ಕರ್ನಾಟಕದಲ್ಲಿ ಅತಿಹೆಚ್ಚು ಆನೆಗಳಿರುವುದು ಖುಷಿಯ ವಿಚಾರ.
ಕನ್ನಡಪ್ರಭ ವಾರ್ತೆ ಮೈಸೂರು
ಮಾನವ- ಆನೆಗಳ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತಿಳಿಸಿದರು.ನಗರದ ಎಂಜಿನಿಯರುಗಳ ಸಂಸ್ಥೆಯ ಸಭಾಂಗಣದಲ್ಲಿ ಮೈಸೂರು ಕಲ್ಚರಲ್ ಅಸೋಸಿಯೇಷನ್ ಮತ್ತು ಕಲಿಸು ಫೌಂಡೇಶನ್ ಗುರುವಾರ ಆಯೋಜಿಸಿದ್ದ ಅರ್ಜುನ 2ನೇ ವರ್ಷದ ನೆನಪು ಹಾಗೂ ಹಿರಿಯ ಪತ್ರಕರ್ತ ಐತಿಚಂಡ ರಮೇಶ ಉತ್ತಪ್ಪ ರಚಿಸಿರುವ ಸಾವಿನ ಸತ್ಯ ‘ಅರ್ಜುನಾ ನಿನ್ನ ಕೊಂದದ್ದು ಮದಗಜವಲ್ಲ ಪಾಪಿ ಮನುಷ್ಯ’ ಹಾಗೂ ದಸರಾ ಆನೆಗಳು ‘ಭೀಮ ಹಾಗೂ ಇತರರು’ ಕೃತಿಗಳನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.
ಕರ್ನಾಟಕದಲ್ಲಿ ಅತಿಹೆಚ್ಚು ಆನೆಗಳಿರುವುದು ಖುಷಿಯ ವಿಚಾರ. ಕೊಡಗು, ಮೈಸೂರು ಭಾಗಗಳಲ್ಲಿ ಹೆಚ್ಚು ಆನೆಗಳ ಉಪಟಳವಿದ್ದು, ಇದರಿಂದ ಮಾನವ- ಆನೆಗಳ ಸಂಘರ್ಷ ಹೆಚ್ಚಾಗಿದೆ. ಇದಕ್ಕೆ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.ಪುಸ್ತಕವನ್ನು ಕೊಂಡು ಓದುವವರು ಇರುವ ತನಕ ಲೇಖಕರಿಗೆ ಅಭಿರುಚಿ ಸಿಗುತ್ತದೆ. ಹೀಗಾಗಿ, ಎಲ್ಲರೂ ಪುಸ್ತಕ ಓದಿ. ಆ ಮೂಲಕ ಓದುವ ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಅವರು ಕರೆ ನೀಡಿದರು.
ಎರಡು ಕೃತಿಗಳ ಕುರಿತು ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ. ನಿಂಗರಾಜ್ ಗೌಡ ಮಾತನಾಡಿ, ಆನೆಗಳ ಜೊತೆ ನಿಕಟ ಸಂಬಂಧ ಇರುವ ವ್ಯಕ್ತಿಗಳಷ್ಟೇ ಆನೆ ಪುಸ್ತಕ ಬರೆಯಲು ಸಾಧ್ಯ. ಅರ್ಜುನ ಸಾವನ್ನಪ್ಪಿದಾಗ ಹಲವಾರು ಕಾರಣಗಳಿದ್ದು, ಅವರ ಆತ್ಮಕ್ಕೆ ಶಾಂತಿಯನ್ನು ಕೋರಲಾಗುವುದು. ಇವರು ಬರೆದಿರುವಂತಹ ಪುಸ್ತಕ ವಿಶೇಷವಾಗಿದೆ ಎಂದರು.ಸಮಾಜದಲ್ಲಿ ಪ್ರಾಣಿಗಳಿಂದ ಪ್ರಕೃತಿಯಿಂದ ಸಾಕಷ್ಟು ಉಪಯೋಗ ಪಡೆದಿದ್ದು ಅದಕ್ಕೆ ನಾವು ಎಷ್ಟು ಋಣಿಯಾಗಿದ್ದೇವೆ ಎಂಬುದನ್ನು ಅರಿಯಬೇಕು. ಅಲ್ಲದೆ, ಆನೆಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಹೊಣೆ ಎಂಬುದನ್ನು ನಾವು ಮರೆಯಬಾರದು ಎಂದು ಅವರು ಹೇಳಿದರು.
ಅರಣ್ಯ ಇಲಾಖೆಯಲ್ಲಿ ಪಶುವೈದ್ಯ ಕೊರತೆಯಿದ್ದು, ಸರ್ಕಾರವು ಶೀಘ್ರವಾಗಿ ಅವರನ್ನು ನೇಮಕ ಮಾಡಬೇಕು. ಹಾಗೂ ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ ಆನೆಗಳ ಸಂಬಂಧಿತ ಮ್ಯೂಸಿಯಂ ಮಾಡಬೇಕು ಎಂದರು.ಇದೇ ವೇಳೆ ಪಶುವೈದ್ಯ ಡಾ. ಮುಜಿಬ್ ರೆಹಮಾನ್ ಮತ್ತು ಅರ್ಜುನ ಅಭಿಮಾನಿ ಕೆ.ಆರ್. ಸತ್ಯಪ್ರಭಾ ಅವರಿಗೆ ಸನ್ಮಾನಿಸಲಾಯಿತು.
ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ.ಬಿ. ಲಿಂಗರಾಜು, ಕೃತಿಯ ಕರ್ತೃ ಐತಿಚಂಡ ರಮೇಶ ಉತ್ತಪ್ಪ, ಮೈಸೂರು ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಎ.ಪಿ. ನಾಗೇಶ್, ಪ್ರಕಾಶಕ ಎಂ.ಎಂ. ನಿಖಿಲೇಶ್ ಮೊದಲಾದದವರು ಇದ್ದರು.