ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಪುಸ್ತಕ ಪ್ರಕಾಶನದಲ್ಲಿ ತನ್ನದೇ ಆದಂತಹ ಛಾಪು ಮೂಡಸಿರುವ ಇಲ್ಲಿನ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ ಸಂಸ್ಥೆ ತನ್ನ 47ನೇ ವಾರ್ಷಿಕೋತ್ಸವ ನಿಮಿತ್ತ ಸಂಶೋಧನೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ ಹಾಗೂ ಪಠ್ಯ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಒಟ್ಟು 121 ಪುಸ್ತಕಗಳ ಬಿಡಿಗಡೆಗೆ ಸಿದ್ಧವಾಗಿದೆ.ಸಿದ್ದಲಿಂಗೇಶ್ವರ ಬುಕ್ ಡೀಪೋ- ಪ್ರಕಾಶನದ ಜೊತೆಗೆ ಬಸವ ಪ್ರಕಾಶನ ಹಾಗೂ ಸಿದ್ಧಲಿಂಗೇಶ್ವರ ಪ್ರಕಾಶನ ಸಹೋದರ ಸಂಸ್ಥೆಗಳಿಂದ 121 ಕೃತಿಗಳು ಅಚ್ಚಾಗಿದ್ದು ಮಾ.19ರಂದು ಇವೆಲ್ಲ ಕೃತಿಗಳ ಲೋಕಾರ್ಪಣೆ ನಡೆಯಲಿದೆ ಎಂದು ಸಂಸ್ಥೆಯ ಮುಖ್ಯಸ್ಥ ಬಸವರಾಜ ಕೊನೆಕ್, ಸಿದ್ದಲಿಂಗ ಕೊನೆಕ್ ಹಾಗೂ ಶರಣು ಕೋನೆಕ್ ಹೇಳಿದ್ದಾರೆ.
ಕಲ್ಯಾಣ ಕರ್ನಾಟಕ ಸಾಹಿತ್ಯ ವಾಚಿಕೆ ಮಾಲಿಕೆ, ಸಾಹಿತ್ಯ ಮಾಲಿಕೆ, ಜನಪ್ರಿಯ ಮಾಲಿಕೆ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಪಿ.) ಪುಸ್ತಕಗಳು, ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮ ವರ್ಷದಲ್ಲಿರೋದರಿಂದ ಆ ಸವಿನೆನಪಿಗಾಗಿ ವಿಶೇಷವಾಗಿ 23 ಸಂಪುಟಗಳ ವಾಚಿಕೆಗಳು 121 ಕೃತಿಗಳಲ್ಲಿ ಸೇರಿವೆ.ವಾಚಿಕೆಗಳೆಂದರೆ ಕಲ್ಯಾಣ ಕರ್ನಾಟಕದ ಶ್ರೇಷ್ಠ ಹಾಗೂ ಸೃಜನಶೀಲ ಸಾಹಿತ್ಯವನ್ನು ಸೃಷ್ಟಿಸಿದ ಸಾಹಿತಿಗಳ ಮೌಲಿಕ ಹಾಗೂ ಅರ್ಥಪೂರ್ಣವಾದ ಕೆನೆಪದರು ಭಾಗವನ್ನು ಸುಮಾರು 200 ಪುಟಗಳ ಅಂದಾಜಿನಲ್ಲಿ ಸರಾಸರಿಯಾಗಿಟ್ಟುಕೊಂಡು ಪ್ರಕಟಿಸಲಾಗಿದೆ. ಇದು ಅತ್ಯಂತ ವಿನೂತನವಾದ ಹಾಗೂ ಅರ್ಥಪೂರ್ಣವಾದ ಕಾರ್ಯವಾಗಿದೆ.
