ತುಳುನಾಡ ಜನರ ನಂಬುಗೆಯ ದೈವಗಳಲ್ಲೊಂದಾದ ‘ಕೊರಗಜ್ಜ’ ದೈವದ ಕುರಿತಾದ ಸಿನಿಮಾ ನಿರ್ದೇಶಕ ಸುಧೀರ್ ಅತ್ತಾವರ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ತ್ರಿವಿಕ್ರಮ ಸಿನಿಮಾಸ್ ಮತ್ತು ಸಕ್ಸಸ್ ಲೈಫ್ ಬ್ಯಾನರ್ ನಡಿ ಚಿತ್ರ ನಿರ್ಮಾಣಗೊಂಡಿದೆ. ಚಿತ್ರದ ಪ್ರಚಾರಕ್ಕಾಗಿ ಕೊರಗಜ್ಜ ರೀಲ್ಸ್ ಎಂಬ ಸ್ಪರ್ಧೆಯನ್ನು ಚಿತ್ರತಂಡ ಆಯೋಜಿಸಿದ್ದು
ಮಡಿಕೇರಿ : ತುಳುನಾಡ ಜನರ ನಂಬುಗೆಯ ದೈವಗಳಲ್ಲೊಂದಾದ ‘ಕೊರಗಜ್ಜ’ ದೈವದ ಕುರಿತಾದ ಸಿನಿಮಾ ನಿರ್ದೇಶಕ ಸುಧೀರ್ ಅತ್ತಾವರ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ತ್ರಿವಿಕ್ರಮ ಸಿನಿಮಾಸ್ ಮತ್ತು ಸಕ್ಸಸ್ ಲೈಫ್ ಬ್ಯಾನರ್ ನಡಿ ಚಿತ್ರ ನಿರ್ಮಾಣಗೊಂಡಿದೆ. ಚಿತ್ರದ ಪ್ರಚಾರಕ್ಕಾಗಿ ಕೊರಗಜ್ಜ ರೀಲ್ಸ್ ಎಂಬ ಸ್ಪರ್ಧೆಯನ್ನು ಚಿತ್ರತಂಡ ಆಯೋಜಿಸಿದ್ದು ಇದನ್ನು ಕೊಡಗು ಜಿಲ್ಲಾ ದೈವ ಆರಾಧಕರು ಹಾಗೂ ದೈವ ನರ್ತಕರ ಸಂಘ ತೀವ್ರವಾಗಿ ವಿರೋಧಿಸಿದೆ.
ಈ ನಿರ್ಧಾರದಿಂದ ಚಿತ್ರತಂಡ ಹಿಂದೆ ಸರಿಯಬೇಕು, ತಪ್ಪಿದಲ್ಲಿ ಕಾನೂನು ಹೋರಾಟಕ್ಕೂ ಸಿದ್ಧ ಇರುವುದಾಗಿ ಸಂಘದ ಸ್ಥಾಪಕಾಧ್ಯಕ್ಷ ಪಿ.ಎಂ.ರವಿ ಎಚ್ಚರಿಕೆ ನೀಡಿದ್ದಾರೆ. ತುಳುನಾಡು ಮತ್ತು ಕೆಲವೇ ಪ್ರದೇಶಕ್ಕೆ ಸೀಮಿತವಾಗಿರುವ ದೈವ ಆರಾಧನೆಯನ್ನು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವ ಮೂಲಕ ಅಪಹಾಸ್ಯ ಮಾಡುವುದು ಸರಿಯಲ್ಲ. ದೈವ ಆರಾಧನೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ದೈವ ನರ್ತನ ಮಾಡುವವರು ಹಾಗೂ ದೈವ ಆರಾಧನೆ ಮಾಡುವವರ ಭಾವನೆಗೆ ಧಕ್ಕೆ ತರುವ ಕೆಲಸವನ್ನು ಯಾರೂ ಮಾಡಬಾರದು.