ಸಾರಾಂಶ
ಪತ್ರಕರ್ತ ಪ್ರಭಾಕರ ಕಾರಂತರ ‘ಮುಳುಗಡೆಯ ಒಡಲಾಳ’ ಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು. ಕೃತಿಯ ಮಹತ್ವದ ಕುರಿತು ಚಿಕ್ಕಮಗಳೂರಿನ ಪರಿಸರ ಪ್ರೇಮಿ ಸ.ಗಿರಿಜಾ ಶಂಕರ್ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಕುಂದಾಪುರ
ಎಪ್ಪತ್ತರ ದಶಕದಲ್ಲಿ ಜಲವಿದ್ಯುತ್ ಅನಿವಾರ್ಯತೆ ಇತ್ತು, ಹಾಗಾಗಿ ಶರಾವತಿ, ವಾರಾಹಿಯ ಯೋಜನೆ ನಿರರ್ಥಕ ಎಂದು ನಾನು ಹೇಳಲಾರೆ. ಆದರೆ ಈ ಯೋಜನೆಗಾಗಿ ಸರ್ವಸ್ವ ಕಳೆದುಕೊಂಡ ಜನರನ್ನು ನ್ಯಾಯಯುತವಾಗಿ ನಡೆಸಿಕೊಂಡಿಲ್ಲ ಎಂದು ಬೆಂಗಳೂರಿನ ಸಾಹಿತಿ ಡಾ.ಗಜಾನನ ಶರ್ಮ ಹೇಳಿದರು.ಅವರು ಇಲ್ಲಿನ ಹೊಸಂಗಡಿ ಮೇಲುಸುಂಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪತ್ರಕರ್ತ ಪ್ರಭಾಕರ ಕಾರಂತರ ‘ಮುಳುಗಡೆಯ ಒಡಲಾಳ’ ಪುಸ್ತಕ ಬಿಡುಗಡೆ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಅಧಿಕಾರದಲ್ಲಿದ್ದವರು ಇಂತಹ ಸಂದರ್ಭ ಹೆಚ್ಚು ಮಾನವೀಯತೆಯಿಂದ ನಡೆದುಕೊಂಡಿದ್ದರೆ ಸಂತ್ರಸ್ತರ ನೋವು ಕಡಿಮೆ ಮಾಡಬಹುದಿತ್ತು. ಮುಳುಗಡೆಯ ನೋವಿನ ವಿವರ ಇರುವ ಇಂತಹ ಕೃತಿ ಈಗಿನ ತಲೆಮಾರಿಗೆ ಪೂರ್ವಿಕರ ಕುರಿತು ಅರಿಯಲು ಅವಕಾಶ ಕಲ್ಪಿಸಿದೆ ಎಂದರು.ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಕಾರ್ಯಕ್ರಮ ಉದ್ಘಾಟಿಸಿದರು. ಕೃತಿಯ ಮಹತ್ವದ ಕುರಿತು ಚಿಕ್ಕಮಗಳೂರಿನ ಪರಿಸರ ಪ್ರೇಮಿ ಸ.ಗಿರಿಜಾ ಶಂಕರ್ ಮಾತನಾಡಿದರು.ಕೃತಿಯನ್ನು ಸಾಹಿತಿ ರೂಪಕಲಾ, ಅಂಕಣಕಾರ್ತಿ ಪೂರ್ಣಿಮಾ ನರಸಿಂಹ, ಹಿರಿಯ ಪತ್ರಕರ್ತರಾದ ಜಯರಾಮ ಅಡಿಗ ಮತ್ತು ಮುರಳೀಕೃಷ್ಣ ಮಡ್ಡೀಕೇರಿ, ಸಾಹಿತಿಗಳಾದ ಡಾ.ಜಯಪ್ರಕಾಶ ಮಾವಿನಕುಳಿ, ತಿರುಪತಿ ನಾಯಕ್, ಡಾ.ಮಂಜುಳಾ ಹುಲ್ಲಹಳ್ಳಿ, ಜಿ.ವಿ. ಗಣೇಶಯ್ಯ, ಕಿಶೋರ್ ಶೀರ್ನಾಳಿ ಜೊತೆಯಾಗಿ ಲೋಕಾರ್ಪಣೆಗೊಳಿಸಿದರು.ಪರಿಸರ ಬರಹಗಾರ ಶಿವಾನಂದ ಕಳವೆ, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಮಾತನಾಡಿದರು. ಕೃತಿಕಾರ ಪ್ರಭಾಕರ ಕಾರಂತ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಚಲನಚಿತ್ರ ನಿರ್ದೇಶಕ ರಮೇಶ್ ಬೇಗಾರ್ ಕಾರ್ಯಕ್ರಮ ನಿರ್ವಹಿಸಿದರು. ಚಂದ್ರಶೇಖರ ಶಾಸ್ತ್ರಿ ಸ್ವಾಗತಿಸಿದರು. ತಾರಾ ನಾಗರಾಜ್ ವಂದಿಸಿದರು.