ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಏಕಕಾಲಕ್ಕೆ ಗ್ರಾಮ ಪಂಚಾಯ್ತಿ ಹಾಗೂ ಜಾತಿ ಸಮೀಕ್ಷೆ ಕಾರ್ಯವನ್ನು ನಿರ್ವಹಿಸಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಜಾತಿ ಸಮೀಕ್ಷೆ ಕಾರ್ಯದಿಂದ ನಮ್ಮನ್ನು ಬಿಡುಗಡೆಗೊಳಿಸುವಂತೆ ಮಂಡ್ಯ ತಾಲೂಕು ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗಳು, ಪ್ರಥಮ, ದ್ವಿತೀಯ ದರ್ಜೆ ಸಹಾಯಕರು ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿದರು.ಪಂಚಾಯ್ತಿಯಲ್ಲಿ ಪ್ರತಿದಿನದ ಹಾಜರಾತಿ ಕಡ್ಡಾಯಗೊಳಿಸಲಾಗಿದೆ. ಗ್ರಾಮ ಪಂಚಾಯ್ತಿ ವ್ಯಾಪ್ತಿಯೊಳಗೆ ಜಾತಿ ಸಮೀಕ್ಷೆ ನಡೆಸುವಂತಿದ್ದರೆ ನಮಗೆ ಪಂಚಾಯ್ತಿ ಕೆಲಸದ ಜೊತೆಗೆ ಜಾತಿ ಸಮೀಕ್ಷೆ ನಡೆಸುವುದಕ್ಕೂ ಅನುಕೂಲವಾಗುತ್ತಿತ್ತು. ಬಸರಾಳು, ದುದ್ದ ಹೀಗೆ ಬೇರೆ ಬೇರೆ ಗ್ರಾಮ ಪಂಚಾಯ್ತಿಯ ಕಾರ್ಯದರ್ಶಿಗಳನ್ನು ನಗರ ಸೇರಿದಂತೆ ದೂರದ ಊರುಗಳಿಗೆ ನೇಮಕ ಮಾಡಲಾಗಿದೆ. ಜಾತಿ ಸಮೀಕ್ಷೆ ಕಾರ್ಯ ನಡೆಸುವುದಕ್ಕೆ ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ತಹಸೀಲ್ದಾರ್ ಅವರು ಯಾವುದೇ ಆದೇಶ ಹೊರಡಿಸಿಲ್ಲ ಎಂದು ಕಾರ್ಯದರ್ಶಿಗಳು ತಿಳಿಸಿದರು.
ಪಂಚಾಯ್ತಿಯಿಂದ ಸಾರ್ವಜನಿಕರಿಗೆ ನೀಡಲಾಗುವ ಇ-ಸ್ವತ್ತು, ಮರಣ ಪ್ರಮಾಣಪತ್ರ, ಮಾಹಿತಿ ಹಕ್ಕಿಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡಬೇಕಿರುವುದು ಪಂಚಾಯ್ತಿ ಕಾರ್ಯದರ್ಶಿಗಳ ಜವಾಬ್ದಾರಿ. ಜಾತಿ ಸಮೀಕ್ಷೆಯನ್ನೂ ನಡೆಸುತ್ತಾ ಪಂಚಾಯ್ತಿ ಕೆಲಸಗಳನ್ನು ನಿಭಾಯಿಸುವುದಕ್ಕೆ ದುಸ್ತರವಾಗುತ್ತಿದೆ. ಜಾತಿ ಸಮೀಕ್ಷೆ ಮುಗಿಯುವವರೆಗೆ ಈ ಜವಾಬ್ದಾರಿಗಳಿಂದ ವಿನಾಯಿತಿ ಕೊಡಿ. ಪ್ರತಿದಿನ ಹಾಜರಾತಿ ಹಾಕಲು ಬೆಳಗ್ಗೆ-ಸಂಜೆ ಪಂಚಾಯ್ತಿಗೆ ಬರಬೇಕು. ಹಾಜರಾತಿ ಹಾಕಿ ಮತ್ತೆ ಜಾತಿ ಸಮೀಕ್ಷೆಗೆ ತೆರಳುವುದು ಕಷ್ಟಕರವಾಗಿದೆ ಎಂದು ತಮ್ಮ ಅಳಲನ್ನು ವ್ಯಕ್ತಪಡಿಸಿದರು.ಜಾತಿ ಸಮೀಕ್ಷೆಗೆ ನೀಡಲಾಗಿರುವ ಆ್ಯಪ್ ಬೆಳಗ್ಗೆ ೯ ರಿಂದ ಸಂಜೆ ೬ ಗಂಟೆಯವರೆಗೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಆನಂತರ ಸ್ಥಗಿತಗೊಳ್ಳುತ್ತದೆ. ನಗರ ವ್ಯಾಪ್ತಿಯೊಳಗೆ ಜನರೆಲ್ಲರೂ ನಿತ್ಯದ ಕೆಲಸಗಳಿಗೆ ಬೆಳಗ್ಗೆ ೯ ಗಂಟೆಯಷ್ಟರಲ್ಲೇ ಹೊರಟುಹೋಗಿರುತ್ತಾರೆ. ಸಂಜೆ ೬ ಗಂಟೆಯ ಸಮಯಕ್ಕೆ ಅವರು ಮನೆಗೆ ಬರೋದು. ಮನೆಗೆ ಜನರು ಬರುವ ಹೊತ್ತಿಗೆ ಆ್ಯಪ್ ಕಾರ್ಯ ಸ್ಥಗಿತಗೊಂಡಿರುತ್ತದೆ ಎಂದು ಹಲವರು ಬೇಸರದಿಂದ ನುಡಿದರು.
