ತಾತ್ಕಾಲಿಕ ಶೆಡ್‌ ತೆರಳಲು ನಿರಾಶ್ರಿತರ ನಕಾರ

| Published : Aug 06 2024, 12:41 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮುಧೋಳ ಘಟಪ್ರಭಾ ನದಿ ಪ್ರವಾಹದಿಂದ ತಾಲೂಕಿನ ಅನೇಕ ಗ್ರಾಮಗಳಲ್ಲಿ ಪ್ರವಾಹ ತಗ್ಗಿದೆ ನಿಜ. ಆದ್ರೆ, ಈ ಮೊದಲು ವಾಸಿಸುತ್ತಿದ್ದ ತಾತ್ಕಾಲಿಕ ಶೆಡ್‌ಗಳಿಗೆ ವಾಪಸ್ ಹೋಗಲು ಸಾಕಷ್ಟು ತೊಂದರೆಯಾಗಿದೆ ಎಂದು ನಿರಾಶ್ರಿತರು ಸಂಕಟ ಅನುಭವಿಸುತ್ತಿದ್ದಾರೆ. ಶೆಡ್‌ಗಳಲ್ಲಿ ನೀರು ನಿಂತು, ನೆಲವೆಲ್ಲ ಸಂಪೂರ್ಣ ಒದ್ದೆಯಾಗಿದೆ. ಶೆಡ್‌ನಲ್ಲಿ ಇರುವುದು ಅಸಾಧ್ಯ, ಶೆಡ್‌ಗಳಲ್ಲಿ ವಿಷ ಜಂತುಗಳು ವಾಸವಾಗುತ್ತಿವೆ. ಅವುಗಳಿಂದ ಅಪಾಯವೇ ಹೆಚ್ಚು.

ವಿಶ್ವನಾಥ ಮುನವಳ್ಳಿ

ಕನ್ನಡಪ್ರಭ ವಾರ್ತೆ ಮುಧೋಳ

ಘಟಪ್ರಭಾ ನದಿ ಪ್ರವಾಹದಿಂದ ತಾಲೂಕಿನ ಅನೇಕ ಗ್ರಾಮಗಳಲ್ಲಿ ಪ್ರವಾಹ ತಗ್ಗಿದೆ ನಿಜ. ಆದ್ರೆ, ಈ ಮೊದಲು ವಾಸಿಸುತ್ತಿದ್ದ ತಾತ್ಕಾಲಿಕ ಶೆಡ್‌ಗಳಿಗೆ ವಾಪಸ್ ಹೋಗಲು ಸಾಕಷ್ಟು ತೊಂದರೆಯಾಗಿದೆ ಎಂದು ನಿರಾಶ್ರಿತರು ಸಂಕಟ ಅನುಭವಿಸುತ್ತಿದ್ದಾರೆ. ಶೆಡ್‌ಗಳಲ್ಲಿ ನೀರು ನಿಂತು, ನೆಲವೆಲ್ಲ ಸಂಪೂರ್ಣ ಒದ್ದೆಯಾಗಿದೆ. ಶೆಡ್‌ನಲ್ಲಿ ಇರುವುದು ಅಸಾಧ್ಯ, ಶೆಡ್‌ಗಳಲ್ಲಿ ವಿಷ ಜಂತುಗಳು ವಾಸವಾಗುತ್ತಿವೆ. ಅವುಗಳಿಂದ ಅಪಾಯವೇ ಹೆಚ್ಚು. ಇಂತಹ ಪರಿಸ್ಥಿತಿಯಲ್ಲಿ ನಾವು ಹೇಗೆ ವಾಸಮಾಡಬೇಕೆಂದು ತಿಳಿದು ಕಾಳಜಿ ಕೇಂದ್ರದಲ್ಲಿಯೇ ಇದ್ದೇವೆ ಎಂದು ಮುಧೋಳ ಕಲ್ಮೇಶ್ವರ ಎಂ.ಕೆ.ಬಿ.ಎಸ್ ಶಾಲೆಯ ಕಾಳಜಿ ಕೇಂದ್ರದಲ್ಲಿರುವ ಕುಂಬಾರ ಗಲ್ಲಿಯ ನಿವಾಸಿಗಳಾದ ಸುಶೀಲವ್ವ ಪಟ್ಟದ, ಸವಿತಾ ದರೂರ, ಸುಮಿತ್ರಾ ಗಸ್ತಿ, ರೇಖಾ ಕುಂದರಗಿ, ಶೋಭಾ ಸಾರವಾಡ, ಸುಜಾತಾ ತೇಲಿ, ಬೋರಮ್ಮ ಪಟ್ಟದ ಸೇರಿದಂತೆ ಮಹಿಳೆಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ಸುದ್ದಿಗಾರರ ಜೊತೆಗೆ ತಮ್ಮ ಸಂಕಷ್ಟಗಳನ್ನು ಹಂಚಿಕೊಂಡ ಸಂತ್ರಸ್ಥರು, 2019 ರಲ್ಲಿ ಮಹಾ ಪ್ರಳಯ ಆಗಿತ್ತು. ಆ ಸಂದರ್ಭದಲ್ಲಿ ನಿಮಗೆ ಬೇರೆಡೆ ಸೂರು ಕೊಡುವುದಾಗಿ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಭರವಸೆ ನೀಡಿದ್ದರು. ಆದ್ರೆ ಇಂದಿನವರೆಗೆ ನಮಗೆ ಬೇರೆಡೆ ಸೂರು ಕೊಟ್ಟಿಲ್ಲ, ಪ್ರತಿವರ್ಷ ಪ್ರವಾಹ ಬರುತ್ತೆ, ಪ್ರವಾಹ ಬಂದಾಗ ನಮ್ಮೆಲ್ಲರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸುತ್ತಾರೆಯೇ ಹೊರತು ಬೇರೆ ಪರ್ಯಾಯ ವ್ಯವಸ್ಥೆ ಮಾಡಲು ಯಾರು ಮುಂದೆ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರವಾಹ ಪರಿಸ್ಥಿತಿ ವೀಕ್ಷಿಸಲು ಮಂತ್ರಿಗಳು ಹಾಗೂ ಅಧಿಕಾರಿಗಳು ಬರುತ್ತಾರೆ, ನಮ್ಮನ್ನು ಮಾತನಾಡಿಸುತ್ತಾರೆ. ಪ್ರಚಾರ ಪಡೆದುಕೊಂಡು ತೆರಳುತ್ತಾರೆ, ಆದ್ರೆ ನಮ್ಮ ಕಷ್ಟಕ್ಕೆ ಯಾರೂ ಈವರೆಗೂ ಸ್ಪಂದಿಸುತ್ತಿಲ್ಲ. ಕಳೇದ ನಾಲ್ಕೈದು ದಿನಗಳ ಹಿಂದೆ ರಾಜ್ಯದ ಕಂದಾಯ ಸಚಿವರು, ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಮತ್ತು ತಾಲೂಕಾ ಮಟ್ಟದ ಅಧಿಕಾರಿಗಳು ಬಂದು ಭರಪೂರ ಭರವಸೆಯ ಸುರಿಮಳೆಯನ್ನೇ ಸುರಿಸಿದರು. ಆದ್ರೆ ಅವರ ಭರವಸೆಗಳ ಮಾತುಗಳ ಮೇಲೆ ನಮಗೆ ವಿಶ್ವಾಸವಿಲ್ಲವೆಂದು ಪರಿಸ್ಥಿತಿಯನ್ನು ನೈಜ ಪರಿಸ್ಥಿತಿಯನ್ನು ತೆರೆದಿಟ್ಟರು.

