ಜಿಲ್ಲೆಯಲ್ಲಿ ತಗ್ಗಿದ ಮಳೆ: 3800 ಹೆಕ್ಟೇರ್‌ ಬೆಳೆ ಜಲಾವೃತ

| Published : Jul 29 2024, 12:48 AM IST

ಜಿಲ್ಲೆಯಲ್ಲಿ ತಗ್ಗಿದ ಮಳೆ: 3800 ಹೆಕ್ಟೇರ್‌ ಬೆಳೆ ಜಲಾವೃತ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ತಾಲೂಕಿನ ಗಾಜನೂರಿನ ಬಳಿ ಇರುವ ತುಂಗಾ ಜಲಾಶಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಬಾಗಿನ ಅರ್ಪಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯಲ್ಲಿ ಕಳೆದ ಮೂರು ದಿನದಿಂದ ಅಬ್ಬರಿಸಿದ್ದ ಮಳೆ ಭಾನುವಾರ ಕೊಂಚ ತಗ್ಗಿತ್ತು. ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಶಿವಮೊಗ್ಗ ನಗರದಲ್ಲಿ ನೆರೆ ಭೀತಿಯೂ ಕಡಿಮೆಯಾಗಿದೆ.

ಜುಲೈನಲ್ಲಿ ಸರಾಸರಿ 668.0 ಮೀ.ಮೀ ವಾಡಿಕೆ ಮಳೆ ಇದ್ದು, 1109 ಮೀ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ನೆರೆಹಾವಳಿಯಿಂದಾಗಿ ನಾಲ್ವರು ಸಾವನ್ನಪ್ಪಿದ್ದಾರೆ. ಈಗಾಗಲೆ 2 ಪ್ರಕರಣಗಳಿಗೆ 5 ಲಕ್ಷದಂತೆ ಮಾರ್ಗಸೂಚಿಯಂತೆ ಪರಿಹಾರ ವಿತರಿಸಲಾಗಿದೆ. ಜಿಲ್ಲೆಯಲ್ಲಿ ನೆರೆಹಾವಳಿಯಿಂದಾಗಿ ಒಟ್ಟು 10 ಜಾನುವಾರು ಮೃತಪಟ್ಟಿದ್ದು, 8 ಪ್ರಕರಣಗಳ ವಾರಸುದಾರರಿಗೆ ತಲಾ 37 ಲಕ್ಷ ರು. ಪರಿಹಾರ ಧನ ವಿತರಿಸಲಾಗಿದೆ.

ಅತಿ ಹೆಚ್ಚು ಮಳೆಯಿಂದ ಜಿಲ್ಲೆಯಲ್ಲಿ 18 ಮನೆ ಪೂರ್ಣಹಾನಿಯಾಗಿದ್ದು, 5 ಮನೆಗಳ ವಾರಸುದಾರರಿಗೆ ಈಗಾಗಲೆ 1.20 ಲಕ್ಷ ರು. ರಿಂದ 6 ಲಕ್ಷ ರು. ಪರಿಹಾರ ವಿತರಿಸಲಾಗಿದೆ. 437 ಮನೆಗಳು ಭಾಗಶಃ ಹಾನಿಯಾಗಿದ್ದು, 40 ಮನೆಗಳಿಗೆ 1.71 ಲಕ್ಷ ರು, ಪರಿಹಾರ ವಿತರಿಸಲಾಗಿದೆ. ಉಳಿದ ಮನೆಗಳಿಗೆ ಶೀಘ್ರವಾಗಿ ಪರಿಹಾರ ವಿತರಣೆಗೆ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.