ಮಾ.17ರಂದು ಸಂಜೆ 5.30ಕ್ಕೆ ಸೂಪರ್ ಮಾರ್ಕೆಟ್‌ನ ಚೇಂಬರ್ ಆಫ್ ಕಾಮರ್ಸ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ, ಮೈಸೂರಿನ ಸುತ್ತೂರು ವೀರ ಸಿಂಹಾಸನ ಮಠ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಕೃತಿಗಳನ್ನ ಬಿಡುಗಡೆ ಮಾಡಲಿದ್ದಾರೆ.ಶರಣಬಸವೇಶ್ವರ ಸಂಸ್ಥಾನದ ಮಾತೋಶ್ರೀ ಡಾ. ದಾಕ್ಷಾಯಿಣಿ ಅಪ್ಪ ಉಪಸ್ಥಿತಿಯಲ್ಲಿ ನಡೆಯುವ ಸಮರಂಭದಲ್ಲಿ, ಕೃತಿಗಳ ಕುರಿತು ಖ್ಯಾತ ಸಾಹಿತಿಗಳಾದ ಬಾಳಾಸಾಹೆಬ ಲೋಕಾಪೂರ ಮಾತನಾಡುತ್ತಾರೆ. ಮಾಜಿ ಸಂಸದ ಡಾ. ಬಸವರಾಜ ಪಾಟೀಲ ಸೇಡಂ, ಅಕ್ಕಮಹಾದೇವಿ ವಿವಿ ಕುಲಪತಿ ಡಾ. ಬಿ.ಕೆ. ತುಳಸಿಮಾಲಾ, ಗುವಿವಿ ಕುಲಪತಿ ಡಾ. ದಯಾನಂದ ಅಗಸರ್, ಸಂಸ್ಥೆಯ ಸಲಹಾ ಸಮಿತಿ ಹಿರಿಯ ಸದಸ್ಯರಾದ ಡಾ. ಗವಿಸಿದ್ದಪ್ಪ ಪಾಟೀಲ ಪಾಲ್ಗೊಳ್ಳುತ್ತಿದ್ದಾರೆ. ಸಂಸ್ಥೆ ಈ 121 ಕೃತಿಗಳು ಸೇರಿದಂತೆ 3500 ಶಿರನಾಮೆಯ ಕೃತಿಗಳನ್ನು ಅಚ್ಚು ಹಾಕಿ ದಾಖಲೆ ಮಾಡಿದೆ ಎಂದು ಬಸವರಾಜ ಕೋನೆಕ್ ಹೇಳಿದರು.
ಸಲಹಾ ಸಮೀತಿಯ ಪರವಾಗಿ ಹಿರಿಯ ಸಾಹಿತಿ ಡಾ. ಸ್ವಾಮೀರಾವ ಕುಲಕರ್ಣಿ, ಚಿಸಿ ನಿಂಗಣ್ಣ, ಡಾ. ಗವಿಸಿದ್ದಪ್ಪ ಪಾಟೀಲ, ಶಿವರಾಜ ಪಾಟೀಲ್, ವಡ್ಡನಕೇರಿ ಶರಣಬಸಪ್ಪ ಇದ್ದರು.ಯೋಧರ ಮಕ್ಕಳಿಗೆ ರಿಯಾಯ್ತಿ: ಕಲಬುರಗಿ ಸರಸ್ವತಿ ಗೋದಾಮದಲ್ಲಿರುವ ಸಿದ್ಧಲಿಂಗೇಶ್ವರ ಬುಕ್ ಮಾಲ್, ಪುಸ್ತಕ ಮಳಿಗೆಗೆ ಬಂದು ಭಾರತೀಯ ಸೇನೆಯಲ್ಲಿರುವ ಯೋಧರು, ನಿವೃತ್ತ ಯೋದರ ಮಕ್ಕಳು (ಗುರುತಿನ ಚಿಟ್ಟಿ ತೋರಿಸಿ) ಪುಸ್ತಕಗಳನ್ನು ಖರೀದಿಸಿದಲ್ಲಿ ಅಂತಹ ಖರೀದಿಗಳ ಮೇಲೆ ಸಾಮಾನ್ಯ ರಿಯಾಯ್ತಿಗಿಂತ ಅತೀ ಹೆಚ್ಚಿನ ರಿಯಾಯ್ತಿ ಸಂಸ್ಥೆ ನೀಡಲು ಮುಂದಾಗಿದೆ ಎಂದು ಸಿದ್ಧಲಿಂಗೇಶ್ವರ ಪ್ರಕಾಶನದ ಸಿದ್ಧಲಿಂಗ ಕೊನೇಕ ಹೇಳಿದರು. ಜೇವರ್ಗಿ ಸರಕಾರಿ ಪದವಿ ಕಾಲೇಜಿನ ಲೈಬ್ರರಿಯನ್ ವಿನೋದ ಕುಮಾರ್ ತಮ್ಮ ಆಸಕ್ತಿ ಮೇಲೆಯೇ ಅದ್ಭುತವಾದಂತಹ ಗ್ರಂಥಾಲಯ ನಿರ್ಮಿಸಿ ಪುಸ್ತಕ ಸಂಸ್ಕೃತಿ ಬೆಳೆಸುತ್ತಿದ್ದಾರೆ. ಇವರಿಗೂ ಸಂಸ್ಥೆಯ ಸಮಾರಂಭದಲ್ಲಿ ವಿಶೇಷ ಸನ್ಮಾನ ಮಾಡಲಾಗುತ್ತದೆ ಎಂದು ಬಸವ ಪ್ರಕಾಶನದ ಮಾಲೀಕರಾದ ಶರಣು ಕೊನೇಕ ಹೇಳಿದರು.