ಸಾರಾಂಶ
ಕಂಬಳ ಓಟಗಾರ ಅದರಲ್ಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾದ ಶ್ರೀನಿವಾಸ ಗೌಡರ ಕುರಿತ ಮೊದಲ ಸಾಹಿತ್ಯ ಕೃತಿ ಎನ್ನುವುದು ಕಂಬಳ ಶ್ರೀ ಹೆಗ್ಗಳಿಕೆ. ಕೃತಿಯ ಕೇಂದ್ರ ಬಿಂದು ಶ್ರೀನಿವಾಸ ಗೌಡ ಅವರಿಗೆ 34 ರ ಜನ್ಮದಿನದಂದೇ ಈ ಕೃತಿ ಲೊಕಾರ್ಪಣೆಗೊಂಡದ್ದೇ ವಿಶೇಷ.
ಮೂಡುಬಿದಿರೆ : ಶ್ರಮಜೀವಿ ಕಂಬಳ ಓಟಗಾರ ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡರ ಜೀವನ ಸಾಧನೆ ಕರಾವಳಿಗೆ ಮಾತ್ರವಲ್ಲ ನಾಡಿಗೇ ಹೆಮ್ಮೆಯ ವಿಚಾರ. ಕಂಬಳದಲ್ಲಿ ಶಾಸ್ತ್ರೀಯ ಚೌಕಟ್ಟು ಮೀರಿ ಬೆಳೆದ ಅವರ ಯಶೋಗಾಥೆ ಸಾಹಿತ್ಯ ಕೃತಿಯಾಗಿ ದಾಖಲೀಕರಣಗೊಂಡಿರುವುದು ಶ್ಲಾಘನೀಯ. ಅವರ ಕುರಿತು ಹೆಚ್ಚಿನ ಅಧ್ಯಯನ ಮಾಡುವವರಿಗೆ ಈ ಕೃತಿ ಪೂರಕವಾಗಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು.
ಅವರು ಮಂಗಳವಾರ ಸಂಜೆ ಸಮಾಜ ಮಂದಿರದಲ್ಲಿ ಶ್ರೀನಿವಾಸ ಗೌಡ ಕುರಿತು ಪತ್ರಕರ್ತೆ ಪ್ರೇಮಶ್ರೀ ಕಲ್ಲಬೆಟ್ಟು ಬರೆದ ‘ಕಂಬಳಶ್ರೀ’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ ಎಂ. ಮಾತನಾಡಿ ಶ್ರೀನಿವಾಸ ಗೌಡರು ಕಂಬಳದ ಓಟದಲ್ಲಿ ಸಾಧನೆಯ ಮೂಲಕ ತಂದಿರುವ ಗೌರವ ಇನ್ನಷ್ಟು ಓಟಗಾರರಿಗೆ ಸ್ಫೂರ್ತಿಯಾಗಲಿ ಎಂದು ಹಾರೈಸಿದರು. ಕಂಬಳ ಅಕಾಡೆಮಿ ಸಂಚಾಲಕ ಕೆ. ಗುಣಪಾಲ ಕಡಂಬ ಪ್ರಾಸ್ತಾವಿಕ ಮಾತುಗಳೊಂದಿಗೆ ಶ್ರೀನಿವಾಸ ಗೌಡರ ಯಶೋಗಾಥೆಯನ್ನು ವಿವರಿಸಿದರು. ಲೇಖಕಿ ಜಯಂತಿ ಎಸ್. ಬಂಗೇರ, ಉದ್ಯಮಿಗಳಾದ ಅರುಣ್ ಪ್ರಕಾಶ್ ಶೆಟ್ಟಿ, ಸಿ.ಎಚ್. ಗಫೂರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ವಿಠಲ, ಪ್ರೆಸ್‌ಕ್ಲಬ್ ಅಧ್ಯಕ್ಷ ಯಶೋಧರ ಬಂಗೇರ, ಶುಭ ಹಾರೈಸಿದರು. ಪ್ರೇಮಶ್ರೀ ಅವರ ತಾಯಿ ಕಲ್ಯಾಣಿ ಪೂವಪ್ಪ ಉಪಸ್ಥಿತರಿದ್ದರು. ಪ್ರೇಮಶ್ರೀ ಸ್ವಾಗತಿಸಿದರು. ಹರೀಶ್ ಕೆ. ಅದೂರು ವಂದಿಸಿದರು. ಧನಂಜಯ ಮೂಡುಬಿದಿರೆ ಕಾರ್ಯಕ್ರಮ ನಿರೂಪಿಸಿದರು.ಶ್ರೀನಿಗೆ ಬರ್ತ್ ಡೇ ಗಿಫ್ಟ್!ಕಂಬಳ ಓಟಗಾರ ಅದರಲ್ಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾದ ಶ್ರೀನಿವಾಸ ಗೌಡರ ಕುರಿತ ಮೊದಲ ಸಾಹಿತ್ಯ ಕೃತಿ ಎನ್ನುವುದು ಕಂಬಳ ಶ್ರೀ ಹೆಗ್ಗಳಿಕೆ. ಪತ್ರಕರ್ತೆ ಪ್ರೇಮಶ್ರೀ ಅವರ ಚೊಚ್ಚಲ ಕೃತಿ, ರಾಷ್ಟ್ರೀಯ ಮಹಿಳಾ ದಿನವಾದ (ಫೆ 13) ಮಂಗಳವಾರ ಪ್ರೇಮಶ್ರೀ ಅವರ ಕೃತಿ ಲೋಕಾರ್ಪಣೆಗೊಂಡ ಬಗ್ಗೆ ಅತಿಥಿಗಳಿಂದ ಶ್ಲಾಘನೆ ವ್ಯಕ್ತವಾಯಿತು. ಕೃತಿಯ ಕೇಂದ್ರ ಬಿಂದು ಶ್ರೀನಿವಾಸ ಗೌಡ ಅವರಿಗೆ 34 ರ ಜನ್ಮದಿನದಂದೇ ಈ ಕೃತಿ ಲೊಕಾರ್ಪಣೆಗೊಂಡದ್ದೇ ವಿಶೇಷ.