3800 ಹೆಕ್ಟೇರ್‌ ಬೆಳೆ ಜಲಾವೃತ:

ಜಿಲ್ಲೆಯಲ್ಲಿ 1540 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಮತ್ತು 2300 ಹೆಕ್ಟೇರ್‌ ಪ್ರದೇಶದಲ್ಲಿ ಮುಸುಕಿನ ಜೋಳ ಕೃಷಿಬೆಳೆಗಳು ಜಲಾವೃತವಾಗಿದೆ. 767 ವಿದ್ಯುತ್ ಕಂಬಗಳು ಹಾನಿಯಾಗಿದೆ ಹಾಗೂ 16 ಟ್ರಾನ್ಸ್ ಪಾರ್ಮರ್ ಗಳು ಹಾನಿಯಾಗಿವೆ. 41.63 ಕಿ.ಮೀ. ರಾಜ್ಯ ಹೆದ್ದಾರಿ, 65.96 ಕಿ.ಮೀ. ಜಿಲ್ಲೆ ಮುಖ್ಯ ರಸ್ತೆ, 610.43 ಕಿ.ಮೀ. ಗ್ರಾಮೀಣ ರಸ್ತೆ, ಹಾನಿಯಾಗಿರುತ್ತದೆ ಜಿಲ್ಲೆಯಲ್ಲಿ ಪ್ರವಾಹದಿಂದಾಗಿ 111 ಸೇತುವೆಗಳು ಹಾನಿಯಾಗಿರುತ್ತದೆ. 381 ಶಾಲಾ ಕಟ್ಟಡಗಳು, 260 ಅಂಗನವಾಡಿ ಕಟ್ಟಡಗಳು ಹಾಗೂ 9 ಆರೋಗ್ಯ ಕೇಂದ್ರಗಳು ಹಾನಿಗೊಳಗಾಗಿರುತ್ತವೆ. 97 ಕರೆಗಳು ಹಾನಿಯಾಗಿವೆ.

ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಲಿನಕುರುವಳ್ಳಿ ಗ್ರಾಮ ಪಂಚಾಯತಿ ವಿಠಲನಗರ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಗುಡ್ಡ ಕುಸಿದು ತಡೆಗೋಡೆ ಹಾನಿಯಾಗಿದೆ. ರಾಷ್ಟ್ರೀಯ ಹೆದ್ದಾರಿ 169ಎ ತೀರ್ಥಹಳ್ಳಿ -ಮಲ್ಪೆ ರಸ್ತೆಯ ಆಗುಂಬೆ ಘಾಟಿಯಲ್ಲಿ ಭಾರಿ ಮಳೆಯಿಂದಾಗಿ ಮತ್ತು ಭಾರಿ ವಾಹನಗಳ ಒಡಾಟದಿಂದಾಗಿ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಭೂಕುಸಿತವಾಗುವ ಸಂಭವವಿರುವುದರಿಂದ ಭಾರಿವಾಹನಗಳ ಸಂಚಾರ ನಿಷೇಧಿಸಿ ಬದಲಿ ಮಾರ್ಗ ವಾಹನ ಸಂಚಾರಕ್ಕೆ ಅನುವು ಕೊಡಲಾಗಿದೆ.

