ಸಾರಾಂಶ
ಕನ್ನಡಪ್ರಭ ವಾರ್ತೆ ಬಂಟ್ವಾಳ
ಅಂತರ್ಜಲ ವೃದ್ಧಿಗಾಗಿ ಶ್ರೀಕ್ಷೇತ್ರ ಧರ್ಮಸ್ಥಳ ವತಿಯಿಂದ ನೂರಾರು ಕೆರೆಗಳ ಪುನಶ್ಚೇತನದ ಕಾರ್ಯ ನಡೆಸಲಾಗಿದ್ದು, ಬಂಟ್ವಾಳದ ಪೊಳಲಿಯ ಕಾಳಿ ಕೆರೆಯ ಕೂಡ ಅಭಿವೃದ್ಧಿಗೆ ಸಹಕಾರ ನೀಡಲಾಗಿದ್ದು, ಇದರ ರಕ್ಷಣೆಯ ಜವಬ್ದಾರಿ ಗ್ರಾಮಸ್ಥರ ಮೇಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.ಪೊಳಲಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ ಬಂಟ್ವಾಳ, ಗ್ರಾಮ ಪಂಚಾಯತಿ ಕರಿಯಂಗಳ ಮತ್ತು ಕೆರೆ ಅಭಿವೃದ್ಧಿ ಸಮಿತಿ ಕರಿಯಂಗಳ ಸಹಯೋಗದೊಂದಿಗೆ ಪೊಳಲಿ ಕರಿಯಂಗಳ ಗ್ರಾಮದ ಕಾಳಿ ಸರೋವರ ಕೆರೆ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ, ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದರು.
ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ನೀರಿನ ಕೊರತೆ ಕಾಣುತ್ತಿದೆ,ದ.ಕ.ಜಿಲ್ಲೆಯಲ್ಲಿ ಅಂತಹ ಸಮಸ್ಯೆ ಕಂಡುಬರುವುದಿಲ್ಲ,ಮಳೆಯ ಪ್ರಮಾಣ ಸಾಕಷ್ಟಿದ್ದು ಜನರಿಗೆ ನೀರಿನ ಅಭಾವ ಕಂಡುಬಂದಿಲ್ಲವಾದರೂ ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.ಬಂಟ್ವಾಳ ಶಾಸಕ ರಾಜೇಶ್ ಉಳಿಪ್ಪಾಡಿಗುತ್ತು ಮಾತನಾಡಿ, ಕೆರೆಯ ಜಾಗ ಅತಿಕ್ರಮಣವಾಗಿದ್ದು, ಪ್ರಸ್ತುತ ಉಳಿದಿರುವ ಜಾಗ ಉಳಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು. ಪ್ರವಾಸೋದ್ಯಮದ ದೂರದೃಷ್ಟಿಯಲ್ಲಿ ಕಾರ್ಯಕ್ರಮ ಆಯೋಜಿಸುವ ಚಿಂತನೆ ಮಾಡುತ್ತಿದ್ದೇವೆ. ಕಾಳಿ ಕೆರೆ ಅಭಿವೃದ್ಧಿಯಿಂದ ಇಡೀ ಊರಿಗೆ ಅಭಿವೃದ್ಧಿಯಾಗಲಿದೆ ಎಂದರು.
ಕರಿಯಂಗಳ ಗ್ರಾ.ಪಂ.ಅಧ್ಯಕ್ಷೆ ರಾಧಾ ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ಕೆರೆ ಅಭಿವೃದ್ಧಿ ಕಾರ್ಯ ಶ್ಲಾಘನೀಯ ಎಂದರು.ಹೇಮಾವತಿ ಹೆಗ್ಗಡೆ ಮಾತನಾಡಿ, ಅಭಿವೃದ್ಧಿ ನೆಪದಲ್ಲಿ ಕೆರೆಗಳ ನಾಶವಾಗುತ್ತಿವೆ. ಇದು ಉತ್ತಮ ಬೆಳವಣಿಗೆ ಅಲ್ಲ. ಕಾಡು,ನೆಲ,ಜಲದ ರಕ್ಷಣೆಗೆ ಸಂಬಂಧಿಸಿದ ಕಾರ್ಯಕ್ರಮಗಳು ಅತೀ ಅಗತ್ಯವಿದೆ ಎಂದರು.
ಕ್ಷೇಮವನ ಟ್ರಸ್ಟ್ ನ ಶ್ರದ್ಧಾ ಅಮಿತ್ , ಜಿ.ಪಂ.ಮಾಜಿ ಸದಸ್ಯ ಪ್ರಕಾಶ್ ಶೆಟ್ಟಿ ತುಂಬೆ, ಪೊಳಲಿ ಶ್ರೀ ರಾಮಕೃಷ್ಣ ತಪೋವನದ ವಿವೇಕಾನಂದ ಚೈತನ್ಯಾನಂದ ಸ್ವಾಮೀಜಿ, ಎಂ.ಆರ್ .ಪಿ.ಎಲ್.ನ ಪ್ರಬಂಧಕ ಪ್ರದೀಪ್ ಕುಮಾರ್, ತಾ.ಪಂ.ಇ.ಒ.ಸಚಿನ್ ಕುಮಾರ್, ಎಂಜಿನಿಯರ್ ಗಳಾದ ಸುಶಾಂತ್, ತಾರಾನಾಥ ಕೆ. ಸಾಲಿಯಾನ್, ಬೂಡ ಅಧ್ಯಕ್ಷ ಬೇಬಿಕುಂದರ್, ಪೊಳಲಿ ಸಿ.ಎ.ಬ್ಯಾಂಕ್ ಅಧ್ಯಕ್ಷ ವೆಂಕಟೇಶ ನಾವಡ, ಗ್ರಾ.ಪಂ.ಉಪಾಧ್ಯಕ್ಷ ರಾಜು ಕೋಟ್ಯಾನ್, ಪಿಡಿಒ ವಸಂತಿ,ಗುತ್ತಿಗೆದಾರ ಅಬುಬಕ್ಕರ್, ಜನಜಾಗೃತಿ ಸಮಿತಿ ಅಧ್ಯಕ್ಷ ರೊನಾಲ್ಡ್ ಡಿಸೋಜ ಮುಖ್ಯ ಅತಿಥಿಗಳಾಗಿದ್ದರು.ಯೋಜನೆಯ ಮುಖ್ಯ ಕಾರ್ಯನಿರ್ವಾವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ಪ್ರಸ್ತಾವಿಕವಾಗಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ ಸ್ವಾಗತಿಸಿದರು. ಯೋಜನಾಧಿಕಾರಿ ಜಯಾನಂದ ವಂದಿಸಿದರು.ಗಣೇಶ್ ಆಚಾರ್ಯ ನಿರೂಪಿಸಿದರು.