ಸಾರಾಂಶ
- ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಚಿತ್ರದುರ್ಗದಲ್ಲಿ ಸಿಎಂಗೆ ಡಿಎಸ್‌ಎಸ್ ಮನವಿ
- - - ಕನ್ನಡಪ್ರಭ ವಾರ್ತೆ, ದಾವಣಗೆರೆಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಕಡಿತಗೊಳಿಸಬಾರದು, ಎಸ್‌ಸಿಎಸ್‌ಪಿ- ಟಿಎಸ್‌ಪಿ ಅನುದಾನ ದುರ್ಬಳಕೆ ಕುರಿತಂತೆ ವಿಧಾನಸಭೆ ಅಧಿವೇಶನದಲ್ಲಿ ರಾಜ್ಯದ ಮೀಸಲು ಕ್ಷೇತ್ರಗಳ ಶಾಸಕರು ಪಕ್ಷಾತೀತವಾಗಿ ಚರ್ಚಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಸರ್ಕಾರಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮನವಿ ಅರ್ಪಿಸಿದೆ.
ಚಿತ್ರದುರ್ಗದಲ್ಲಿ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದ ವೇಳೆ ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ಹೆಗ್ಗೆರೆ ರಂಗಪ್ಪ ನೇತೃತ್ವದ ಮುಖಂಡರ ನಿಯೋಗ ಮನವಿ ಅರ್ಪಿಸಿದೆ.ಸಮಾಜ ಕಲ್ಯಾಣ ಇಲಾಖೆಯಿಂದ ಎಸ್ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ, ಡಿಪ್ಲೊಮಾ, ಪಾಲಿಟೆಕ್ನಿಕ್, ಐಟಿಐ, ನರ್ಸಿಂಗ್ ಡಿಪ್ಲೊಮಾ, ಜಿಎನ್ಎಂ ನರ್ಸಿಂಗ್‌ನಲ್ಲಿ ಮೊದಲ ಪ್ರಯತ್ನದಲ್ಲೇ ಶೇ.60ಕ್ಕಿಂತ ಹೆಚ್ಚು ಅಂಕ ಗಳಿಸಿ, ತೇರ್ಗಡೆಯಾದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಪ್ರತಿವರ್ಷ ನೀಡುತ್ತಿದ್ದ ಪ್ರೋತ್ಸಾಹಧನವನ್ನು 2023-24ನೇ ಸಾಲಿನಿಂದ ಸ್ಥಗಿತಗೊಳಿಸಿದ್ದು ಸರಿಯಲ್ಲ ಎಂದು ಸಮಿತಿ ಹೇಳಿದೆ.
ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗ ಪ್ರೋತ್ಸಾಹಧನ ನೀಡಲು ಕುಟುಂಬದ ವಾರ್ಷಿಕ ಆದಾಯ ಮಿತಿ ₹6 ಲಕ್ಷ ರು. ಮೀರಿರಬಾರದು. ಶೇ.75ಕ್ಕಿಂತ ಹೆಚ್ಚು ಅಂಕ ಪಡೆದು, ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಾತ್ರ ಈ ಪ್ರೋತ್ಸಾಹ ಯೋಜನೆಯನ್ನು ಮುಂದುವರಿಸದಿದ್ದರೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತೀವ್ರ ಅನ್ಯಾಯವಾಗುತ್ತದೆ ಎಂದು ಸಮಿತಿ ವಿವರಿಸಿದೆ.ಪ್ರೋತ್ಸಾಹಧನ ನೀಡಲು ಹೆಚ್ಚು ಅಂಕಗಳನ್ನೇ ಮಾನದಂಡ ಮಾಡಿದ್ದು ಸರಿಯಲ್ಲ. ಅಲ್ಲದೇ, ವಿದೇಶಿ ವಿ.ವಿ.ಗಳಲ್ಲಿ ಪಿಎಚ್.ಡಿ ಅಧ್ಯಯನಕ್ಕೆ ತೆರಳುವ ಪರಿಶಿಷ್ಟ ವಿದ್ಯಾರ್ಥಿಗಳಿಗೆ ಪ್ರಬುದ್ಧ ಯೋಜನೆಯಡಿ ಸಹಾಯಧನ ರದ್ದುಪಡಿಸಿದ್ದು ತಳಸಮುದಾಯದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ತೀವ್ರ ಅಡಚಣೆಯಾಗಲಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಪ್ರೋತ್ಸಾಹಧನ, ಸಹಾಯಧನ, ವಿದ್ಯಾರ್ಥಿ ವೇತನ ನೀಡಿಕೆಯಲ್ಲಿ ಆಗುತ್ತಿರುವ ಲೋಪ ಸರಿಪಡಿಸಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತ ಕಾಯಬೇಕು ಎಂದು ಸಮಿತಿ ಒತ್ತಾಯಿಸಿದೆ.
