ಸಾರಾಂಶ
ಪ್ರಜಾಪ್ರಭುತ್ವವನ್ನೇ ನಾಶ ಮಾಡುವ ಸಂವಿಧಾನವನ್ನು ದುರ್ಬಲಗೊಳಿಸುವ ಕುಕೃತ್ಯಗಳನ್ನು ಎಸಗುತ್ತಿರುವ ಬಿಜೆಪಿಯನ್ನು ಅಧಿಕಾರಕ್ಕೆ ಬರದಂತೆ ತಡೆದು ನಮ್ಮ ಹಕ್ಕು ಬದುಕನ್ನು ಉಳಿಸಿಕೊಳ್ಳಬೇಕಾಗಿದೆ ಎಂ.ಪುಟ್ಟಮಾದು ಕರೆ ನೀಡಿದರು.
ಮಂಡ್ಯ: ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಲಿಕಾರರ ಬದುಕನ್ನು ಸಂಕಷ್ಟಕ್ಕೆ ದೂಡಿದ್ದು, ಕೃಷಿ ಕೂಲಿಕಾರರ ಭದ್ರತೆ, ಬದುಕಿಗಾಗಿ ಯಾವುದೇ ಯೋಜನೆ ರೂಪಿಸದ ಕಾರಣ ಬಿಜೆಪಿ-ಜೆಡಿಎಸ್ ತಿರಸ್ಕರಿಸುವಂತೆ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು ಕರೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೆಚ್ಚು ಕೆಲಸದ ದಿನ ಬೆಲೆ ಏರಿಕೆಗೆ ತಕ್ಕಂತೆ ಕೂಲಿ ಹೆಚ್ಚಿಸಲಿಲ್ಲ. ಬದಲಾಗಿ ಪ್ರತಿ ವರ್ಷವೂ ಬಜೆಟ್ ಕಡಿತ ಮಾಡಿ ಕೂಲಿಕಾರರು ಮಾಡಿದ ಕೆಲಸದ ಕೂಲಿಗೆ ಹಲವು ತಿಂಗಳು ವರ್ಷಗಳ ಕಾಲ ಕಾಯ ಬೇಕಾಯಿತು ಎಂದರು.
ಕೂಲಿ ದಿನಗಳನ್ನು 200 ದಿನಗಳಿಗೆ ಕೂಲಿಯನ್ನು 600 ರು. ಗಳಿಗೆ ಹೆಚ್ಚಿಸಲು ಮಾಡಿದ ಮನವಿ ಮತ್ತು ಹೋರಾಟಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದಾಯಿತು. ಇಂತಹ ವಂಚಕ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆಯಬೇಕು ಎಂದರು.
ಪ್ರಜಾಪ್ರಭುತ್ವವನ್ನೇ ನಾಶ ಮಾಡುವ ಸಂವಿಧಾನವನ್ನು ದುರ್ಬಲಗೊಳಿಸುವ ಕುಕೃತ್ಯಗಳನ್ನು ಎಸಗುತ್ತಿರುವ ಬಿಜೆಪಿಯನ್ನು ಅಧಿಕಾರಕ್ಕೆ ಬರದಂತೆ ತಡೆದು ನಮ್ಮ ಹಕ್ಕು ಬದುಕನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಈಗಾಗಲೇ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘದ ಕೇಂದ್ರ ಮತ್ತು ರಾಜ್ಯ ಸಮಿತಿಗಳು ರಾಷ್ಟ್ರ ಮತ್ತು ರಾಜ್ಯದಲ್ಲಿ ಇಂಡಿಯಾ ಅಭ್ಯರ್ಥಿಗಳನ್ನು ಗೆಲ್ಲಿಸಲು ಕೂಲಿಕಾರರ ಘಟಕಗಳು, ಮನೆಮನೆ ಪ್ರಚಾರ ಕೈಗೊಳ್ಳಲು ನಿರ್ದೇಶನ ನೀಡಿದ್ದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಕಾರ್ಯಕರ್ತರ ಸಭೆ ನಡೆಸಲಾಗುವುದು ಎಂದರು.
ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಲು ಕರೆ: ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರುರವರಿಗೆ ಮತ ನೀಡಬೇಕು. ಕೂಲಿಕಾರರ, ರೈತರ, ಕಾರ್ಮಿಕರ, ಬದುಕು, ದೇಶದ ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿರುವ ಬಿಜೆಪಿ, ಅವರ ಬೆಂಬಲಕ್ಕೆ ನಿಂತಿರುವ ಜೆಡಿಎಸ್ ಪಕ್ಷವನ್ನು ಕೃಷಿಕೂಲಿಕಾರರು ನಿರ್ಣಾಯಕವಾಗಿ ಸೋಲಿಸಬೇಕೆಂದು ರಾಜ್ಯ ಸಮಿತಿ ಕರೆ ನೀಡಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್, ಮುಖಂಡರಾದ ಶಿವಮಲ್ಲಯ್ಯ, ಅಮಾಸಯ್ಯ, ಆರ್.ರಾಜು, ಶುಭಾವತಿ, ರಾಮಯ್ಯ ಇದ್ದರು.