ಕೊಬ್ಬರಿ ಖರೀದಿ: 3-4 ದಿನದಲ್ಲಿ ನೋಂದಣಿ ಮುಕ್ತಾಯ; ರೈತರ ಆಕ್ರೋಶ

| Published : Feb 10 2024, 01:50 AM IST

ಕೊಬ್ಬರಿ ಖರೀದಿ: 3-4 ದಿನದಲ್ಲಿ ನೋಂದಣಿ ಮುಕ್ತಾಯ; ರೈತರ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ನಾಫೆಡ್ ಮೂಲಕ ಕೊಬ್ಬರಿ ಖರೀದಿ ಮಾಡಲು ಕೆಲ ದಿನಗಳಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಆದರೆ ಇದು ಶುರುವಾಗಿ ಮೂರ್ನಾಲ್ಕು ದಿನಗಳಾಗಿವೆ. ಆದರೆ ನೋಂದಣಿ ಪ್ರಕ್ರಿಯೆ ಮುಕ್ತಾಯವಾಗಿದೆ, ಈ ಬೆಳವಣಿಗೆ ಅರಸೀಕೆರೆ ಬೆಳೆಗಾರರಲ್ಲಿ ಸಹಜವಾಗಿಯೇ ಆತಂಕ ಮೂಡಿಸಿದೆ.

ನಾಫೆಡ್‌ ಮೂಲಕ ಖರೀದಿ ಪ್ರಕ್ರಿಯೆ । ಕೆಲದಿನಗಳಲ್ಲೇ ನೋಂದಣಿ ಅಂತ್ಯಕ್ಕೆ ಬೆಳೆಗಾರರ ಆತಂಕ

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಾಫೆಡ್ ಮೂಲಕ ಕೊಬ್ಬರಿ ಖರೀದಿ ಮಾಡಲು ಕೆಲ ದಿನಗಳಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಆದರೆ ಇದು ಶುರುವಾಗಿ ಮೂರ್ನಾಲ್ಕು ದಿನಗಳಾಗಿವೆ. ಆದರೆ ನೋಂದಣಿ ಪ್ರಕ್ರಿಯೆ ಮುಕ್ತಾಯವಾಗಿದೆ, ಈ ಬೆಳವಣಿಗೆ ಬೆಳೆಗಾರರಲ್ಲಿ ಸಹಜವಾಗಿಯೇ ಆತಂಕ ಮೂಡಿಸಿದೆ, ಅಲ್ಲದೆ ಅನೇಕರಲ್ಲಿ ಅನುಮಾನಕ್ಕೆ ಕಾರಣವಾಗಿದೆ.

ಕೊಬ್ಬರಿ ನೋಂದಣಿ ಬಗ್ಗೆ ಖರೀದಿ ಅಂತ್ಯದ ಡಿಸ್ ಪ್ಲೇ ಆಗುತ್ತಿದೆ. ಹೀಗಾಗಿ ಕೊಬ್ಬರಿ ಮಾರಾಟಕ್ಕೆ ನೋಂದಣಿಗಾಗಿ ಕಾಯುತ್ತಿದ್ದ ಸಾವಿರಾರು ರೈತರು ದಿಢೀರ್ ಆಕ್ರೋಶಗೊಂಡು ನಗರದ ಎಪಿಎಂಸಿ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಸ್ಥಳೀಯ ಶಾಸಕ ಹಾಗೂ ಕರ್ನಾಟಕ ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಸರ್ಕಾರದ ವಿವಿಧ ಹಂತದ ಅಧಿಕಾರಿಗಳೊಂದಿಗೆ ಮಾತನಾಡಿದರು. ನಂತರ ರೈತರನ್ನು ಉದ್ದೇಶಿಸಿ ಮಾತನಾಡಿ, ಸಮಸ್ಯೆಯ ವಾಸ್ತವಾಂಶ ತಿಳಿಸಿದರು.

ಕೇಂದ್ರ ಸರ್ಕಾರ ನಾಫೆಡ್ ಮೂಲಕ ಕೇವಲ ೬೨,೫೦೦ ಮೆಟ್ರಿಕ್ ಟನ್ ಕೊಬ್ಬರಿ ಖರೀದಿಗೆ ಅವಕಾಶ ನೀಡಿದ್ದರಿಂದ ಕೇವಲ ಶೇ.೨೫-೩೦ ರಷ್ಟು ರೈತರು ಮಾತ್ರ ನೋಂದಾಯಿಸಿಕೊಂಡಿದ್ದಾರೆ. ಅಲ್ಲದೆ ನೋಂದಾವಣೆ ಅಧಿಕಾರಿಗಳು ಕೆಲ ವರ್ತಕರೊಂದಿಗೆ ಶಾಮೀಲಾಗಿ ಅಲ್ಲೇ ನೋಂದಣಿ ಮಾಡಿಸಿರುವುದರಿಂದ ನೋಂದಣಿ ಪ್ರಕ್ರಿಯೆ ಮುಗಿದು ಹೋಗಿದೆ ಎನ್ನಲಾಗುತ್ತಿದೆ. ಇದರಿಂದ ನೋಂದಣಿಗೆ ಕಾಯುತ್ತಿರುವ ರೈತರಿಗೆ ಅನ್ಯಾಯವಾಗಿದೆ ಎಂದು ಕಿಡಿಕಾರಿದರು.

