ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ಸಂಬಂಧ ಮತದಾರ ಪಟ್ಟಿ ತಯಾರಿಕೆ ಪ್ರಕ್ರಿಯೆ ಆರಂಭವಾಗಿದ್ದು ಮತಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ನ. 6 ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.ನಗರದ ಡಿಸಿ ಕಚೇರಿಯಲ್ಲಿ ಶನಿವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ಸಂಬಂಧ ಮತದಾರ ಪಟ್ಟಿ ತಯಾರಿಕೆಗೆ ವೇಳಾಪಟ್ಟಿ ನಿಗಧಿಪಡಿಸಿದ್ದಾರೆ. ನ. 1-2025ಕ್ಕೆ ಮತದಾರರ ಪಟ್ಟಿ ಸಿದ್ದಪಡಿಸಲಾಗುವುದು. ಈ ಸಂಬಂಧ ಜಿಲ್ಲೆಯ ಎಲ್ಲಾ ತಾಲೂಕುಗಳು, ನಗರಸಭೆ ವ್ಯಾಪ್ತಿಯಲ್ಲಿ ಸಹಾಯಕ ಮತದಾರರ ನೋಂದಣಾಧಿಕಾರಿ ಹಾಗೂ ನಿರ್ಧಿಷ್ಟಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.ಮತದಾರ ಪಟ್ಟಿ ತಯಾರಿಕೆಗೆ ಸೆ.30 ರಂದು ಅಧಿಸೂಚನೆ ಹೊರಡಿಸಲಾಗಿದೆ. ಅ.15 ರಂದು ಮೊದಲ ಬಾರಿಗೆ ಹಾಗೂ 25 ರಂದು ಎರಡನೇ ಬಾರಿಗೆ ಅಧಿಸೂಚನೆಯನ್ನು ಪತ್ರಿಕೆಗಳಲ್ಲಿ ಪ್ರಕಟಣೆ ನೀಡಲಾಗುವುದು. ನಮೂನೆ-18ರಲ್ಲಿ ಅರ್ಜಿ ಸಲ್ಲಿಸಲು ನ.6 ಕಡೆಯ ದಿನವಾಗಿದೆ. ನ.20ವರೆಗೆ ಕರಡು ಮತದಾರರ ಪಟ್ಟಿ ಸಿದ್ಧಪಡಿಸಲಾಗುವುದು. ನ.25 ರಂದು ಕರಡು ಪ್ರತಿ ಪ್ರಕಟಿಸಿ ಆಕ್ಷೇಪಣೆ ಆಹ್ವಾನಿಸಲಾಗುವುದು. ಡಿ.10 ಆಕ್ಷೇಪಣೆಗಳನ್ನು ಸಲ್ಲಿಸಲು ಕಡೆಯ ದಿನವಾಗಿದೆ. ಡಿ.25ರ ಒಳಗೆ ಆಕ್ಷೇಪಣೆಗಳ ವಿಲೇವಾರಿಗೆ ಕ್ರಮ ವಹಿಸಲಾಗುವುದು. ಡಿ 30 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಹೆಸರು ನೊಂದಾಯಿಸಲು ಇಚ್ಛಿಸುವವರು ಪದವಿಧರ ಕ್ಷೇತ್ರದ ಸಾಮಾನ್ಯ ನಿವಾಸಿಯಾಗಿರಬೇಕು. ನ.1 2025 ನಿರ್ಧಿಷ್ಟಪಡಿಸಿದ ಅರ್ಹ ದಿನಾಂಕವಾಗಿದ್ದು, ಇದಕ್ಕೂ ಕನಿಷ್ಟ 3 ವರ್ಷಗಳ ಮೊದಲು ರಾಜ್ಯ ಸರ್ಕಾರ ಅಧಿಸೂಚಿಸಿರುವ ವಿಶ್ವ ವಿದ್ಯಾಲಯದಿಂದ ಪದವಿ ಅಥವಾ ಅದಕ್ಕೆ ಸಮಾನವಾದ ವಿದ್ಯಾರ್ಹತೆ ಹೊಂದಿರಬೇಕು. ವಿದ್ಯಾರ್ಹತೆಯ ಪ್ರಮಾಣ ಪತ್ರಗಳೊಂದಿಗೆ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಬ್ಯಾಂಕ್, ಕಿಸಾನ್ ಅಥವಾ ಅಂಚೆ ಕಚೇರಿ ಚಾಲ್ತಿ ಖಾತೆಯ ಪಾಸ್ ಬುಕ್ ಅಥವಾ ಚುನಾವಣೆ ಆಯೋಗ ನಿಗದಿಪಡಿಸಿದ ಇತರೆ ದಾಖಲೆಗಳನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿ ನಮೂನೆ-18 ಅರ್ಜಿಯೊಂದಿಗೆ ವಾಸಸ್ಥಳ ವ್ಯಾಪ್ತಿಯ ಸಹಾಯಕ ಮತದಾರರ ನೋಂದಣಾಧಿಕಾರಿ ಅಥವಾ ನಿರ್ದಿಷ್ಟಪಡಿಸಿದ ಅಧಿಕಾರಿಗಳಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದು ಎಂದರು.ಅರ್ಜಿ ನಮೂನೆಯನ್ನು ಚುನಾವಣಾ ಆಯೋಗದ ವೆಬ್‍ಸೈಟ್ http://eci.gov.in/ files/category/356-forms-for-registration-in-eroll ರಾಜ್ಯ ಚುನಾವಣಾಧಿಕಾರಿಗಳ ಕಚೇರಿ ವೆಬ್‍ಸೈಟ್ https://ceo.karnataka.gov.in/20/download-forms/en ಮೂಲಕ ಡೌನ್‍ಲೋಡ್ ಮಾಡಿಕೊಳ್ಳಬಹುದು. ಜಿಲ್ಲಾಧಿಕಾರಿ ಹಾಗೂ ಎಲ್ಲಾ ತಹಸೀಲ್ದಾರ್ ಕಚೇರಿಗಳಲ್ಲಿಯೂ ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
ಮತದಾರರ ಪಟ್ಟಿ ಕುರಿತು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಂಖ್ಯೆ 08194-220720, ಉಪವಿಭಾಗಾಧಿಕಾರಿ ಕಚೇರಿ ಸಂಖ್ಯೆ 08194-200342, ಮೊಳಕಾಲ್ಮೂರು ತಾಲೂಕು ಕಚೇರಿ ಸಂಖ್ಯೆ 08198-229234, ಚಳ್ಳಕೆರೆ ತಾಲೂಕು ಕಚೇರಿ ಸಂಖ್ಯೆ 08195-250648, ಚಿತ್ರದುರ್ಗ 08914-222416, ಹಿರಿಯೂರು 08193-263226, ಹೊಸದುರ್ಗ ತಾಲ್ಲೂಕು ಕಚೇರಿ ಸಂಖ್ಯೆ 08199-230224, ಹೊಳಲ್ಕೆರೆ ತಾಲೂಕು ಕಚೇರಿ ಸಂಖ್ಯೆ 0891-200013 ಕರೆ ಮಾಡಬಹುದು ಎಂದು ಟಿ.ವೆಂಕಟೇಶ್ ತಿಳಿಸಿದರು.ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ, ಚುನಾವಣೆ ತಹಶೀಲ್ದಾರ್ ನಾಗವೇಣಿ, ಚುನಾವಣೆ ಶಿರಸ್ತೇದಾರ್ ಮಲ್ಲಿಕಾರ್ಜುನ ನಾಯಕ ಸೇರಿದಂತೆ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಕಾರ್ಯದರ್ಶಿ ಸಿ.ಜೆ.ನಾಸೀರುದ್ದೀನ್ ಮುಖಂಡ ಪ್ರಕಾಶ್ ರಮಾನಾಯ್ಕ್, ಜಿಲ್ಲಾ ಜೆಡಿಎಸ್ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಯಶವಂತ್ ಕುಮಾರ್ ಇದ್ದರು.