ನೀವಾದ್ರೂ ಸಂಬಂಧಿಸಿದವರನ್ನು ಎಚ್ಚರಗೊಳಿಸಿ ನಮಗೊಂದು ಶಾಶ್ವತ ಸೂರು ಕೊಡಿಸಿ ಎಂದು ಅಂಗಲಾಚಿ ಬೇಡಿಕೊಂಡು ಸಂತ್ರಸ್ಥರು ಅಳಲು ಮನಕರಗುವಂತಿತ್ತು.

---------------------------------------------

ಕೋಟ್

ಸಾಹೇಬ್ರ ನಾವು ಹೇಗೆ ಇದ್ದೀವಿ ಎಂಬುದನ್ನು ತಾವೇ ಕಣ್ಣಾರೆ ಕಂಡಿದ್ದೀರಿ, ಈ ನೋವು, ಕಷ್ಟ ಇನ್ನಾರಿಗೂ ಬರಬಾರದು. ಸರ್ಕಾರ ಸಾಕಷ್ಟು ಉಚಿತ ಯೋಜನೆ ನೀಡಿದೆ. ಆದ್ರೆ ನಮಗೆ ಶಾಶ್ವತ ಸೂರು ಕೊಡುತ್ತಿಲ್ಲ. ನಮಗಂತೂ ಮುಂದೇನು ಅಂತ ತಿಳಿಯುತ್ತಲೇ ಇಲ್ಲ.

ಸುಶೀಲವ್ವ ಪಟ್ಟದ, ನೊಂದ ಸಂತ್ರಸ್ತೆ.

----------------------------------------

ಕೋಟ

ಏನ ಮಾಡುದು ಬಿಡ್ರಿ,ನಾವು ಇಷ್ಟೇ ಬೇಡಕೊಂಡ ಬಂದಿದ್ದೀವಿ, ನಮ್ಮ ಹಣೆಬರಹದಾಗ ಅಷ್ಟ ಐತಿ,

ಅಂದಕೊಂಡ ಜೀವನ ಸಾಗಿಸಾಕತ್ತಿದ್ದೀವಿ ನೋಡ್ರಿ, ನಿಮ್ಮಿಂದ ಏನಾದ್ರೂ ಮಾಡಕ ಆಗುತ್ತೇನು ಹೇಳ್ರಿ.

ಸವಿತಾ ದರೂರ, ನೊಂದ ಸಂತ್ರಸ್ಥೆ