ರೈತರಲ್ಲಿರುವ ಎಲ್ಲಾ ಕೊಬ್ಬರಿಯನ್ನು ಖರೀದಿಸುವಂತೆ ರಾಜ್ಯ ಸರ್ಕಾರದ ಮೂಲಕ ಕೇಂದ್ರವನ್ನು ಒತ್ತಾಯಿಸಲಾಗುವುದು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.

ಈ ಮೊದಲು ರೈತರ ಬಳಿ ಎಷ್ಟು ಕೊಬ್ಬರಿ ಇದೆಯೋ ಅಷ್ಟನ್ನು ಇಂತಿಷ್ಟು ಎಂದು ಖರೀದಿ ಮಾಡಬೇಕು. ನೋಂದಣಿ ಪ್ರಾರಂಭವಾದ ೪೫ ದಿನಗಳವರೆಗೂ ನೋಂದಣಿ ಮಾಡಿಕೊಳ್ಳಬೇಕು ಎಂದು ಹೇಳಲಾಗಿತ್ತು. ಆದರೆ ಮೂರ್ನಾಲ್ಕು ದಿನಗಳಲ್ಲಿ ನೋಂದಣಿ ಸ್ಥಗಿತ ಆಗಿದೆ.

ಈ ಬೆಳವಣಿಗೆ ಸಾಕಷ್ಟು ಗುಮಾನಿಗಳಿಗೆ ಎಡೆ ಮಾಡಿಕೊಟ್ಟಿದ್ದು, ನೋಂದಣಿ ಮುಂದುವರಿಸಬೇಕು. ಎಲ್ಲಾ ಕೊಬ್ಬರಿ ಖರೀದಿ ಮಾಡಬೇಕು, ಇಲ್ಲದಿದ್ದರೆ ಸರ್ಕಾರಗಳ ವಿರುದ್ಧ ಬೀದಿಗಿಳಿದು ಉಗ್ರ ಹೋರಾಟ ಮಾಡುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

ರೈತರ ಲೆಕ್ಕಾಚಾರದ ಪ್ರಕಾರ ಶೇ. ೨೫ ರಷ್ಟು ಮಾತ್ರ ನೋಂದಣಿ ಆಗಿದ್ದು, ಇನ್ನೂ ಶೇ. ೭೫ ಆಗಬೇಕಿದೆ. ಆದರೆ ಅಧಿಕಾರಿಗಳು ಮಾತ್ರ ಶೇ. ೮೪ ರಷ್ಟು ಗುರಿ ಸಾಧನೆಯಾಗಿದೆ ಎಂದು ಹೇಳುತ್ತಿದ್ದಾರೆ. ಇದು ರೈತರನ್ನು ಕೆರಳಿಸಿದೆ. ಈ ನಡುವೆ ಸ್ಥಳೀಯ ಕೃಷಿ ಮಾರುಕಟ್ಟೆಯ ನಾಫೆಡ್ ಕಾರ್ಯಾಲಯಗಳಲ್ಲಿ ಖರೀದಿ ಕಾರ್ಡ್ ವಿತರಿಸುವ ಕಾರ್ಯವನ್ನೂ ನಿಲ್ಲಿಸಿರುವುದು ರೈತರ ಆಕ್ರೋಶ ಹೆಚ್ಚುವಂತೆ ಮಾಡಿದೆ.

ಅರ್ಹ ರೈತರ ನೋಂದಣಿ ಆಗುವವರೆಗೂ ಯಾವುದೇ ಕಾರಣಕ್ಕೂ ಕೊಬ್ಬರಿ ಖರೀದಿ ಮಾಡಲು ಬಿಡುವುದಿಲ್ಲ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.ಶಾಸಕ ಕೆ.ಎಂ.ಶಿವಲಿಂಗೇಗೌಡ ಸರ್ಕಾರದ ವಿವಿಧ ಹಂತದ ಅಧಿಕಾರಿಗಳೊಂದಿಗೆ ಮಾತನಾಡಿ ರೈತರಿಗೆ ಕೊಬ್ಬರಿ ಖರೀದಿ ನೋಂದಣಿ ಸ್ಥಗಿತದ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದರು.