- ಬೆಂಗಳೂರಿನಲ್ಲಿಂದು ಸಂಘದ ಸಭೆ, ಮುಂದಿನ ಹೋರಾಟ ರೂಪುರೇಷೆಗಳ ಚರ್ಚೆ: ಎಚ್.ಎಸ್.ಕಾಂತರಾಜು - - -
- ಅನ್ಯಾಯಗಳ ವಿರುದ್ಧ ಕೆಪಿಟಿಸಿಎಲ್ ನೌಕರರ ಸಂಘ ಸಹ ಧ್ವನಿ ಎತ್ತದಿರುವುದು ದುರಂತ.- 2004ರಲ್ಲಿ ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ವಿದ್ಯುತ್ ಬಿಲ್ ವಿತರಿಸುವ, ಕಂದಾಯ ವಸೂಲಿಗೆ ನೇಮಕ.
- ಗ್ರಾಮ ವಿದ್ಯುತ್ ಪ್ರತಿನಿಧಿಗಳ ಸೇವೆಯನ್ನು ಹೆಸ್ಕಾಂ 23 ವರ್ಷಗಳಿಂದ ಪಡೆದುಕೊಳ್ಳುತ್ತಿದೆ.- ಇಎಸ್ಐ, ಪಿಎಫ್‌ನಂತಹ ಯಾವುದೇ ಸಾಮಾನ್ಯ ಸೌಲಭ್ಯಗಳನ್ನೂ ನೌಕರರಿಗೆ ನೀಡದೇ ವಂಚನೆ
- - -
ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯದ ಎಲ್ಲ ಗ್ರಾಮಗಳ ಗ್ರಾಮ ವಿದ್ಯುತ್ ಪ್ರತಿನಿಧಿಗಳಿಗೆ ನ್ಯಾಯಾಲಯದ ಆದೇಶದಂತೆ ಸೇವಾ ಭದ್ರತೆ, ಕೆಲಸಕ್ಕೆ ತಕ್ಕಂತೆ ಸಮಾನ ವೇತನ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಹೋರಾಟದ ರೂಪುರೇಷೆ ಬಗ್ಗೆ ಚರ್ಚಿಸಲು ಮಾ.4ರಂದು ಬೆಂಗಳೂರಿನಲ್ಲಿ ಅಖಿಲ ಕರ್ನಾಟಕ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘ ಕಚೇರಿಯಲ್ಲಿ ರಾಜ್ಯಮಟ್ಟದ ಸಭೆ ಕರೆಯಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಚಿತ್ರದುರ್ಗದ ಎಚ್.ಎಸ್.ಕಾಂತರಾಜು ಹೇಳಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಸ್ಕಾಂ, ಹೆಸ್ಕಾಂ ಸೇರಿದಂತೆ ರಾಜ್ಯಾದ್ಯಂತ ಇರುವ ಐದೂ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಪ್ರತಿ ಗ್ರಾ.ಪಂ.ಗೆ ಒಬ್ಬರಂತೆ ಗ್ರಾಮ ವಿದ್ಯುತ್ ಪ್ರತಿನಿಧಿಗಳನ್ನು 2004ರಲ್ಲಿ ಆಗಿನ ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ವಿದ್ಯುತ್ ಬಿಲ್ ವಿತರಿಸುವ ಹಾಗೂ ಕಂದಾಯ ವಸೂಲಿ ಕೆಲಸಕ್ಕೆ ನೇಮಿಸಿಕೊಳ್ಳಲಾಗಿತ್ತು ಎಂದರು.
ಗ್ರಾಮ ವಿದ್ಯುತ್ ಪ್ರತಿನಿಧಿಗಳ ಸೇವೆಯನ್ನು ಹೆಸ್ಕಾಂ 23 ವರ್ಷ ಪಡೆದುಕೊಂಡಿದೆ, ಈಗಲೂ ಸೇವೆ ಪಡೆಯುತ್ತಿದೆ. ಆದರೆ, ಈ ನೌಕರರ ಜೀವನ ಮಾತ್ರ ಕಷ್ಟವಾಗಿದೆ. ಕೇವಲ ₹2 ಸಾವಿರಗಳಿಗೆ ಹತ್ತಾರು ವರ್ಷ ನಾವು ಸೇವೆ ಸಲ್ಲಿಸಿದ್ದೇವೆ. ನಮ್ಮ ಕಷ್ಟವನ್ನು ಅರಿತ ಅಂದಿನ ಇಂಧನ ಸಚಿವ ಡಿ.ಕೆ.ಶಿವಕುಮಾರ ₹12 ಸಾವಿರ ವೇತನ ನಿಗದಿಪಡಿಸಿದ್ದರು. ಅನಂತರ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಸುನೀಲಕುಮಾರ ₹17,500 ಗಳಿಗೆ ಹೆಚ್ಚಿಸಿದ್ದರು. ಇದನ್ನು ಹೊರತುಪಡಿಸಿದರೆ, ಇಎಸ್ಐ, ಪಿಎಫ್‌ನಂತಹ ಯಾವುದೇ ಸಾಮಾನ್ಯ ಸೌಲಭ್ಯಗಳನ್ನೂ ನೀಡದೇ ವಂಚಿಸಲಾಗುತ್ತಿದೆ ಎಂದು ದೂರಿದರು.