ಕುಡಿಯುವ ನೀರು ಪೂರೈಸಲು ಕೆಆರ್‌ಎಸ್‌ನಿಂದ ನೀರು ಬಿಡುಗಡೆ

| Published : Mar 12 2024, 02:01 AM IST

ಸಾರಾಂಶ

ಬೆಂಗಳೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶಕ್ಕಾಗಿ ಮಳವಳ್ಳಿ ತಾಲೂಕಿನ ಶಿವಾ ಅಣೆಕಟ್ಟನ್ನು ಉಪಯೋಗಿಸಲಾಗುತ್ತಿದೆ. ಕಾವೇರಿ ನದಿಯಿಂದ ಬೆಂಗಳೂರು, ಮೈಸೂರು ಮತ್ತು ಇತರೆ ಪಟ್ಟಣ ಹಾಗೂ ಗ್ರಾಮಗಳಿಗೆ ಕುಡಿಯುವ ನೀರು ಹಾಗೂ ಕೈಗಾರಿಕೆಗೆ ನೀರು ಸರಬರಾಜು ಮಾಡಲು ಪ್ರತಿದಿನ ಒಟ್ಟಾರೆ ೧೦೦೦ ಕ್ಯುಸೆಕ್‌ನಷ್ಟು ನೀರಿನ ಅವಶ್ಯಕತೆ ಇರುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಕೃಷ್ಣರಾಜಸಾಗರ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ ಹೊರತು ತಮಿಳುನಾಡಿಗೆ ಹನಿ ನೀರನ್ನು ಹರಿಸಿಲ್ಲ ಎಂದು ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್‌ ಹಾಗೂ ಅಧೀಕ್ಷಕ ಎಂಜಿನಿಯರ್ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶಕ್ಕಾಗಿ ಮಳವಳ್ಳಿ ತಾಲೂಕಿನ ಶಿವಾ ಅಣೆಕಟ್ಟನ್ನು ಉಪಯೋಗಿಸಲಾಗುತ್ತಿದೆ. ಕಾವೇರಿ ನದಿಯಿಂದ ಬೆಂಗಳೂರು, ಮೈಸೂರು ಮತ್ತು ಇತರೆ ಪಟ್ಟಣ ಹಾಗೂ ಗ್ರಾಮಗಳಿಗೆ ಕುಡಿಯುವ ನೀರು ಹಾಗೂ ಕೈಗಾರಿಕೆಗೆ ನೀರು ಸರಬರಾಜು ಮಾಡಲು ಪ್ರತಿದಿನ ಒಟ್ಟಾರೆ ೧೦೦೦ ಕ್ಯುಸೆಕ್‌ನಷ್ಟು ನೀರಿನ ಅವಶ್ಯಕತೆ ಇರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರು ಜಲ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಅವರು ನೀಡಿರುವ ಮಾಹಿತಿಯಂತೆ ಮಳವಳ್ಳಿ ತಾಲೂಕಿನ ಶಿವಾ ಅಣೆಕಟ್ಟೆಯ ಬಳಿಯಿಂದ ನೀರನ್ನು ತೊರೆಕಾಡನಹಳ್ಳಿವರೆಗೆ ಹರಿಸಿ, ತೊರೆಕಾಡನಹಳ್ಳಿಯಲ್ಲಿ ಸ್ಥಾಪಿಸಿರುವ ಜಲಸ್ಥಾವರ ಮುಖಾಂತರ ಸುಮಾರು ೧೪೭೦ ಎಂಎಲ್‌ಡಿ (೬೦೦ ಕ್ಯುಸೆಕ್) ನಷ್ಟು ನೀರನ್ನು ಬೆಂಗಳೂರಿಗೆ ಸರಬರಾಜು ಮಾಡಲಾಗುತ್ತಿದೆ.

ಮಾ.೬ರಿಂದ ಮಾ.೮ರವರೆಗೆ ಶಿವಾ ಅಣೆಕಟ್ಟೆಯಲ್ಲಿನ ನೀರಿನ ಮಟ್ಟವು ದಿನದಿಂದ ದಿನಕ್ಕೆ ಗಣನೀಯವಾಗಿ ಕಡಿಮೆಯಾಗಿ ಅಣೆಕಟ್ಟೆಯ ಮೇಲ್ಬಾಗದಿಂದ ೩೬ ಇಂಚಿನಷ್ಟು ಕೆಳಮಟ್ಟ ತಲುಪಿರುತ್ತದೆ. ಇದರಿಂದ, ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಪ್ರಮಾಣವನ್ನು ಸರಬರಾಜು ಮಾಡಲು ವ್ಯತ್ಯಯವಾಗಿರುತ್ತದೆ.