ನಮಗೆ ಜಾತಿ ಸಮೀಕ್ಷೆ ನೀಡಿರುವವರ ಹೆಸರನ್ನು ಪರಿಶೀಲಿಸಿದರೆ ಒಂದೊಂದು ದಿಕ್ಕಿಗೆ ಒಬ್ಬೊಬ್ಬರಿದ್ದಾರೆ. ಅಲ್ಲಿಗೆ ಹೋಗಿ ನಾವು ವಿಚಾರಣೆ ಮಾಡಬೇಕಿದೆ. ಇವೆಲ್ಲವೂ ಸಾಕಷ್ಟು ತೊಂದರೆಯಾಗುತ್ತಿರುವುದರಿಂದ ಕರ್ತವ್ಯ ನಿರ್ವಹಿಸುವುದಕ್ಕೆ ತುಂಬಾ ತೊಂದರೆಯಾಗುತ್ತಿದೆ. ಅದಕ್ಕಾಗಿ ನಮ್ಮನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಕೋರಿದರು.ಇಲ್ಲವೇ ಆಯಾಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಂಟರಿಂದ ಹತ್ತು ಕಿ.ಮೀ. ವ್ಯಾಪ್ತಿಯಲ್ಲೇ ಜಾತಿ ಸಮೀಕ್ಷೆ ನಡೆಸುವಂತೆ ಕಾರ್ಯನಿಯೋಜಿಸಿದರೆ ಅದನ್ನು ಮಾಡಲು ಸಿದ್ಧರಿದ್ದೇವೆ. ಇ-ಸ್ವತ್ತು, ಮರಣ ಪ್ರಮಾಣಪತ್ರ, ಮಾಹಿತಿ ಹಕ್ಕು ಪ್ರಕರಣಗಳ ವಿಲೇವಾರಿಗೂ ಅನುಕೂಲವಾಗಲಿದೆ. ಇಲ್ಲದಿದ್ದರೆ ಜಾತಿ ಸಮೀಕ್ಷೆಯೊಂದಿಗೆ ಆ ಕಾರ್ಯಗಳನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ ಎಂದು ನೇರವಾಗಿಯೇ ತಿಳಿಸಿದರು.
ಜಾತಿ ಸಮೀಕ್ಷೆ ಕಾರ್ಯದಿಂದಾಗಿ ಪಂಚಾಯ್ತಿ ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸಲಾಗುತ್ತಿಲ್ಲ. ಜನರಿಗೆ ಬೇಕಾದ ದಾಖಲೆಗಳನ್ನು ನಿಗದಿತ ಸಮಯಕ್ಕೆ ಒದಗಿಸಲು ಸಾಧ್ಯವಾಗದೆ ಅವರ ಆಕ್ರೋಶಕ್ಕೆ ಒಳಗಾಗುತ್ತಿದ್ದೇವೆ. ಪೂರ್ಣ ಪ್ರಮಾಣದಲ್ಲಿ ನಮ್ಮನ್ನು ಜಾತಿ ಸಮೀಕ್ಷೆ ಕಾರ್ಯಕ್ಕೆ ನಿಯೋಜಿಸಿ, ಇಲ್ಲವೇ ಜಾತಿ ಸಮೀಕ್ಷೆ ಕರ್ತವ್ಯದಿಂದ ಬಿಡುಗಡೆಗೊಳಿಸಿ ಪಂಚಾಯ್ತಿ ಕೆಲಸಗಳಿಗಷ್ಟೇ ಸೀಮಿತಗೊಳಿಸಿ. ಎರಡನ್ನೂ ನಿಭಾಯಿಸುವುದು ಕಷ್ಟಕರವಾಗಿದೆ ಎಂದು ಸ್ಪಷ್ಟವಾಗಿ ಹೇಳಿದರು.ಗ್ರಾಪಂ ಕಾರ್ಯದರ್ಶಿಗಳು, ಸಿಬ್ಬಂದಿ ಸದಾಶಿವಮೂರ್ತಿ, ಬಿ.ಎಸ್.ರತ್ನಮ್ಮ, ಪವಿತ್ರಾ, ಎಸ್.ಚಂದ್ರಶೇಖರ್, ಎಂ.ಶ್ರೀನಿವಾಸ, ಎಸ್.ಮರಿಲಿಂಗಯ್ಯ, ಜಿ.ಸಿ.ಶ್ರುತಿ, ಎಚ್.ಡಿ.ಆಕಾಶ್, ಜವರೇಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.