ಸಾರಾಂಶ
ಶಿಕ್ಷಕ ಶಿಕ್ಷಕಿಯರಿಗೆ ಒಂದು ದಿನದ ಪುನಶ್ಚೇತನ ತರಬೇತಿ ಕಾರ್ಯಕ್ರಮ ಜರುಗಿತು. ಜಿಲ್ಲಾ ಭಾರತ ಸೇವಾದಳದ ಅಧ್ಯಕ್ಷರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಜಿ.ಪಂ., ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಉಡುಪಿ ವಲಯ ಆಶ್ರಯದಲ್ಲಿ 2024-25 ನೇ ಸಾಲಿನ ಭಾರತ ಸೇವಾದಳದ ಶಿಕ್ಷಕ/ಶಿಕ್ಷಕಿಯರಿಗೆ ಒಂದು ದಿನದ ಪುನಶ್ಛೇತನ ತರಬೇತಿ ಕಾರ್ಯಕ್ರಮ ಮಂಗಳವಾರ ಉಡುಪಿ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಜರುಗಿತು.ಉಡುಪಿ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಎಲ್ಲಮ್ಮ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ಪಾಠೇತರ ಚಟುವಟಿಕೆಗಳೂ ಮುಖ್ಯವಾಗಿದ್ದು, ಸ್ವಾವಲಂಬನೆ ಮತ್ತು ದೇಶಪ್ರೇಮವನ್ನು ಬೆಳೆಸುವ ನಿಟ್ಟಿನಲ್ಲಿ ಭಾರತ ಸೇವಾದಳ ಚಟುವಟಿಕೆಗಳು ಪ್ರೇರಕವಾಗಿವೆ ಎಂದರು.
ನಂತರ ಪುನಶ್ಛೇತನ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾ ಭಾರತ ಸೇವಾದಳದ ಅಧ್ಯಕ್ಷ ಅಂಡಾರು ದೇವಿಪ್ರಸಾದ್ ಶೆಟ್ಟಿ ಉದ್ಘಾಟಿಸಿ, ಡಿಸೆಂಬರ್ ತಿಂಗಳಲ್ಲಿ ಭಾರತ ಸೇವಾದಳದ ಜಿಲ್ಲಾ ಭಾವೈಕ್ಯತಾ ಮಕ್ಕಳ ಮೇಳ ನಡೆಸುವ ಉದ್ದೇಶವಿದ್ದು, ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವಂತೆ ಶಿಕ್ಷಕರಿಗೆ ಕರೆಯಿತ್ತರು.ಭಾರತ ಸೇವಾದಳ ರಾಜ್ಯ ಸಮಿತಿಯ ನಿರ್ದೇಶಕ ಆರೂರು ತಿಮ್ಮಪ್ಪ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಮಿತಿಯ ಸದಸ್ಯರಾದ ಉದಯ ಶೆಟ್ಟಿ ಬ್ರಹ್ಮಾವರ, ಬಿ. ಪುಂಡಲೀಕ ಮರಾಠೆ ಶಿರ್ವ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಭಾರತ ಸೇವಾದಳ ಕಾಪು ತಾಲೂಕು ಅಧ್ಯಕ್ಷ ಮಧುಕರ್ ಎಸ್. ಕಲ್ಯಾ ವಹಿಸಿದ್ದರು. ಕಾಪು ತಾಲೂಕು ಯುವಜನ ಸೇವಾ ಅಧಿಕಾರಿ ರಿತೇಶ್ ಶೆಟ್ಟಿ ಸೂಡ, ತಾಲೂಕು ದೈಹಿಕ ಶಿಕ್ಷಣ ನಿರ್ದೇಶಕ ಚಂದ್ರಶೇಖರ್, ಜಿಲ್ಲಾ ಸಮಿತಿಯ ಸದಸ್ಯರಾದ ಎಮ್.ಸಿ.ಆಚಾರ್ ಕಾರ್ಕಳ, ಟಿ.ಕೃಷ್ಣಯ್ಯ ಶೆಟ್ಟಿ ಬಾರ್ಕೂರು, ಜಯಲಕ್ಷ್ಮೀ, ಜಿಲ್ಲಾ ಕೋಶಾಧಿಕಾರಿ ದಿನಕರ ಶೆಟ್ಟಿ ಶಿರೂರು, ಅಧಿನಾಯಕರಾದ ರಾಜೇಶ್ವರೀ, ಶ್ರೀಲತಾ, ಅಬ್ದುಲ್ ರಜಾಕ್ ಬೆಳಪು ಉಪಸ್ಥಿತರಿದ್ದರು.ಪುನಶ್ಚೇತನ ತರಗತಿಯನ್ನು ದಿನಕರ ಶೆಟ್ಟಿ ಶಿರೂರು, ಜಿಲ್ಲಾ ಸಂಘಟಕರಾದ ಪುಷ್ಪಾವತಿ ಗೌಡ ನಡೆಸಿದರು. ತಾಲೂಕು ಅಧಿನಾಯಕ ಸತ್ಯಸಾಯಿ ಪ್ರಸಾದ್ ಬಂಟಕಲ್ಲು ನಿರೂಪಿಸಿದರು. ಜಿಲ್ಲಾ ಸಂಘಟಕರಾದ ಪುಷ್ಪಾವತಿ ಗೌಡ ವಂದಿಸಿದರು.