ಕನ್ನಡಪ್ರಭ ವಾರ್ತೆ ಸಿಂದಗಿಜೇವರ್ಗಿ ಸೇರಿ ವಿಜಯಪುರ ಜಿಲ್ಲೆಯ ಹಲವು ತಾಲೂಕುಗಳಿಗೆ 2 ಟಿಎಂಸಿ ಬದಲು 3 ಟಿಎಂಸಿ ನೀರನ್ನು ನಾರಾಯಣಪೂರ ಜಲಾಶಯಕ್ಕೆ ಬಿಡಬೇಕು ಎಂದು ಜೇವರ್ಗಿ ಶಾಸಕ ಅಜಯಸಿಂಗ ಹಾಗೂ ಸಿಂದಗಿ ಶಾಸಕ ಅಶೋಕ ಮನಗೂಳಿ ಅವರು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಅವರಿಗೆ ಕರೆ ಮಾಡಿ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಜೇವರ್ಗಿ ಸೇರಿ ವಿಜಯಪುರ ಜಿಲ್ಲೆಯ ಹಲವು ತಾಲೂಕುಗಳಿಗೆ 2 ಟಿಎಂಸಿ ಬದಲು 3 ಟಿಎಂಸಿ ನೀರನ್ನು ನಾರಾಯಣಪೂರ ಜಲಾಶಯಕ್ಕೆ ಬಿಡಬೇಕು ಎಂದು ಜೇವರ್ಗಿ ಶಾಸಕ ಅಜಯಸಿಂಗ ಹಾಗೂ ಸಿಂದಗಿ ಶಾಸಕ ಅಶೋಕ ಮನಗೂಳಿ ಅವರು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಅವರಿಗೆ ಕರೆ ಮಾಡಿ ಮನವಿ ಮಾಡಿದರು.

ತಾಲೂಕಿನ ರಾಂಪೂರ ಗ್ರಾಮದ ಕೃಷ್ಣಾಭಾಗ್ಯ ಜಲನಿಗಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾರಾಯಣಪೂರ ಜಲಾಶಯದಿಂದ ಇಂಡಿ ಶಾಖಾ ಕಾಲುವೆ ಹಾಗೂ ಇಂಡಿ ಏತನೀರಾವರಿ ಕಾಲುವೆಗಳ ಮುಖಾಂತರ ಹರಿದು ಬರುತ್ತಿರುವ 2 ಟಿಎಂಸಿ ನೀರು ಕೇವಲ ವಿಜಯಪುರ ಜಿಲ್ಲೆಗೆ ಮಾತ್ರ ಸಂಬಂಧಿಸಿದೆ. ಆದರೆ ಜೇವರ್ಗಿ ತಾಲೂಕಿನ ಅಲ್ಲಾಪೂರ, ಅರಳಗುಂಡಗಿ, ಬಳುಂಡಗಿ ಗ್ರಾಮದ ರೈತರು ನೀರಿಲ್ಲದೆ ಒದ್ದಾಡುವ ಸ್ಥಿತಿ ನಿರ್ಮಾಣವಾಗಿದೆ ಇದಕ್ಕೆ ಪೂರಕವಾಗಿ ಒಟ್ಟು 3 ಟಿಎಂಸಿ ನೀರು ಹರಿ ಬಿಡುವಂತೆ ಜಲಸಂಪನ್ಮೂಲ ಸಚಿವರಲ್ಲಿ ಮನವಿ ಮಾಡಿದ್ದೇವೆ ಎಂದರು.

ಈಗಾಗಲೇ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರ ಕಚೇರಿ ವಿಜಯಪುರ ಜಿಲ್ಲೆಯ ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಯ ಜಲಸಂಗ್ರಹಗಾರಗಳಲ್ಲಿ ನೀರಿನ ಅಭಾವ ಇರುವುದರಿಂದ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ ನಾರಾಯಣಪೂರ ಜಲಾಶಯದಿಂದ ಇಂಡಿ ಶಾಖಾ ಕಾಲುವೆ ಹಾಗೂ ಇಂಡಿ ಏತನೀರಾವರಿ ಕಾಲುವೆಗಳ ಮುಖಾಂತರ 2 ಟಿಎಂಸಿ ನೀರು ಹರಿ ಬಿಡಲು ಆದೇಶಿಸಿದೆ.