ರಾಜ್ಯ ಸಮಿತಿ ಸದಸ್ಯ ಎಚ್.ಶಿವಮೂರ್ತಿ ಭೀಮನಕೆರೆ, ಜಿಲ್ಲಾ ಸಂಚಾಲಕ ಎಚ್.ಆರ್. ಪ್ರಭಾಕರ, ಜಿಲ್ಲಾ ಸಂಘಟನಾ ಸಂಚಾಲಕ ಮಾರುತಿ ಕಡಬನಕಟ್ಟೆ ಇತರರು ಈ ಸಂದರ್ಭ ಹಾಜರಿದ್ದರು.- - -
ಬಾಕ್ಸ್ * ಮೀಸಲು ಶಾಸಕರು ಧ್ವನಿ ಎತ್ತಲಿ ಎಸ್‌ಸಿಎಸ್‌ಪಿ-ಟಿಎಸ್‌ಪಿ ಅನುದಾನ ದುರ್ಬಳಕೆ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಮೀಸಲು ಕ್ಷೇತ್ರಗಳ ಶಾಸಕರು ಪಕ್ಷಾತೀತವಾಗಿ ಚರ್ಚಿಸಲು, ರಾಜ್ಯ ಸರ್ಕಾರವು ಈ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡಬೇಕು. ಸರ್ಕಾರದ ಅಂಕಿ ಅಂಶದ ಪ್ರಕಾರವೇ 2014-15 ರಿಂದ 2022-23 ರವರೆಗೆ ₹15,553 ಕೋಟಿ ಎಸ್‌ಸಿಎಸ್‌ಪಿ- ಟಿಎಸ್‌ಪಿ ಅನುದಾನ ದುರ್ಬಳಕೆ ಆಗಿರುವುದು ದಲಿತರ ಮೇಲಿನ ಸರ್ಕಾರಕ ಕಾಳಜಿ ತೋರುತ್ತದೆ ಎಂದು ರಂಗಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ಕಾಯ್ದೆಯ 7ಸಿ ನಿಯಮ ರದ್ದುಗೊಳಿಸಲು ಸಿಎಂಗೆ ಆಗ್ರಹಿಸಲಾಗಿದ್ದು, ವಿಧಾನಸಭೆ ಅಧಿವೇಶನದಲ್ಲಿ ಮೀಸಲು ಕ್ಷೇತ್ರಗಳ ಶಾಸಕರು ಪಕ್ಷಾತೀತವಾಗಿ ಧ್ವನಿಎತ್ತಿ, ಕಾಯ್ದೆ ಸದುದ್ದೇಶ ಕಾರ್ಯರೂಪಕ್ಕೆ ಬರುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇಲ್ಲವಾದರೆ ಪರಿಶಿಷ್ಟ ಸಮುದಾಯಗಳ ಹಿತ ಕಾಯುವಂತೆ ಒತ್ತಾಯಿಸಿ ರಾಜ್ಯವ್ಯಾಪಿ ಡಿಎಸ್‌ಎಸ್ ಪ್ರತಿಭಟಿಸಬೇಕಾಗದೀತು ಎಂದು ಹೆಗ್ಗೆರೆ ರಂಗಪ್ಪ ತಿಳಿಸಿದ್ದಾರೆ. - - - -21ಕೆಡಿವಿಜಿ3, 4:ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಡಿಎಸ್‌ಎಸ್ ಮುಖಂಡರು ಶನಿವಾರ ಮುಖ್ಯಮಂತ್ರಿ ಅವರು ಚಿತ್ರದುರ್ಗಕ್ಕೆ ಆಗಮಿಸಿದ್ದ ವೇಳೆ ರಾಜ್ಯ ಸಂಘಟನಾ ಸಂಚಾಲಕ ಹೆಗ್ಗೆರೆ ರಂಗಪ್ಪ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.