ರಾಜ್ಯ ಸರ್ಕಾರದ ಉಚಿತ ಗ್ಯಾರಂಟಿಗಳಿಂದ ಅನುದಾನ ಕಡಿತ: ಜೆಡಿಎಸ್‌ ನಾಯಕ ಎಚ್‌.ಡಿ.ರೇವಣ್ಣ ಆರೋಪ

| Published : Feb 10 2024, 01:46 AM IST

ರಾಜ್ಯ ಸರ್ಕಾರದ ಉಚಿತ ಗ್ಯಾರಂಟಿಗಳಿಂದ ಅನುದಾನ ಕಡಿತ: ಜೆಡಿಎಸ್‌ ನಾಯಕ ಎಚ್‌.ಡಿ.ರೇವಣ್ಣ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರವು ಬಿಟ್ಟಿ ಭಾಗ್ಯಗಳ ಯೋಜನೆ ಜಾರಿಗಾಗಿ ಅಗತ್ಯ ಸೌಲಭ್ಯಗಳಿಗೆ ನೀಡುತ್ತಿದ್ದ ಅನುದಾನವನ್ನು ಕಡಿತಗೊಳಿಸಿದ ಕಾರಣದಿಂದ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂದು ಶಾಸಕ ಎಚ್.ಡಿ.ರೇವಣ್ಣ ಆರೋಪಿಸಿದರು. ಹೊಳೆನರಸೀಪುರದಲ್ಲಿ ೨೦೨೪-೨೫ ನೇ ಸಾಲಿನ ಅಯವ್ಯಯ ಪಟ್ಟಿ ಸಿದ್ಧತೆಗಾಗಿ ಆಯೋಜನೆ ಮಾಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

2024-25ನೇ ಸಾಲಿನ ಆಯವ್ಯಯ ಪಟ್ಟಿ ಸಿದ್ಧತೆಯ ಪೂರ್ವಭಾವಿ ಸಭೆ

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ರಾಜ್ಯ ಸರ್ಕಾರವು ಬಿಟ್ಟಿ ಭಾಗ್ಯಗಳ ಯೋಜನೆ ಜಾರಿಗಾಗಿ ಅಗತ್ಯ ಸೌಲಭ್ಯಗಳಿಗೆ ನೀಡುತ್ತಿದ್ದ ಅನುದಾನವನ್ನು ಕಡಿತಗೊಳಿಸಿದ ಕಾರಣದಿಂದ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂದು ಶಾಸಕ ಎಚ್.ಡಿ.ರೇವಣ್ಣ ಆರೋಪಿಸಿದರು.

ಪಟ್ಟಣದ ಪುರಸಭೆಯ ಎಚ್.ಡಿ.ದೇವೇಗೌಡ ಸಭಾಂಗಣದಲ್ಲಿ ೨೦೨೪-೨೫ ನೇ ಸಾಲಿನ ಅಯವ್ಯಯ ಪಟ್ಟಿ ಸಿದ್ಧತೆಗಾಗಿ ಆಯೋಜನೆ ಮಾಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಜಿ ಪ್ರಧಾನಿ ದೇವೇಗೌಡರು ಶಾಸಕರಾಗಿದ್ದ ಅವಧಿಯಲ್ಲಿ ೧೯೮೦-೮೧ರ ಸಾಲಿನಲ್ಲಿ ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ನಡೆದಿತ್ತು. ಆದರೆ ಆಲ್ಲಿಂದ ಇಲ್ಲಿಯವರೆಗೆ ಹೊಸ ಒಳಚರಂಡಿ ಯೋಜನೆ ಕಾಮಗಾರಿಗಳು ನಡೆಯದೇ ಸಮಸ್ಯೆ ಉಲ್ಬಣಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕಳೆದ ಎರಡು ವರ್ಷಗಳ ಹಿಂದೆ ಪಟ್ಟಣಕ್ಕೆ ಹೊಸದಾಗಿ ಒಳಚರಂಡಿ ಯೋಜನೆಗೆ ೧೨೬ ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ನಡೆಸಲು ನೀಲನಕ್ಷೆ ಸಿದ್ಧಪಡಿಸಿ, ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಆದರೆ ಆರ್ಥಿಕ ಇಲಾಖೆ ಪ್ರಸ್ತಾವನೆಯನ್ನು ಹಿಂದಕ್ಕೆ ಕಳುಹಿಸಿದೆ. ಇದೀಗ ಮತ್ತೊಮ್ಮೆ ನೀಲನಕ್ಷೆ ಮತ್ತು ಅಂದಾಜು ವೆಚ್ಚದ ದಾಖಲೆಯನ್ನು ಕಳುಹಿಸಲಾಗಿದೆ. ಆರ್ಥಿಕ ಇಲಾಖೆಯಿಂದ ಅನುಮೋದನೆ ದೊರೆಯುವ ವಿಶ್ವಾಸ ಇದೆ. ಪಟ್ಟಣದಲ್ಲಿ ಕುಡಿಯುವ ನೀರಿನ ಯೋಜನೆಗಾಗಿ ೬೪ ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು, ಸದ್ಯದಲ್ಲೆ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ ಎಂದು ತಿಳಿಸಿದರು.