‘ಕೊರಗಜ್ಜ’ ದೈವದ ಸಿನಿಮಾ ಮಾಡುವುದಕ್ಕೆ ನಮ್ಮ ಯಾವುದೇ ಅಭ್ಯಂತರವಿಲ್ಲ. ಆದರೆ ದೈವದ ಶಕ್ತಿ ಮತ್ತು ಆಚಾರ, ವಿಚಾರದ ಕುರಿತು ಅರಿವಿಲ್ಲದ ವಿದ್ಯಾರ್ಥಿಗಳು, ಯುವ ಸಮೂಹ ಹಾಗೂ ಸಾರ್ವಜನಿಕರು ಬಹುಮಾನಕ್ಕಾಗಿ ರೀಲ್ಸ್ ಮಾಡುವುದರಿಂದ ‘ಕೊರಗಜ್ಜ’ ದೈವಕ್ಕೆ ಅಪಚಾರವಾಗುವ ಸಾಧ್ಯತೆಗಳಿದೆ. ಅಲ್ಲದೆ ರೀಲ್ಸ್ ನ್ನು ವೀಕ್ಷಿಸಿದವರಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ದೈವ ನಿಂದನೆಯಾಗುವ ಆತಂಕವೂ ಇದೆ ಎಂದು ಅವರು ಹೇಳಿದ್ದಾರೆ. ‘ಕೊರಗಜ್ಜ’ ಚಿತ್ರದ ಹಾಡುಗಳನ್ನು ಬಳಸಿಕೊಂಡು ಸೃಜನಶೀಲ ರೀಲ್ಸ್ ಮಾಡಿದವರಿಗೆ ಒಟ್ಟು ಒಂದು ಕೋಟಿ ರು. ಮೌಲ್ಯದ ಬಹುಮಾನ ನೀಡಲಿದ್ದೇವೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಹೆಚ್ಚು ವೀಕ್ಷಣೆ, ಲೈಕ್ ಪಡೆದ ರೀಲ್ಸ್‌ಗೆ ಬಹುಮಾನ ನೀಡಲಾಗುವುದು. ರಾಜ್ಯದ 31 ಜಿಲ್ಲೆಗಳಿಂದ ಪ್ರತ್ಯೇಕವಾಗಿ ವಿಜೇತರನ್ನು ಆಯ್ಕೆ ಮಾಡಲಾಗುವುದು. ಅತ್ಯುತ್ತಮವಾಗಿ ರೀಲ್ಸ್ ಮಾಡಿದ ಮೂವರಿಗೆ ವಿದೇಶ ಪ್ರವಾಸಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಪ್ರಕಟಣೆ ನೀಡಿದೆ.ದೈವ ಆರಾಧನಾ ಕ್ಷೇತ್ರಕ್ಕೆ ಅಪಮಾನ ಮಾಡುವುದನ್ನು ದೈವ ಆರಾಧಕರ ಹಾಗೂ ದೈವ ನರ್ತಕರ ಸಂಘ ಖಂಡಿಸುತ್ತದೆ ಎಂದು ಪಿ.ಎಂ.ರವಿ ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ರಾಜ್ಯ ಸರ್ಕಾರ ಮತ್ತು ಕರ್ನಾಟಕ ಫಿಲಂ ಚೇಂಬರ್ ಆಫ್ ಕಾಮರ್ಸ್ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ದೈವ ಆರಾಧಕರ ಹಾಗೂ ದೈವ ನರ್ತಕರ ಭಾವನೆಗೆ ಗೌರವ ನೀಡಬೇಕೆಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಸದಾಶಿವ ರೈ, ಪ್ರಧಾನ ಕಾರ್ಯದರ್ಶಿ ಪಿ.ಕೆ.ದಿನೇಶ್, ಸಂಘಟನಾ ಕಾರ್ಯದರ್ಶಿ ಬಿ.ಆರ್.ರಮೇಶ್ ಹಾಗೂ ಸದಸ್ಯ ಮಂಜುನಾಥ ಪೂಜಾರಿ ಉಪಸ್ಥಿತರಿದ್ದರು.