ಹಿಂಗಾರು ಹಂಗಾಮು ವಿಮೆಗೆ ನೋಂದಾಯಿಸಿ: ಜಿಲ್ಲಾಧಿಕಾರಿ ಜಾನಕಿ ಕೆ.ಎಂ.

| Published : Oct 31 2024, 01:02 AM IST

ಹಿಂಗಾರು ಹಂಗಾಮು ವಿಮೆಗೆ ನೋಂದಾಯಿಸಿ: ಜಿಲ್ಲಾಧಿಕಾರಿ ಜಾನಕಿ ಕೆ.ಎಂ.
Share this Article
  • FB
  • TW
  • Linkdin
  • Email

ಸಾರಾಂಶ

ಬೆಳೆಸಾಲ ಪಡೆಯದ ರೈತರಿಗೆ ಬೆಳೆವಿಮೆ ಯೋಜನೆಯು ಐಚ್ಛಿಕವಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ಯುನಿವರ್ಸಲ್ ಸೊಂಪೊ ಜಿಐಸಿ ವಿಮಾ ಕಂಪನಿ ಆಯ್ಕೆಯಾಗಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪ್ರಸಕ್ತ ಸಾಲಿನ ಹಿಂಗಾರು ಹಾಗೂ ಬೇಸಿಗೆ ಹಂಗಾಮಿಗಾಗಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರು ಅಧಿಸೂಚಿತ ಬೆಳೆಗಳಿಗೆ ನೋಂದಣಿ ಮಾಡಿಸಲು ಸರ್ಕಾರವು ಅಧಿಸೂಚನೆ ಹೊರಡಿಸಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ತಿಳಿಸಿದರು.

ಜಿಲ್ಲಾಧಿಕಾರಿ ಸಭಾಭವನದಲ್ಲಿ ಬುಧವಾರ ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ವಿಮಾ ಯೋಜನೆ ಅನುಷ್ಠಾನನ ಕುರಿತ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ, ಪ್ರಚಾರ ಪೋಸ್ಟರ್‌ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಅಧಿಸೂಚಿತ ಬೆಳೆಗೆ ಬೆಳೆಸಾಲ ಪಡೆದ ರೈತರಿಗೆ ಈ ಯೋಜನೆ ಕಡ್ಡಾಯವಾಗಿದ್ದು, ಬೆಳೆಸಾಲ ಪಡೆದ ರೈತರು ಈ ಯೋಜನೆಯಡಿ ಭಾಗವಹಿಸಲು ಇಚ್ಚೆಪಡದೆ ಇದ್ದಲ್ಲಿ, ಈ ಕುರಿತು ಬೆಳೆಸಾಲ ಪಡೆದ ಬ್ಯಾಂಕ್‌ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳ ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರ ನೀಡಿದಲ್ಲಿ ಅಂತಹ ರೈತರನ್ನು ಬೆಳೆವಿಮೆ ಯೋಜನೆಯಿಂದ ಕೈಬಿಡಲಾಗುತ್ತದೆ ಎಂದರು.

ಬೆಳೆಸಾಲ ಪಡೆಯದ ರೈತರಿಗೆ ಬೆಳೆವಿಮೆ ಯೋಜನೆಯು ಐಚ್ಛಿಕವಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ಯುನಿವರ್ಸಲ್ ಸೊಂಪೊ ಜಿಐಸಿ ವಿಮಾ ಕಂಪನಿ ಆಯ್ಕೆಯಾಗಿದೆ. ಆಸಕ್ತ ರೈತರು ಕೊನೆಯ ದಿನಾಂಕದವರೆಗೆ ಕಾಯದೆ ಅಧಿಸೂಚಿತ ಬೆಳೆಗೆ ಹತ್ತಿರದ ಬ್ಯಾಂಕಿನಲ್ಲಿ ವಿಮಾ ಕಂತು ತುಂಬಿ ಬೆಳೆ ವಿಮೆಗೆ ಒಳಪಡಿಸಬೇಕು. ಪ್ರಸಕ್ತ ಸಾಲಿನಿಂದ ಬೆಳೆ ವಿಮೆ ಮಾಡಿಸುವ ರೈತರು ಫ್ರೊಟ್ಸ್ ತಂತ್ರಾಂಶದ ಎಫ್ಐಡಿ ಹೊಂದಿರುವುದು ಕಡ್ಡಾಯವಾಗಿದೆ ಎಂದರು.