ಶಿವಮೊಗ್ಗ ಜಿಲ್ಲೆಯ ಗಾಜನೂರು ಜಲಾಶಯದಿಂದ ಶನಿವಾರ 74105 ಕ್ಯುಸೆಕ್ಸ್ ನೀರು ಹೊರಬಿಡಲಾಗುತ್ತಿದ್ದು, ಮಳೆ ಹೆಚ್ಚಾದಲ್ಲಿ ಜಲಾಶಯದ ಹೊರ ಹರಿವು ಹೆಚ್ಚಾದಲ್ಲಿ ಶಿವಮೊಗ್ಗ ನಗರ ವ್ಯಾಪ್ತಿ ವೆಂಕಟೇಶ್ವರ ನಗರ ಮತ್ತು ನ್ಯೂ ಮಂಡ್ಲಿ, ಗಾಂಧಿನಗರ, ಇಮಾಮ್ ಬಾಡ, ವಿದ್ಯಾನಗರದ ಕೆಲವು ಪ್ರದೇಶಗಳಲ್ಲಿ ನೀರು ನುಗ್ಗುವ ಸಾಧ್ಯತೆ ಇರುತ್ತದೆ. ತುರ್ತು ಸಂದರ್ಭದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಸದರಿ ಪ್ರದೇಶಗಳ ನಿರ್ವಹಣೆ ಮಾಡಲು ತಂಡಗಳನ್ನು ರಚಿಸಿ ಕ್ರಮವಹಿಸಲು ಸೂಚಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಹ ಸಂದರ್ಭದಲ್ಲಿ ಉಪಯೋಗಿಸಲು ಒಟ್ಟು 103 ಕಾಳಜಿ ಕೇಂದ್ರಗಳನ್ನು ಗುರಿತಿಸಿಟ್ಟುಕೊಳ್ಳಲಾಗಿದೆ. ಈಗಾಗಲೆ ಶಿವಮೊಗ್ಗ ನಗರ ಮತ್ತು ಸಾಗರ ತಾಲೂಕು ತಾಳಗುಪ್ಪ ಹೋಬಳಿ ಮಂಡಗಳಲೆ ಗ್ರಾಮದಲ್ಲಿ ಮನೆಗೋಡೆಗಳು ಶಿಥಿಲಗೊಂಡಿರುವುದರಿಂದ 2 ಕಾಳಜಿ ಕೆಂದ್ರಗಳನ್ನು ತೆರೆಯಲಾಗಿದೆ. ಜಿಲ್ಲೆಯಲ್ಲಿ ಗ್ರಾಮೀಣ ವ್ಯಾಪ್ತಿಯಲ್ಲಿ ಗ್ರಾಮ ವಿಪತ್ತು ನಿರ್ವಹಣಾ ತಂಡಗಳನ್ನು ರಚಿಸಲಾಗಿದ್ದು ತುರ್ತು ಸಂದರ್ಭದಲ್ಲಿ ಕ್ರಮವಹಿಸಲು ಸೂಚಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ ವಿಪತ್ತು ನಿರ್ವಹಣಾ ತಂಡಗಳನ್ನು ರಚಿಸಲಾಗಿದೆ.

ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಕ್ಕಾಗಿ ಲಭ್ಯವಿರುವ ಸುರಕ್ಷತಾ ಉಪಕರಣಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲು ಜಿಲ್ಲಾ ಅಗ್ನಿಶಾಮಕದಳ ಇವರಿಗೆ ಸೂಚಿಸಲಾಗಿದೆ. ಹಾಗೂ 15 ಜನಗಳ ಎಸ್‌ಡಿಆರ್‌ಎಫ್‌ ತಂಡವನ್ನು ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ಜಿಲ್ಲಾ ಕೇಂದ್ರದಲ್ಲಿ ಇರಿಸಿಕೊಳ್ಳಲಾಗಿದೆ.

ತುಂಗೆಗೆ ಸಚಿವರಿಂದ ಬಾಗಿನ ಸಮರ್ಪಣೆ:

ಶಿವಮೊಗ್ಗ: ಮೈದುಂಬಿ ಹರಿಯುತ್ತಿರುವ ತುಂಗಾ ಜಲಾಶಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಬಾಗಿನ ಅರ್ಪಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಭಾನು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಮುಖಂಡರಾದ ಕಲಗೋಡು ರತ್ನಾಕರ್, ಜಿ.ಡಿ ಮಂಜುನಾಥ್, ಎನ್.ರಮೇಶ್, ಎಸ್.ಕೆ ಮರಿಯಪ್ಪ, ಶಾಂತವೀರ ನಾಯ್ಕ್, ಖಲೀಂ ಪಾಷಾ, ವಿಜಯ್ ಕುಮಾರ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೇರಿ ಹಲವರಿದ್ದರು.

ಕಳೆದ ವರ್ಷ ಮಳೆ ಕೊರತೆಯಿಂದ ಭಾರೀ ಪ್ರಮಾಣದ ನೀರಿನ ಕೊರತೆ ಎದುರಿಸಿದ್ದ ಮಧ್ಯ ಕರ್ನಾಟಕ ಭಾಗದ ಪ್ರಮುಖ ಜಲಾಶಯವಾದ ಭದ್ರಾ, ಪ್ರಸ್ತುತ ವರ್ಷ ಬೀಳುತ್ತಿರುವ ಉತ್ತಮ ಮುಂಗಾರು ಮಳೆಗೆ ಗರಿಷ್ಠ ಮಟ್ಟ ತಲುಪುವ ಹಂತಕ್ಕೆ ಬಂದಿದೆ.

