ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಲಿಪಿಕ ನೌಕರರು ಸೌಹಾರ್ದಯುತವಾಗಿ ಸಾರ್ವಜನಿಕ ಮತ್ತು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಕೆಲಸಗಳನ್ನು ಕೂಡಲೇ ಇತ್ಯರ್ಥಗೊಳಿಸಲು ಮುಂದಾದಲ್ಲಿ ವೃತ್ತಿ ಬದುಕನ್ನು ಸುಗಮವಾಗಿ ಕಳೆಯಲು ಹಾಗೂ ಮಾನಸಿಕವಾಗಿ ನೆಮ್ಮದಿಯಿಂದಿರಲು ಸಾಧ್ಯ ಎಂದು ಜಿಲ್ಲಾ ಉಪನಿರ್ದೇಶಕ ಅಜಿತ ಮನ್ನಿಕೇರಿ ಹೇಳಿದರು.ನಗರದ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಲಿಪಿಕ ನೌಕರರ, ವಾಹನ ಚಾಲಕರ ಮತ್ತು ಗ್ರೂಪ್ ಡಿ ನೌಕರರ ಸಂಘದ ಬಾಗಲಕೋಟೆ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಬೋಧಕೇತರ ನೌಕರರಿಗೆ ವಿದ್ಯುನ್ಮಾನ ಸೇವಾ ವಹಿಯ ತಂತ್ರಾಂಶ ನಿರ್ವಹಣೆ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಒಳಪಡುವ ಎಲ್ಲ ಶಿಕ್ಷಕರ, ನೌಕರರ, ಅಧಿಕಾರಿಗಳ ಸೇವಾ ವಿವರಗಳನ್ನು ಇಎಸ್ಆರ್ ತಂತ್ರಾಂಶದಲ್ಲಿ ದಾಖಲಿಸಲು ಅವಕಾಶ ನೀಡಿದ ಹಿನ್ನೆಲೆ ಜಿಲ್ಲೆಯಲ್ಲಿ ಸಾವಿರಾರು ನೌಕರರು, ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಸೇವಾ ವಿವರಗಳನ್ನು ಆನ್‌ಲೈನ್‌ಲ್ಲಿ ದಾಖಲಿಸುವುದರಿಂದ ಮುಂದಿನ ದಿನಗಳಲ್ಲಿ ಪಿಂಚಣಿ, ವೇತನ ಬಡ್ತಿಗಳು ಸೇರಿದಂತೆ ಇನ್ನಿತರೆ ಸೌಲಭ್ಯಗಳಿಗೆ ಅನುಕೂಲವಾಗುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತಂದಿದೆ ಎಂದು ತಿಳಿಸಿದ ಅವರು, ಈಗಾಗಲೇ ಎಲ್ಲ ಅಧಿಕಾರಿಗಳಿಗೆ ಸೂಚನೆ ನಿಡಲಾಗಿದ್ದು, ನಿಖರವಾಗಿ ಮಾಹಿತಿ ಹಾಗೂ ಪೂರಕ ದಾಖಲೆಗಳನ್ನು ತಂತ್ರಾಂಶದಲ್ಲಿ ಇಂದೀಕರಿಸುವಂತೆ ತಿಳಿಸಿದರು.
ಶಿಕ್ಷಣಾಧಿಕಾರಿ ಎಚ್.ಜಿ.ಮಿರ್ಜಿ ಮಾತನಾಡಿ, ಶಿಕ್ಷಕರ ಸೇವಾ ಪುಸ್ತಕಗಳು ಆಕಸ್ಮಿಕ ಕಳೆದು ಹೋದಲ್ಲಿ ಹಾಗೂ ಬಹು ವರ್ಷಗಳ ನಂತರ ಕೆಲವು ಸೇವಾ ಪುಸ್ತಕಗಳು ಹರಿದು ಹೋದ ಪ್ರಕರಣಗಳಲ್ಲಿ ಇಎಸ್ಆರ್ ತಂತ್ರಾಂಶದಲ್ಲಿನ ದಾಖಲೆಗಳು ಉಳಿದುಕೊಂಡು ಆಗಿನ ಸಮಯದಲ್ಲಿ ಎಲ್ಲರಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.ತರಬೇತಿ ಸಂಸ್ಥೆಯ ಪ್ರಾಂಶುಪಾಲ ಎ.ಎಸ್. ನಟರಾಜ, ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ ಎ.ಇನಾಮದಾರ ಪ್ರಾಸ್ತವಿಕವಾಗಿ ಮಾತನಾಡಿದರು.
ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಉಪನಿರ್ದೇಶಕ ಅಜಿತ ಸಿ. ಮನ್ನಿಕೇರಿ ಅವರನ್ನು ಜಿಲ್ಲಾ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಗಮೇಶ ಸಣ್ಣತಂಗಿ ಯೋಜನೆಯ ಎಲ್ಲ ವಿವರಗಳನ್ನು ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಿದರು. ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಹುನ್ನೂರ ನಿರೂಪಿಸಿದರು. ಸಹ ಕಾರ್ಯದರ್ಶಿ ಅಮೀನಸಾಬ್ ಹಳ್ಳೂರ ವಂದಿಸಿದರು. ಸಂಸ್ಥೆಯ ಬೋಧಕ ಮಲ್ಲಿಕಾರ್ಜುನ ಗುಡೂರ, ಜಿಲ್ಲಾ ಸಂಘದ ಉಪಾಧ್ಯಕ್ಷೆ ಸುವರ್ಣ ಕೊಳಚಿ, ಕೋಶಾಧ್ಯಕ್ಷ ಸಿ.ಎಂ.ಕುಲಕರ್ಣಿ, ಸಂಘಟನಾ ಕಾರ್ಯದರ್ಶಿ ಸುರೇಶ ದಡ್ಡಿ, ಹುನಗುಂದ ತಾಲೂಕಾಧ್ಯಕ್ಷ ಮಲ್ಲಿಕ ವಾಲಿಕಾರ, ಮಹೇಶ ತಳ್ಳಿಕೇರಿ, ರಾಜು ನಾಯಕ, ರೇಖಾ ಬೀಳಗಿ, ಸಾವಿತ್ರಿ ಯರಗಾ, ಎಸ್.ಎಸ್.ಹಾಲವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.;Resize=(128,128))
;Resize=(128,128))