ಬೆಳೆ ವಿಮೆ ಯೋಜನೆಯ ಹೆಚ್ಚಿನ ಮಾಹಿತಿಗೆ ಸಮೀಪದ ರೈತ ಸಂಪರ್ಕ ಕೇಂದ್ರ, ತಾಲೂಕ ಕೃಷಿ, ತೋಟಗಾರಿಕೆ ಇಲಾಖೆ ಹಾಗೂ ಬೆಳೆ ವಿಮೆ ಸಂಸ್ಥೆ ಕಚೇರಿ ಹಾಗೂ ಬೆಳೆ ವಿಮೆ ಕಂಪನಿ ತಾಲೂಕು ಪ್ರತಿನಿಧಿಗಳಾದ ಬಾದಾಮಿ ಮತ್ತು ಗುಳೇದಗುಡ್ಡಕ್ಕೆ ಸಂಗಪ್ಪ ಬನ್ನಿ (9964397577), ಹುನಗುಂದ, ಇಳಕಲ್ಲಗೆ ಸಂತೋಷ ಕಮತಗಿ (8151074930) ಬಾಗಲಕೋಟೆ ಮತ್ತು ಬೀಳಗಿಗೆ ಬಸವರಾಜ ಧೂಪದ (9036620814), ಜಮಖಂಡಿ ಮತ್ತು ರಬಕವಿ-ಬನಹಟ್ಟಿಗೆ ಮಹಾಂತೇಶ ನಾಗಠಾಣ (8971544829), ಮುಧೋಳ ತಾಲೂಕಿಗೆ ಅನೀಲ (6360923667)ಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

ರೈತರು ಬೆಳೆ ವಿಮೆಯನ್ನು ತಮ್ಮ ಹತ್ತಿರದ ಬ್ಯಾಂಕ್‌, ಸಾಮಾನ್ಯ ಸೇವಾ ಕೇಂದ್ರಗಳು, ಕರ್ನಾಟಕ್ ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ಮಾಡಿಸಬಹುದಾಗಿದೆ.

ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂಕುಸಿತ, ಬೆಳೆ ಮುಳುಗಡೆ, ಮೇಘಸ್ಫೋಟ ಮತ್ತು ಗುಡುಗು ಮಿಂಚುಗಳಿಂದ ಆಗುವ ಬೆಂಕಿ ಅವಘಡಗಳಿಂದ ಉಂಟಾಗುವ ನಷ್ಟದ ನಿರ್ಧರಣೆ ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರ ಇತ್ಯರ್ಥ ಪಡಿಸಲು ಯೋಜನೆಯಡಿ ಅವಕಾಶ ನೀಡಲಾಗಿದೆ. ಇಂತಹ ಸ್ಥಳೀಯ ಗಂಡಾಂತರಗಳ ಕಾರಣಗಳಿಂದ ಬೆಳೆ ನಷ್ಟ ಸಂಭವಿಸಿದರೆ, ಬೆಳೆ ವಿಮೆ ಮಾಡಿಸಿರುವ ರೈತರು ಈ ಬಗ್ಗೆ ನೇರವಾಗಿ ಸಂಬಂಧಪಟ್ಟ ಅನುಷ್ಠಾನಗೊಳಿಸುವ ವಿಮಾ ಸಂಸ್ಥೆಗಳ ಕಚೇರಿಗಳಿಗೆ ಅಥವಾ ಬ್ಯಾಂಕಗಳಿಗೆ ಅಥವಾ ಕೃಷಿ, ತೋಟಗಾರಿಕೆ ಇಲಾಖೆ ಮೂಲಕ ತಕ್ಷಣ ಲಿಖಿತ ಸೂಚನೆ ನೀಡತಕ್ಕದ್ದು.