ಮಾ.೯ರಂದು ಬೆಂಗಳೂರು ಜಲ ಮಂಡಳಿ ಅಧಿಕಾರಿಗಳು ಆರ್‌ಎಸ್ ಜಲಾಶಯಕ್ಕೆ ಭೇಟಿ ನೀಡಿ ನೀರಿನ ಹರಿವಿನ ಪ್ರಮಾಣವನ್ನು ಹೆಚ್ಚು ಮಾಡಲು ಕೋರಿದ್ದರು. ಅದರಂತೆ ಮಾ.೯ ರಂದು ಬೆಳಗ್ಗೆ ೭ ಗಂಟೆಗೆ ಕೆಆರ್‌ಎಸ್ ಜಲಾಶಯದಿಂದ ನೀರನ್ನು ಹಂತ ಹಂತವಾಗಿ ಹೆಚ್ಚು ಮಾಡಿ, ಸುಮಾರು ೪೭೮೦ ಕ್ಯೂಸೆಕ್‌ನಷ್ಟು ನೀರನ್ನು ಹರಿಯಬಿಡಲಾಗಿದೆ. ನಂತರ, ಕೆಆರ್‌ಎಸ್ ಜಲಾಶಯದಿಂದ ಕಾವೇರಿ ಪಾತ್ರದುದ್ದಕ್ಕೂ ಬೆಂಗಳೂರು ಜಲ ಮಂಡಳಿ ಮತ್ತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಸಿಡಿಎಸ್ ಆಣೆಕಟ್ಟು, ರಾಮಸ್ವಾಮಿ ಅಣೆಕಟ್ಟು, ಮಾಧವಮಂತ್ರಿ ಅಣೆಕಟ್ಟು, ಮೇದಿನಿ ಅಣೆಕಟ್ಟು, ಸತ್ತೇಗಾಲ ಬಳಿಯಿರುವ ಆಣೆಕಟ್ಟು ಹಾಗೂ ಶಿವಾ ಅಣೆಕಟ್ಟುಗಳನ್ನು ಪರಿವೀಕ್ಷಣೆ ಮಾಡಲಾಗಿದ್ದು. ಅದರಂತೆ, ಸತ್ತೇಗಾಲ ಅಣೆಕಟ್ಟು ಹಾಗೂ ಶಿವಾ ಅಣೆಕಟ್ಟುಗಳಲ್ಲಿ ನೀರಿನ ಮಟ್ಟವು ತಳಮಟ್ಟ ತಲುಪಿದ್ದು. ನೀರಿನ ತೀವ್ರ ಕೊರತೆ ಉಂಟಾಗಿರುತ್ತದೆ.

ಮಾ.೯ರಂದು ಕೆಆರ್‌ಎಸ್‌ನಿಂದ ೪೭೮೦ ಕ್ಯುಸೆಕ್ ಹಾಗೂ ಕಬಿನಿ ಜಲಾಶಯದಿಂದ ೨೦೦೦ ಕ್ಯುಸೆಕ್ ನೀರನ್ನು ಹರಿಸಿದ್ದರ ಪರಿಣಾಮ ಮಾ.೧೦ ರಂದು ಬೆಳಗ್ಗೆ ಶಿವಾ ಅಣೆಕಟ್ಟೆಯಲ್ಲಿ ನೀರಿನ ಮಟ್ಟವು ಅಣೆಕಟ್ಟೆಯ ಮೇಲ್ಬಾಗದಿಂದ ೩೮ ಇಂಚು ಕೆಳಮಟ್ಟದಿಂದ ೨೪ ಇಂಚಿಗೆ ತಲುಪಿದ್ದು (೧೬ ಇಂಚು ಏರಿಕೆ) ನಿಧಾನವಾಗಿ ಏರಿಕೆಯಾಗಿರುತ್ತದೆ. ಮಾ.೧೦ರಂದು ಬೆಳಗ್ಗೆ ೧೦ ಗಂಟೆಗೆ ಕೆಆರ್‌ಎಸ್ ನೀರಿನ ಹರಿವಿನ ಪ್ರಮಾಣವನ್ನು ೪೭೮೦ ಕ್ಯುಸೆಕ್ಸ್ ನಿಂದ ೨೭೬೯ ಕ್ಯುಸೆಕ್‌ಗೆ ಇಳಿಕೆ ಮಾಡಲಾಗಿರುತ್ತದೆ.

ಅಣೆಕಟ್ಟೆಯ ನೀರಿನ ಮಟ್ಟವು ಮಧ್ಯಾಹ್ನ ೧೨ ಗಂಟೆಗೆ ೨ ಇಂಚು ಏರಿಕೆಯಾದ್ದರಿಂದ ಕೆಆರ್‌ಎಸ್‌ನ ನೀರಿನ ಹರಿವಿನ ಪ್ರಮಾಣವನ್ನು ೨೭೬೯ ಕ್ಯುಸೆಕ್‌ನಿಂದ ೧೦೦೮ ಕ್ಯುಸೆಕ್‌ಗೆ ಇಳಿಕೆ ಮಾಡಲಾಗಿರುತ್ತದೆ. ಮಾ.೧೦ರಂದು ಸಂಜೆ ೬ ಗಂಟೆಗೆ ಶಿವಾ ಅಣೆಕಟ್ಟೆಯ ನೀರಿನ ಮಟ್ಟವು ಅಣೆಕಟ್ಟೆಯ ಮೇಲ್ಬಾಗದಿಂದ ೧೮ ಇಂಚು ಕೆಳಗಡೆಯಿದ್ದು, ಮಾ.೯ ಬೆಳಗ್ಗೆ ೭ ಗಂಟೆಗೆ ೩೬ ಇಂಚು ಕೆಳಮಟ್ಟಕ್ಕೆ ಹೋಲಿಸಿದಾಗ ಒಟ್ಟಾರೆ ೧೮ ಇಂಚು ನೀರಿನ ಮಟ್ಟದಲ್ಲಿ ಏರಿಕೆಯಾಗಿರುತ್ತದೆ. ಪ್ರಸ್ತುತ, ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಪ್ರಮಾಣವನ್ನು ಸುಸ್ಥಿರಗೊಳಿಸಿರಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.