ಇದು ಕೇವಲ ಮುಖ್ಯ ಕಾಲುವೆಗಳ ಮೂಲಕವೆ ನೀರು ಸಾಗಬೇಕು. ಆದರೆ, ವಿಭಾಗಿಯ ಕಾಲುವೆಗಳನ್ನು ನಂಬಿ ಬದುಕುತ್ತಿರುವ ರೈತರ ಸ್ಥಿತಿ ಎನು ಎಂದು ಪ್ರಶ್ನಿಸಿದ ಅವರು, ಜೇವರ್ಗಿ ತಾಲೂಕಿನ ಅಲ್ಲಾಪೂರ ಮತ್ತು ಬಳುಂಡಗಿ ಹಳ್ಳಗಳಿಗೆ ನೀರು ಹರಿಸಿದಲ್ಲಿ ಆ ಭಾಗದ ಜನ-ಜಾನುವಾರಗಳಿಗೆ ಇದು ಅನುಕೂಲವಾಗಲಿದೆ. ಕೂಡಲೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದರು.

ಶಾಸಕ ಅಶೋಕ ಮನಗೂಳಿ ಮಾತನಾಡಿ, ನಾರಾಯಣಪೂರ ಜಲಾಶಯದಿಂದ ಹರಿದು ಬರುವ 2 ಟಿಎಂಸಿ ನೀರಿನ ಬದಲಿಗೆ 3 ಟಿಎಂಸಿ ನೀರು ಹರಿದು ಬಂದರೆ ಸಿಂದಗಿ, ಇಂಡಿ, ದೇವರಹಿಪ್ಪರಗಿ, ನಾಗಠಾಣ, ಚಡಚಣ, ಜೇವರ್ಗಿ, ಅಫಜಲಪುರ ತಾಲೂಕುಗಳಿಗೆ ಕುಡಿಯುವ ನೀರಿನ ಸಮಸ್ಯೆ ಬರುವುದಿಲ್ಲ. ನಮಗೆ 3 ಟಿಎಂಸಿ ನೀರು ಬೇಕು ಎಂದು ಅನೇಕ ಬಾರಿ ಸಭೆಯಲ್ಲಿ ಜಿಲ್ಲೆಯ ಅನೇಕ ಶಾಸಕರು ಪತ್ರ ನೀಡಿದ್ದೇವೆ. ಆದರೂ, ಈ ಸಮಸ್ಯೆ ಸಮಸ್ಯೆಯಾಗಿಯೆ ಉಳಿದಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ದೂರವಾಣಿ ಮೂಲಕ ಮಾತನಾಡಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದೇವೆ. ಕೂಡಲೇ 3 ಟಿಎಂಸಿ ನೀರು ಜಲಾಶಯದಿಂದ ಹರಿದು ಬರುವ ವಿಶ್ವಾಸವಿದೆ. ರೈತರು ಆತಂಕ ಒಳಪಡುವ ಅಗತ್ಯವಿಲ್ಲ ಎಂದರು.

ಗೋಷ್ಠಿಯಲ್ಲಿ ರಾಂಪೂರ ಕೃಷ್ಣಾ ಭಾಗ್ಯ ಜಲನಿಗಮದ ಮನೋಜಕುಮಾರ, ಉಜ್ವಲ ಸೋನಾವನೆ, ಕಾಂಗ್ರೆಸ್ ಮುಖಂಡ ಕುಮಾರ ದೇಸಾಯಿ ಹಾಗೂ ರೈತರು ಇದ್ದರು.

ಜೇವರ್ಗಿ ತಾಲೂಕಿನಲ್ಲಿಯೂ ಮುಖ್ಯ ಕಾಲುವೆಗಳಿವೆ. ಆದರೆ, ಬಳುಂಡಗಿ, ಅಲ್ಲಾಪೂರ ಹಾಗೂ ಅರಳಗುಂಡಗಿ ಸೇರಿ ಅನೇಕ ಹಳ್ಳಿಗಳ ರೈತರಿಗೆ ಇದರ ಪ್ರಯೋಜನವಾಗುತ್ತಿಲ್ಲ. ಅಲ್ಲಾಪೂರ ಮತ್ತು ಬಳುಂಡಗಿ ಹಳ್ಳಗಳಿಗೆ ನೀರು ಹರಿದು ಬಂದಲ್ಲಿ ಜನ-ಜಾನುವಾರಗಳಿಗೆ ಅನುಕೂಲವಾಗುತ್ತದೆ. 3 ಟಿಎಂಸಿ ನೀರು ಅವಶ್ಯವಿದೆ.

-ರಾಜಶೇಖರ ಚೂರಿ, ಬಳುಂಡಗಿ ರೈತ.