ಇಂತಹ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು, ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು 72 ಗಂಟೆಗಳೊಳಗಾಗಿ ತಿಳಿಸತಕ್ಕದ್ದು. ಈ ಯೋಜನೆಯಡಿ 2024 ರ ಹಿಂಗಾರು, ಬೇಸಿಗೆ ಹಂಗಾಮಿನಲ್ಲಿ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲೆ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ ಕಟಾವು ಮಾಡಿದ ಎರಡು ವಾರಗಳೊಳಗೆ ಚಂಡಮಾರುತ, ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾದರೆ ವೈಯಕ್ತಿಕವಾಗಿ ವಿಮಾ ಸಂಸ್ಥೆಯು ನಷ್ಟ ನಿರ್ಧಾರ ಮಾಡಿ ಬೆಳೆ ನಷ್ಟ ಪರಿಹಾರ ಇತ್ಯರ್ಥಪಡಿಸಲು ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಒಳಪಡಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೇನ್ನವರ, ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಟಿ, ಜಿಲ್ಲಾ ಅಂಕಿ ಸಂಖ್ಯಾಧಿಕಾರಿ ಗೌರಮ್ಮ ಸುಂಕದ, ಕೃಷಿ ಉಪನಿರ್ದೇಶಕ ರೂಢಗಿ ಸೇರಿದಂತೆ ಆಯಾ ತಾಲೂಕಿನ ಸಹಾಯಕ ಕೃಷಿ ಅಧಿಕಾರಿಗಳು ಹಾಗೂ ವಿಮಾ ಕಂಪನಿಯ ಪ್ರತಿನಿಧಿಗಳು ಇದ್ದರು.

ಬೆಳೆವಿಮೆಗೆ ಟೋಲ್ ಪ್ರೀ ನಂಬರ್‌

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಹಿನ್ನೆಲೆ ಯುನಿವರ್ಸ್‌ ಸೊಂಪು ವಿಮೆ ಕಂಪನಿಗೆ ಸಂಬಂಧಿಸಿದ ಬೆಳೆವಿಮೆ, ಬೆಳೆ ಪರಿಹಾರ ಹಾಗೂ ದೂರು ದಾಖಲಿಸಲು ಟೋಲ್ ಪ್ರೀ ನಂ.1800-200-5142ಗೆ ಕರೆ ಮಾಡಬಹುದಾಗಿದೆ.

ವಿವಿಧ ಬೆಳೆವಿಮೆ ಕಂತಿನ ಮಾಹಿತಿ ವಿವರ:

ಹಿಂಗಾರು ಹಂಗಾಮಿಗೆ ಬೆಳೆವಿಮೆ ಯೋಜನೆಯಡಿ ಜೋಳ (ಮ.ಆ ಮತ್ತು ನೀರಾವರಿ), ಕುಸುಬೆ (ಮ.ಆ), ಅಗಸೆ (ಮ.ಆ), ಹುರಳಿ (ಮ.ಆ) ಬೆಳೆಗೆ ವಿಮೆ ಕಂತು ಪಾವತಿಗೆ ನವೆಂಬರ್‌ 15 ಕೊನೆಯ ದಿನವಾದರೆ, ಸೂರ್ಯಕ್ರಾಂತಿ (ಮ.ಆ ಮತ್ತು ನೀ), ಗೋದಿ (ಮ.ಆ) ಬೆಳೆಗೆ ನವೆಂಬರ್‌ 30, ಗೋವಿನ ಜೋಳ (ನೀ), ಗೋದಿ (ನೀ), ಈರುಳ್ಳಿ (ನೀ) ಬೆಳೆಗೆ ಡಿಸೆಂಬರ್‌ 16, ಕಡಲೆ (ಮ.ಆ ಮತ್ತು ನೀ) ಬೆಳೆಗೆ ಡಿಸೆಂಬರ್‌ 12 ಕೊನೆಯ ದಿನವಾಗಿದೆ. ಬೇಸಿಗೆ ಹಂಗಾಮಿಗೆ ಸೂರ್ಯಕ್ರಾಂತಿ, ಶೇಂಗಾ, ಈರುಳ್ಳಿ (ನೀರಾವರಿ) ಬೆಳೆಗೆ ಫೆಬ್ರವರಿ 28, 2025 ಕೊನೆಯ ದಿನವಾಗಿದೆ.