ಕಬ್ಬಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ: ಶ್ರೀರಾಮುಲು

| Published : Nov 17 2025, 01:30 AM IST

ಕಬ್ಬಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ: ಶ್ರೀರಾಮುಲು
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಕಿ ಹಚ್ಚಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿಲ್ಲ ಎಂದು ಮಾಜಿ ಸಚಿವ ಶ್ರೀರಾಮುಲು ತಿಳಿಸಿದರು.

ಗದಗ: ರೈತರ ಹೋರಾಟದ ಸಮಯದಲ್ಲಿ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಆಗ್ರಹಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಾದ್ಯಂತ ಕಬ್ಬು ಬೆಳೆಗಾರರು ಹೋರಾಟ ಮಾಡುತ್ತಿದ್ದಾರೆ. ಹಲವು ಜಿಲ್ಲೆಗಳಲ್ಲಿ ರೈತರ ಸಮಸ್ಯೆಗಳು ವಿಭಿನ್ನವಾಗಿವೆ. ಹೋರಾಟದ ಸಮಯದಲ್ಲಿ ಕೆಲವು ಕಿಡಿಗೇಡಿಗಳು ಕಬ್ಬು ತುಂಬಿದ ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿದ್ದಾರೆ. ಕಾರ್ಖಾನೆ ಮಾಲಿಕರಿಂದಲೇ ಈ ಕೃತ್ಯ ನಡೆದಿದೆ ಎಂದು ರೈತರು ಆರೋಪ ಮಾಡುತ್ತಿದ್ದಾರೆ. ಆದರೆ, ಕಾರ್ಖಾನೆ ಮಾಲೀಕರು ನಾವು ಮಾಡಿಲ್ಲ ಎನ್ನುತ್ತಾರೆ. ಸ್ವತಃ ತಾವೇ ಬೆಳೆದ ಬೆಳೆಗೆ ರೈತರು ಬೆಂಕಿ ಹಚ್ಚಲು ಸಾಧ್ಯವಿಲ್ಲ. ಬೆಂಕಿ ಹಚ್ಚಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿಲ್ಲ. ರಾಜ್ಯದ ಎಲ್ಲ ರೈತರ ಜತೆ ನಿಲ್ಲಬೇಕು ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆದೇಶ ಮಾಡಿದ್ದಾರೆ. ಟನ್‌ ಕಬ್ಬಿಗೆ ₹3,300 ನೀಡುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಆದರೆ, ರೈತರಿಗೆ ಇದರಿಂದ ತೃಪ್ತಿ ಆಗಿಲ್ಲ ಎಂದರು.

ತುಂಗಭದ್ರಾ ಜಲಾಶಯಕ್ಕಾಗಿ ದೊಡ್ಡ ಮಟ್ಟದ ಹೋರಾಟ ಮಾಡಲು ತೀರ್ಮಾನಿಸಿದ್ದೇವೆ. ತುಂಗಭದ್ರಾ ಗೇಟ್ ದುರಸ್ತಿ ಮಾಡುವ ಕೆಲಸ ಮಾಡುತ್ತಿಲ್ಲ. ತುಂಗಭದ್ರಾ ಡ್ಯಾಂನಲ್ಲಿ ನೀರು ಇದ್ದರೂ ಬಿಡುಗಡೆ ಮಾಡದೇ ರೈತರ ಜೀವನದ ಜತೆ ಸರ್ಕಾರ ಚೆಲ್ಲಾಟ ಆಡುತ್ತಿದೆ. ಎರಡು ಬೆಳೆಗೆ ನೀರು ಕೊಡಲು ಆಗಲ್ಲ ಅಂತ ಸರ್ಕಾರ ಹೇಳುತ್ತಿದೆ. ಬೆಂಬಲ ಬೆಲೆ ಘೋಷಣೆ ಮಾಡಿ ಅಂದ್ರೆ ಕೇಂದ್ರದ ಕಡೆ ಬೊಟ್ಟು ಮಾಡುತ್ತಿದ್ದಾರೆ. ₹56ರಿಂದ ₹60 ಸಾವಿರ ಕೋಟಿಯನ್ನು ಗ್ಯಾರಂಟಿ ಯೋಜನೆಗೆ ನೀಡಲಾಗುತ್ತಿದೆ. ಆದರೆ, ಬೆಳೆ ಹಾನಿಗೆ ಹಣ ನೀಡುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ಗೋವಿನಜೋಳಕ್ಕೆ ₹2400 ಬೆಲೆಯನ್ನು ಕೇಂದ್ರ ಸರ್ಕಾರ ನಿಗದಿ ಮಾಡಿದೆ. ಆದರೆ, ರಾಜ್ಯದಲ್ಲಿ ₹1400ರಿಂದ ₹1500ಕ್ಕೆ ರೈತರು ಮಾರಾಟ ಮಾಡುತ್ತಿದ್ದಾರೆ. ಖರೀದಿ ಕೇಂದ್ರ ತೆರೆಯದೇ ರೈತರಿಗೆ ಹಾನಿ ಮಾಡಲಾಗುತ್ತಿದೆ. ಉಳ್ಳಾಗಡ್ಡಿ, ಮೆಣಸಿನಕಾಯಿ ಬೆಲೆಗೆ ಬೆಂಬಲ ಬೆಲೆ ನೀಡುತ್ತಿಲ್ಲ. ತಮ್ಮ ಸ್ವಾರ್ಥಕ್ಕಾಗಿ ಗ್ಯಾರಂಟಿ ನೀಡಿ ರೈತರನ್ನು ಸಂಕಷ್ಟಕ್ಕೆ ದೂಡಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಸಿ.ಎಸ್. ಶಿವನಗೌಡ್ರ, ವಿಜಯಲಕ್ಷ್ಮೀ ಮಾನ್ವಿ, ರವಿ ಗುಂಜೀಕರ, ವೆಂಕಟೇಶ ಕುಲಕರ್ಣಿ, ರಮೇಶ ಸಜ್ಜಗಾರ, ಕಿರಣ್ ಪ್ರಕಾಶ್ ಭೂಮಾ ಉಪಸ್ಥಿತರಿದ್ದರು. ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳ ದುರ್ಮರಣ

ಗದಗ: ತಾಲೂಕಿನ ನಾಗಾವಿಯ ಮಹಾತ್ಮ ಗಾಂಧಿ ಗ್ರಾಮೀಣ ಅಭಿವೃದ್ಧಿ ವಿಶ್ವವಿದ್ಯಾಲಯದ ಮುಖ್ಯ ಗೇಟ್ ಬಳಿಯ ಗದಗ- ಹೊನ್ನಾಳಿ ರಾಜ್ಯ ಹೆದ್ದಾರಿಯಲ್ಲಿ ಶನಿವಾರ ತಡರಾತ್ರಿ ಕಾಂಕ್ರೀಟ್ ಮಿಕ್ಸರ್ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮೃತರನ್ನು ನಾಗಾವಿ ಗ್ರಾಮದ ಮನೋಜ್ ನಾಗೇಶ ಕಮತರ (19) ಮತ್ತು ಆನಂದ ಸಂಗಪ್ಪ ವಾರದ (18) ಎಂದು ಗುರುತಿಸಲಾಗಿದೆ. ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.