ಭಾನುವಾರದ ಬೆಳಗ್ಗೆ ಭದ್ರಾ ಡ್ಯಾಂ ನೀರಿನ ಮಟ್ಟ 180.7 ಅಡಿ ತಲುಪಿದೆ. ಡ್ಯಾಂ ಗರಿಷ್ಠ ಮಟ್ಟವಾದ 186 ಅಡಿ ತಲುಪಲು ಇನ್ನೂ ಕೇವಲ 6 ಅಡಿ ನೀರು ಮಾತ್ರ ಬೇಕಾಗಿದೆ. ಸದ್ಯ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಮಳೆಯ ತೀವ್ರತೆಯಲ್ಲಿ ಕೊಂಚ ಇಳಿಕೆಯಾಗಿದೆ.

ನೆರೆಹಾನಿ ಪ್ರದೇಶಕ್ಕೆ ಸಚಿವರ ಭೇಟಿ:

ನೆರೆ ಹಾನಿ ಪ್ರದೇಶಗಳಿಗೆ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದರು. ಜಿಲ್ಲೆಯಲ್ಲಿ ಸುರಿದ ಮಹಾಮಳೆಗೆ ಶಿವಮೊಗ್ಗ ನಗರದ ಮಂಡ್ಲಿ, ಸವಾಯಿಪಾಳ್ಯ, ಇಮಾಂಬಾಡ, ಸೀಗೆಹಟ್ಟಿ, ವಿದ್ಯಾನಗರ, ಭೋವಿ ಕಾಲೋನಿಗಳು ಜಲಾವೃತಗೊಂಡಿದ್ದವು. ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ನಿವಾಸಿಗಳಿಂದ ಅಹವಾಲು ಸ್ವೀಕರಿಸಿದ ಸಚಿವರು, ಮಾಹಿತಿ ಪಡೆದುಕೊಂಡರು.

ಪ್ರತಿ ಮಳೆಗಾಲದಲ್ಲಿ ಈ ರೀತಿ ಸಮಸ್ಯೆ ತಲೆದೋರುತ್ತಿದೆ. ತುಂಗಾ ನದಿ ನೀರು ನೆರೆ ಬಂದು ಮನೆಗಳಿಗೆ ನುಗ್ಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಂತೆ ನಿವಾಸಿಗಳು ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಸಚಿವರು ಶೀಘ್ರದಲ್ಲೇ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದರು.

ಮನೆ ಕುಸಿತ ಪರಿಹಾರಕ್ಕೆ ಸೂಚನೆ:

ಮಳೆ ಗಾಳಿಯಿಂದಾಗಿ ಶಿವಮೊಗ್ಗ ವಿದ್ಯಾನಗರದ ಭೋವಿ ಕಾಲೋನಿ ನಿವಾಸಿಯಾದ ಲಕ್ಷ್ಮಮ್ಮ, ಕೃಷ್ಣಪ್ಪ ಅವರ ಮನೆಯು ಕುಸಿದಿದ್ದು,ಅವರ ಮನೆಗೆ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಅವರ ಕುಂದು-ಕೊರತೆ ಆಲಿಸಿ, ತುರ್ತಾಗಿ ಸರ್ಕಾರದಿಂದ ಪರಿಹಾರ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಭಾನು,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್,ಮುಖಂಡರಾದ ಕಲಗೋಡು ರತ್ನಾಕರ್,ಜಿ.ಡಿ ಮಂಜುನಾಥ್,ಎನ್ ರಮೇಶ್,ಎಸ್.ಕೆ ಮರಿಯಪ್ಪ,ಜಿಲ್ಲಾಧಿಕಾರಿ ಗುರುದತ್ತ ಹೆಗಡೆ,ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್, ಉಪವಿಭಾಗಾಧಿಕಾರಿ ಸತ್ಯನಾರಾಯಣ ಸೇರಿದಂತೆ ಮತ್ತಿತರರು ಇದ್ದರು.