ರಾಜಕೀಯ ಮಾಡದೆ ಅಭಿವೃದ್ಧಿ ಅನುದಾನ ಬಿಡುಗಡೆ ಮಾಡಿ: ಶಾಸಕ ವೇದವ್ಯಾಸ್‌ ಕಾಮತ್‌

| Published : Nov 04 2023, 12:30 AM IST

ರಾಜಕೀಯ ಮಾಡದೆ ಅಭಿವೃದ್ಧಿ ಅನುದಾನ ಬಿಡುಗಡೆ ಮಾಡಿ: ಶಾಸಕ ವೇದವ್ಯಾಸ್‌ ಕಾಮತ್‌
Share this Article
  • FB
  • TW
  • Linkdin
  • Email

ಸಾರಾಂಶ

ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡದೆ ಕೂಡಲೇ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡದೆ ಕೂಡಲೇ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಮಂಗಳೂರಿನ ಅಟಲ್‌ ಸೇವಾ ಕೇಂದ್ರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದರೂ ಕಾಮಗಾರಿಗೆ ಅಗತ್ಯವಿರುವ ಅನುದಾನಕ್ಕೆ ಸರ್ಕಾರದಿಂದ ಸ್ಪಂದನೆ ಸಿಗುತ್ತಿಲ್ಲ. ಹೊಸ ಕಾಮಗಾರಿಗೆ ಅನುದಾನ ನೀಡುತ್ತಿಲ್ಲ, ಹಿಂದಿನ ಸರ್ಕಾರದ ಅವಧಿಯಲ್ಲಿ ಅನುಮೋದನೆಗೊಂಡ ಕಾಮಗಾರಿಗೂ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ದೂರಿದರು. ಬಿಜೆಪಿ ಅವಧಿಯಲ್ಲಿ ನಡೆದ ಕಾಮಗಾರಿ ಹಾಗೂ ಅನುದಾನದ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಆಗ್ರಹಿಸುವ ವಿಪಕ್ಷಗಳು, ಈಗ ಅನುದಾನ ಬಿಡುಗಡೆಯಾಗದೇ ಇರುವ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? ಕರಾವಳಿಯಲ್ಲಿ ಬಿಜೆಪಿ ಶಾಸಕರಿದ್ದಾರೆ ಎಂಬ ಕಾರಣಕ್ಕೆ ಸರ್ಕಾರ ತಾರತಮ್ಯ ಎಸಗುತ್ತಿದೆಯೇ ಎಂದು ಅವರು ಪ್ರಶ್ನಿಸಿದರು. ಸರ್ಕಾರ ಅನುದಾನ ತಡೆಹಿಡಿದ ಕಾರಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಕುಡ್ಸೆಂಪ್‌ ಮೂಲಕ 200 ಕೋಟಿ ರು.ಗೂ ಅಧಿಕ ಮಂಜೂರಾದರೂ ಒಳಚರಂಡಿ ಕಾಮಗಾರಿ ಅರ್ಧದಲ್ಲೇ ಸ್ಥಗಿತಗೊಂಡಿದೆ. ಕುಡಿಯುವ ನೀರಿನ 792 ಕೋಟಿ ರು.ಗಳ ಜಲಸಿರಿ ಯೋಜನೆ ಕಾಮಗಾರಿಯೂ ಸ್ಥಗಿತಗೊಂಡಿದೆ. ಹೀಗಾದರೆ ಕ್ಷೇತ್ರದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ವಿದ್ಯಾರ್ಥಿ ವೇತನವೂ ಇಲ್ಲ: ಎಸ್‌ಸಿ- ಎಸ್‌ಟಿ ಹಾಗೂ ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳು ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದರೂ ವಿದ್ಯಾರ್ಥಿ ವೇತನ ಬಿಡುಗಡೆಯಾಗಿಲ್ಲ. ಸಂಬಂಧಿತ ಇಲಾಖೆಗಳು ಭರವಸೆಯಲ್ಲೇ ಕಾಲ ಕಳೆಯುತ್ತಿವೆ. ಮಂಗಳೂರಿನ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಬಯೋಮೆಟ್ರಿಕ್‌ ವಂಚನೆಗೆ ಒಳಗಾದ ಸಂತ್ರಸ್ತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಮಂಗಳೂರು ಪಾಲಿಕೆಯಲ್ಲಿ ಇ-ಖಾತಾಗೆ ಸರ್ವರ್‌ ಸಮಸ್ಯೆ ಕಾಡುತ್ತಿದ್ದು, ಇವರೆಡು ಸಮಸ್ಯೆ ನಿವಾರಿಸುವಂತೆ ಸಂಬಂಧಿತ ಸಚಿವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ, ಹಾಗಾಗಿ ಮತ್ತೊಮ್ಮೆ ಸಚಿವರಿಗೆ ಮನವಿ ಸಲ್ಲಿಸುವುದಾಗಿ ಶಾಸಕ ವೇದವ್ಯಾಸ್‌ ಕಾಮತ್‌ ಹೇಳಿದರು. ಜಿಲ್ಲಾ ವೆನ್ಲಾಕ್‌ ಆಸ್ಪತ್ರೆಯಲ್ಲಿ ಕೆಟ್ಟು ಹೋಗಿರುವ ಡಯಾಲಿಸಿಸ್‌ ಯಂತ್ರಗಳ ದುರಸ್ತಿಯಾಗಿಲ್ಲ, ಹೊಸ ಯಂತ್ರ ಖರೀದಿಸುವ ಜಿಲ್ಲಾ ಉಸ್ತುವಾರಿ ಸಚಿವರ ಭರವಸೆ ಈಡೇರಬೇಕಷ್ಟೆ. ಪ್ರಸ್ತುತ ಡಯಾಲಿಸಿಸ್‌ ರೋಗಿಗಳಿಗೆ ತೊಂದರೆಯಾಗುತ್ತಿದೆ ಎಂದರು. ಮುಖಂಡರಾದ ರೂಪಾ ಬಂಗೇರಾ, ವಿಜಯ ಕುಮಾರ್‌ ಶೆಟ್ಟಿ, ಭಾಸ್ಕರಚಂದ್ರ, ಅಜಯ್‌ ಕುಮಾರ್‌, ರಮೇಶ್‌, ಕಿರಣ್‌ ಮತ್ತಿತರರಿದ್ದರು. ಮರಳು ಸಿಗದೆ ನಿರ್ಮಾಣ ಸ್ಥಗಿತ ಭೀತಿ ಪ್ರಸ್ತುತ ಮರಳು ಸಿಗದೆ ಕಟ್ಟಡ ನಿರ್ಮಾಣ ಚಟುವಟಿಕೆ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ಈ ಬಗ್ಗೆ ಗುತ್ತಿಗೆದಾರರು ಹಲವು ಬಾರಿ ಗಮನಕ್ಕೆ ತಂದಿದ್ದು, ಜಿಲ್ಲಾಡಳಿತ ಹಾಗೂ ಸರ್ಕಾರ ಈ ತೊಂದರೆ ಬಗೆಹರಿಸುವ ಬಗ್ಗೆ ಸರಿಯಾಗಿ ಮನಸ್ಸು ಮಾಡುತ್ತಿಲ್ಲ ಎಂದು ಶಾಸಕ ವೇದವ್ಯಾಸ್ ಕಾಮತ್‌ ಆರೋಪಿಸಿದರು.