ಸಾರಾಂಶ
2023-24ನೇ ಸಾಲಿನ ಬೆಲೆ ಸ್ಥಿರೀಕರಣ ಯೋಜನೆಯಡಿ ಜಿಲ್ಲೆಯಲ್ಲಿ ರೈತರಿಂದ ತೊಗರಿ ಕೃಷಿ ಉತ್ಪನ್ನ ಖರೀದಿಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ಪ್ರಸಕ್ತ 2023-24ನೇ ಸಾಲಿನ ಬೆಲೆ ಸ್ಥಿರೀಕರಣ ಯೋಜನೆಯಡಿ ಜಿಲ್ಲೆಯಲ್ಲಿ ರೈತರಿಂದ ತೊಗರಿ ಕೃಷಿ ಉತ್ಪನ್ನ ಖರೀದಿಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಈ ಕುರಿತಂತೆ ನಿರ್ಧಾರ ಕೈಗೊಂಡಿದ್ದು, ರಾಜ್ಯ ಸಹಕಾರ ಮಾರಾಟ ಮಂಡಳ ನಿಯಮಿತ ಕಲಬುರಗಿ ಮತ್ತು ಕಲಬುರಗಿ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯನ್ನು ತೊಗರಿ ಖರೀದಿಗೆ ನೋಡಲ್ ಏಜೆನ್ಸಿಯಾಗಿ ನೇಮಿಸಿಲಾಗಿದೆ. ಜಿಲ್ಲೆಯ 185 ಪ್ರಾಥಮಿಕ ಕೃಷಿ ಉತ್ಪನ್ನ ಸಹಕಾರ ಸಂಘಗಳು ಅಥವಾ ರೈತ ಉತ್ಪಾದಕ ಸಂಘಗಳಲ್ಲಿ ಜ.27ರ ವರೆಗೆ ರೈತರು ತೊಗರಿ ಮಾರಾಟ ಮಾಡಲು ಹೆಸರು ನೋಂದಾಯಿಸಿಕೊಳ್ಳಬೇಕು. ಜ.20ರಿಂದ ಖರೀದಿ ಪ್ರಕ್ರಿಯೆ ನಡೆಯಲಿದೆ ಎಂದರು.
ಬೆಲೆ ಸ್ಥಿರೀಕರಣ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ತೊಗರಿಯನ್ನು ಮಾರುಕಟ್ಟೆ ದರಕ್ಕೆ ಅಂದರೆ ಕೇಂದ್ರ ಸರ್ಕಾರದ AG.Mark Portal ನಿಂದ Minimum Assured Procurement Price (MAPP) ಅಥವಾ Dynamic Buffer Procurement Price (DBPP)ಈ ಎರಡು ದರಗಳನ್ನು ಪಡೆದುಕೊಂಡು ಇವುಗಳಲ್ಲಿ ಯಾವ ಬೆಲೆ ಹೆಚ್ಚು ಇದೆಯೋ ಅದನ್ನು ರೈತರಿಗೆ ಪಾವತಿಸಿ ತೊಗರಿ ಖರೀದಿಸಲಾಗುತ್ತದೆ.ಕಲಬುರಗಿ ಜಿಲ್ಲೆ ರೈತ ಭಾಂದವರು ಇದರ ಸದುಪಯೋಗ ಪಡೆಯಬೇಕು. ಸಮೀಪದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಥವಾ ರೈತ ಉತ್ಪಾದಕ ಸಂಘಗಳಿಗೆ ಭೇಟಿ ನೀಡಿ ತಾವು ಬೆಳೆದ ತೊಗರಿ ಮಾರಾಟಕ್ಕೆ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ತರನ್ನುಮ್ ಮತ್ತು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮನವಿ ಮಾಡಿದ್ದಾರೆ.