಳರ, ನ್ಯಾಯವಾದಿ ಬಿ.ಎಂ.ಮುಂದಿನಮನಿ, ಎಂ.ಎಚ್.ಹಾಲಣ್ಣವರ ಸೇರಿದಂತೆ ಹಲವರು ಇದ್ದರು.