ಪಟ್ಟಣದ ಪತಂಜಲಿ ಯೋಗಾಭವನದ ಮೊದಲ ಅಂತಸ್ತಿನಲ್ಲಿ ತಾಲೂ ಪತ್ರಕರ್ತರ ಸಂಘದ ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿ, ಅಗತ್ಯ ಕ್ರಮಕೈಗೊಳ್ಳುವಂತೆ ಮುಖ್ಯಾಧಿಕಾರಿಗೆ ಸೂಚಿಸಿದರು.

ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ವಿ.ಸುರೇಶ್ ಕುಮಾರ್, ಶಾಂತಿ ವಾಹನ, ಪುರಸಭೆ ವ್ಯಾಪ್ತಿಯ ಬಡ ರೋಗಿಗಳಿಗೆ ಹಾಗೂ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೆರಳುವ ಕ್ರೀಡಾಪಟುಗಳಿಗೆ ಧನಸಹಾಯವನ್ನು ಹಿಂದೆ ನೀಡಲಾಗುತ್ತಿತ್ತು, ಆದರೆ ಇತ್ತೀಚಿನ ವರ್ಷಗಳಲ್ಲಿ ನಿಲ್ಲಿಸಲಾಗಿದೆ, ಪುನಃ ಪ್ರಾರಂಭಿಸುವಂತೆ ನೀಡಿದ ಸಲಹೆಗೆ ಶಾಸಕರು ಒಪ್ಪಿಗೆ ಸೂಚಿಸಿ, ಅಯವ್ಯಯದಲ್ಲಿ ಸೇರಿಸಿ, ಶಾಂತಿ ವಾಹನ ಖರೀದಿಸುವಂತೆ ತಿಳಿಸಿದರು.

ಮುಖ್ಯಾಧಿಕಾರಿ ಮಹೇಂದ್ರ ಉತ್ತರ ನೀಡುತ್ತ, ಡಿಸಿಎಂಎಸ್ ಯೋಜನೆ ಮೂಲಕ ರಾಜ್ಯ ಸರ್ಕಾರವು ಎಲ್‌ಇಡಿ ಬಲ್ಬ್ ಅಳವಡಿಸಲು ರಾಜ್ಯ ಮಟ್ಟದಲ್ಲಿ ಟೆಂಡರ್ ಕರೆಯುತ್ತಿದ್ದು, ಎಲ್‌ಇಡಿ ಬಲ್ಬ ಅಳವಡಿಸಿದಲ್ಲಿ ತೆರಿಗೆ ಹಣವು ಪೋಲಾಗುತ್ತದೆ, ಆದರೆ ಪಟ್ಟಣದಲ್ಲಿ ಅಳವಡಿಸಿರುವ ಬೀದಿ ದೀಪಗಳ ದುರಸ್ತಿಗೆ ಅವಕಾಶ ಇದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಉಪಸ್ಥಿತರಿದ್ದ ನಾಗರಿಕರು ತಮ್ಮ ಬೀದಿಗಳ ಸಮಸ್ಯೆಗಳ ಕುರಿತು ಸಭೆ ಗಮನಕ್ಕೆ ತಂದರು. ಸಾರ್ವಜನಿಕರು ನೀಡಿದ ಸಮಸ್ಯೆಗಳನ್ನು ಮುಖ್ಯಾಧಿಕಾರಿ ಮಹೇಂದ್ರ ಪ್ರತ್ಯೇಕ ಪಟ್ಟಿಯಲ್ಲಿ ದಾಖಲಿಸಿಕೊಂಡು ಬರಲಿರುವ ಅಯವ್ಯಯದಲ್ಲಿ ಸೇರ್ಪಡೆ ಮಾಡಿಕೊಂಡು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

ಉಪವಿಭಾಗಧಿಕಾರಿ ಜೆ.ಬಿ.ಮಾರುತಿ ಪಟ್ಟಣದ ಪುರಸಭೆ ೨೪-೨೫ ನೇ ಸಾಲಿನ ಅಯವ್ಯಯ ಪೂರ್ವಭಾವಿ ಸಭೆಗೆ ಗೈರಾದ ಕಾರಣ ಶಾಸಕ ರೇವಣ್ಣ ಅವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು.

ಕಾಂಗ್ರೆಸ್ ಮುಖಂಡರು, ಪುರಸಭೆ ಮಾಜಿ ಅಧ್ಯಕ್ಷರು, ಸದಸ್ಯರು, ಪುರಸಭೆ ಅಧಿಕಾರಿಗಳು ಹಾಗೂ ನೌಕರರು ಮತ್ತು ಸಂಘ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.

ಹೊಳೆನರಸೀಪುರ ಪಟ್ಟಣದ ಪುರಸಭೆಯಲ್ಲಿ ೨೦೨೪-೨೫ ನೇ ಸಾಲಿನ ಅಯವ್ಯಯ ಪಟ್ಟಿ ಸಿದ್ಧತೆಗಾಗಿ ಪೂರ್ವಭಾವಿ ಸಭೆ ಶಾಸಕ ಎಚ್.ಡಿ.ರೇವಣ್ಣ ಅಧ್ಯಕ್ಷತೆಯಲ್ಲಿ ಜರುಗಿತು.