ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿ ತಿಂಗಳ ಬಳಿಕ ತಿರಸ್ಕರಿಸಿದ ಹೆಸರು ಕಾಳಿಗೆ ಹಣ ನೀಡುವುದಿಲ್ಲ ಎಂದು ಸರ್ಕಾರ ಹೇಳಿದ್ದು, ಈ ನಡುವೆ ಹಣಕ್ಕಾಗಿ ನಡೆಯುತ್ತಿರುವ ರೈತರ ಅಹೋರಾತ್ರಿ ಧರಣಿ 9ನೇ ದಿನಕ್ಕೆ ಕಾಲಿಟ್ಟಿದೆ.
ಹುಬ್ಬಳ್ಳಿ:
ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿ ತಿಂಗಳ ಬಳಿಕ ತಿರಸ್ಕರಿಸಿದ ಹೆಸರು ಕಾಳಿಗೆ ಹಣ ನೀಡುವುದಿಲ್ಲ ಎಂದು ಸರ್ಕಾರ ಹೇಳಿದ್ದು, ಈ ನಡುವೆ ಹಣಕ್ಕಾಗಿ ನಡೆಯುತ್ತಿರುವ ರೈತರ ಅಹೋರಾತ್ರಿ ಧರಣಿ 9ನೇ ದಿನಕ್ಕೆ ಕಾಲಿಟ್ಟಿದೆ. ಬುಧವಾರ ಸಹಕಾರ ಮಾರಾಟ ಮಹಾಮಂಡಳದ ಕಚೇರಿಗೆ ಸಿಬ್ಬಂದಿ ಪ್ರವೇಶದಂತೆ ರೈತರು ತಡೆವೊಡ್ಡಿ, ಪ್ರತಿಭಟಿಸಿದರು.ಬೆಂಬಲ ಬೆಲೆ ಯೋಜನೆಯಡಿ ತಾಲೂಕಿನ ಬ್ಯಾಹಟ್ಟಿ ಕೇಂದ್ರದಲ್ಲಿ 95 ರೈತರಿಂದ 1981 (₹ 87 ಲಕ್ಷ ) ಕ್ವಿಂಟಲ್ ಹೆಸರು ಕಾಳು ಖರೀದಿಸಲಾಗಿತ್ತು. ತಿಂಗಳ ಬಳಿಕ ಗುಣಮಟ್ಟ ಸರಿಯಿಲ್ಲ ನೀವು ತೆಗೆದುಕೊಂಡು ಹೋಗಿ ಎಂದು ರೈತರಿಗೆ ಕೇಂದ್ರದ ಅಧಿಕಾರಿಗಳು ತಿಳಿಸಿದ್ದರು. ರೈತರು ನಮ್ಮದೇನೂ ತಪ್ಪಿಲ್ಲ ಎಂದು ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿದ ಬಳಿಕ ಉಪವಿಭಾಗಾಧಿಕಾರಿಗಳ ನೇತೃತ್ವದ ಕಮಿಟಿ ರಚಿಸಿ ತನಿಖೆಗೆ ಆದೇಶಿಸಲಾಗಿತ್ತು. ತನಿಖೆಯಲ್ಲಿ ಸೊಸೈಟಿಯವರೇ ತಪ್ಪು ಎಸಗಿದ್ದು, ರೈತರಿಗೆ ಹಣ ಕೊಡಬೇಕು ಎಂದು ಕಮಿಟಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿತ್ತು. ಬಳಿಕ ಜಿಲ್ಲಾಡಳಿತ ಕಳುಹಿಸಿದ ವರದಿ ಪರಿಶೀಲಿಸಿದ ಸರ್ಕಾರ, ತಿರಸ್ಕರಿಸಿದ ಹೆಸರು ಕಾಳಿಗೆ ಹಣ ನೀಡಲು ಅವಕಾಶ ನೀಡಿಲ್ಲವೆಂದು ಸ್ಪಷ್ಟನೆ ನೀಡಿದೆ.
ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಆರ್. ಸ್ನೇಹಲ್, ಸರ್ಕಾರ ಹಣ ನೀಡುವುದಿಲ್ಲ ಎಂದು ಹೇಳಿದ್ದರಿಂದ ಜಿಲ್ಲಾಡಳಿತ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.ರೈತರ ಆಕ್ರೋಶ:
ಅತ್ತ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಎದುರು ರೈತರು ನಡೆಸುತ್ತಿರುವ ಹೋರಾಟ ತೀವ್ರಗೊಂಡಿದೆ. ಮಂಗಳವಾರದ ವರೆಗೂ ಶಾಂತರೀತಿಯಲ್ಲಿ ಕಚೇರಿ ಪ್ರಾಂಗಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು, ಬುಧವಾರ ಕಚೇರಿಯೊಳಗೆ ಅಧಿಕಾರಿ, ಸಿಬ್ಬಂದಿ ಪ್ರವೇಶಿಸದಂತೆ ಇಡೀ ದಿನ ತಡೆವೊಡ್ಡಿದ ಪರಿಣಾಮ ಕಚೇರಿ ಕೆಲಸ ಸ್ಥಗಿತವಾಗಿತ್ತು.ಈ ವರೆಗೂ ಯಾವ ಅಧಿಕಾರಿಯೂ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿಲ್ಲ. ಹೀಗಾಗಿ ಬುಧವಾರ ಕಚೇರಿ ಪ್ರವೇಶಕ್ಕೆ ಅಧಿಕಾರಿಗಳಿಗೆ ತಡೆಯೊಡ್ಡಿದ್ದೇವೆ. ಇದಕ್ಕೂ ಸ್ಪಂದಿಸದಿದ್ದಲ್ಲಿ ಉಗ್ರ ಹೋರಾಟ ಮಾಡುತ್ತೇವೆ. ನಮ್ಮನ್ನು ಬೇಕಾದರೆ ಬಂಧಿಸಲಿ ಎಂದು ಸವಾಲು ಹಾಕಿರುವ ರೈತರು, ಸರ್ಕಾರ ಕೂಡಲೇ ತಮಗೆ ನ್ಯಾಯಯುತವಾಗಿ ಬರಬೇಕಿರುವ ಹಣವನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ರೈತಸೇನಾದ ರಾಜ್ಯ ವಕ್ತಾರ ಗುರು ರಾಯನಗೌಡ್ರ, ಅಶೋಕ ಮತ್ತಿಹಳ್ಳಿ, ವಿರೂಪಾಕ್ಷಿ ಪಾಯನ್ನವರ, ಅಶೋಕ ನವಲೂರ, ಜಗದೀಶ ರೂಗಿ, ಸುಭಾಷ ಕೊಂಡಿಕೊಪ್ಪ, ಮಲ್ಲಪ್ಪ ಕಲ್ಯಾಣ, ಬಸವರಾಜ ಗಿಡ್ಡನ್ನವರ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.