ಇಂಥ ನಿರ್ಲಕ್ಷ್ಯಗಳಿಂದ ಬೇಸತ್ತ ಗ್ರಾಮ ವಿದ್ಯುತ್ ಪ್ರತಿನಿಧಿಗಳು ಬೆಂಗಳೂರು, ಬೆಳಗಾವಿಯಲ್ಲಿ ಹಲವಾರು ಹೋರಾಟ ನಡೆಸಿದ್ದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆ 2014ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದೆವು. ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಏಕಸದಸ್ಯ ಪೀಠವು 2020ರಲ್ಲಿ ಜಿ.ವಿ.ಪಿ.ಗಳಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ, ಜಿ.ವಿ.ಪಿ.ಗಳಿಗೆ ಸೂಕ್ತ ಹುದ್ದೆ ಮತ್ತು ವೇತನ ನಿಗದಪಡಿಸಿ, ಸೇವೆ ಕಾಯಂಗೊಳಿಸಲು ಆದೇಶಿಸಿತ್ತು. ಆದರೆ, ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರಿಂದ ದ್ವಿಸದಸ್ಯ ಪೀಠಕ್ಕೆ ಕೇಸ್ ವರ್ಗಾವಣೆಯಾಯಿತು. ಅಲ್ಲಿಯೂ ಜನವರಿ 2024ರಲ್ಲಿ ಜಿವಿಪಿ ಪರ ತೀರ್ಪು ಬಂದಿತ್ತು ಎಂದು ಕಾತರಾಜು ವಿವರಿಸಿದರು.
ಸರ್ಕಾರದ ಎ.ಜೆ. ಸಹ ನಮ್ಮ ಪರವಾಗಿ ಆದೇಶ ನೀಡಿದ್ದಾರೆ. ಆದರೂ, ನ್ಯಾಯಾಲಯ ಹಾಗೂ ಎಜೆ ಆದೇಶಗಳನ್ನು ಇಲಾಖೆಯಾಗಲೀ, ಸರ್ಕಾರವಾಗಲೀ ಪಾಲನೆ ಮಾಡಿಲ್ಲ. 8-10 ಸಚಿವರು ಶಿಫಾರಸು ಪತ್ರ ನೀಡಿದರೂ ಅಧಿಕಾರಿಗಳ ಧೋರಣೆಯಿಂದ ಕೇವಲ ಸಣ್ಣಪುಟ್ಟ ಬದಲಾವಣೆ ಮಾಡಿ, ಇಲಾಖೆ ಕೈತೊಳೆದುಕೊಂಡಿದೆ. ಇದರಿಂದಾಗಿ ಗ್ರಾಮ ವಿದ್ಯುತ್ ಪ್ರತಿನಿಧಿಗಳಿಗೆ ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದಾರೆ. ಈಗ ಜಿವಿಪಿಗಳಿಗೆ ಕೆಲಸದ ಒತ್ತಡವೂ ಹೆಚ್ಚಾಗಿದೆ. ಇದರ ವಿರುದ್ಧ ಕೆಪಿಟಿಸಿಎಲ್ ನೌಕರರ ಸಂಘ ಸಹ ಧ್ವನಿ ಎತ್ತದಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.ನಮ್ಮ ದೀರ್ಘಾವಧಿಯ ಅವಶ್ಯಕ ಸೇವೆಯನ್ನು ಪರಿಗಣಿಸಿ, ಮಾನವೀಯತೆ ಆಧಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಜೆಟ್‌ನಲ್ಲಿ ರಾಜ್ಯದ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಸೇವೆಯನ್ನು ಕಾಯಂಗೊಳಿಸುವ ಭಾಗ್ಯ ಘೋಷಿಸಬೇಕು. 3 ಸಾವಿರಕ್ಕೂ ಅಧಿಕ ನೌಕರರ ಕುಟುಂಬಗಳ ನೆಮ್ಮದಿಯ ಬದುಕಿಗೆ ಗ್ಯಾರಂಟಿ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೊಟ್ರೇಶ ಪಿ. ತೆಲಗಿ, ರಾಮಣ್ಣ, ಲೋಕಿಕೆರೆ ರಾಜಣ್ಣ, ಬನ್ನಿಕೋಡು ನಿಜಗುಣ, ಟಿ.ಶಿವಕುಮಾರ, ರಂಗಸ್ವಾಮಿ ಇತರರು ಇದ್ದರು.- - -
-3ಕೆಡಿವಿಜಿ2:ದಾವಣಗೆರೆಯಲ್ಲಿ ಮಂಗಳವಾರ ಅಖಿಲ ಕರ್ನಾಟಕ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಚಿತ್ರದುರ್ಗದ ಎಚ್.ಎಸ್. ಕಾಂತರಾಜು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.