ಸಾರಾಂಶ
ವಿಪ ಮಾಜಿ ಸದಸ್ಯ ಛಬ್ಬಿ ಸವಾಲು, ಕಲಘಟಗಿ ಸಂಪೂರ್ಣ ಬರಗಾಲ ಪಟ್ಟಿಗೆ ಸೇರಲಿ
ಕನ್ನಡಪ್ರಭ ವಾರ್ತೆ ಅಳ್ನಾವರ
ಸುಳ್ಳು ಭರವಸೆಯನ್ನು ನೀಡುವ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಚುನಾವಣೆಯಲ್ಲಿ ನೀಡಿದ ಗ್ಯಾರಂಟಿಗಳನ್ನು ಸಂಪೂರ್ಣವಾಗಿ ಈಡೇರಿಸದೆ ಜನರನ್ನು ವಂಚಿಸುತ್ತಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ದೂರಿದರು.ಅಳ್ನಾವರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿಗಳಿಂದ ನಿರಾಶೆಗೊಂಡ ಫಲಾನುಭವಿಗಳು ಕಾಂಗ್ರೆಸ್ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಗೃಹಲಕ್ಷ್ಮಿ ಯೊಜನೆಯ ಹಣ ಅನೇಕರಿಗೆ ಬಂದಿಲ್ಲ. ಅಧಿಕಾರಕ್ಕೆ ಬಂದು ಆರು ತಿಂಗಳಾದರೂ ನಿರುದ್ಯೋಗಿಗಳಿಗೆ ಯುವನಿಧಿ ಕನಸಿನ ಮಾತಾಗಿದೆ. ರಾಜ್ಯದಲ್ಲಿ ಶಕ್ತಿ ಯೋಜನೆ ಆರಂಭ ಮಾಡಿದಾಗಿನಿಂದ ನಿತ್ಯ ಓಡಾಡುವ ಬಸ್‌ಗಳ ಸಂಖ್ಯೆಯಲ್ಲಿ ಕಡಿತ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯುಂಟಾಗಿದೆ. ಸರ್ಕಾರದ ಗ್ಯಾರಂಟಿಗಳು ಎಷ್ಟು ಜನರಿಗೆ ತಲುಪುತ್ತಿವೆ ಎಂದು ನಮ್ಮ ಕ್ಷೇತ್ರದ ಸಚಿವರು ಮಾಧ್ಯಮಗಳಿಗೆ ಅಂಕಿ-ಅಂಶ ಬಿಡುಗಡೆ ಮಾಡಲಿ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಅವರಿಗೆ ಟಾಂಗ್ ನೀಡಿದರು.
ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಮಾಯವಾಗಿವೆ. ಕ್ಷೇತ್ರದ ತುಂಬ ಬರಗಾಲ ಆವರಿಸಿದರೂ ರೈತರ ಕೂಗನ್ನು ಕೇಳಿಸಿಕೊಳ್ಳದ ಸರ್ಕಾರ, ರೈತರ ಮತ್ತು ಬಿಜೆಪಿಯವರ ಹೋರಾಟದಿಂದ ಕಲಘಟಗಿಯನ್ನು ಅರೆ ಬರಗಾಲ ಪಟ್ಟಿಗೆ ಸೇರಿಸಿದೆ. ಇದರಿಂದ ಕಾರ್ಮಿಕ ಸಚಿವರು ಇಲ್ಲಿಯ ರೈತರ ಬಗ್ಗೆ ಹೊಂದಿದ ಕಾಳಜಿ ಗೊತ್ತಾಗುತ್ತದೆ. ಈಗಲಾದರೂ ಕ್ಷೇತ್ರವನ್ನು ಸಂಪೂರ್ಣ ಬರಗಾಲದ ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.ಕೇಂದ್ರದ ಮೋದಿ ಸರ್ಕಾರ ನೀಡಿದ ಹಲವಾರು ಜನಪರ ಯೋಜನೆಗಳು ಸಕಾಲಕ್ಕೆ ಜಾರಿಗೆ ಬರುವ ಜತೆಗೆ ಅರ್ಹ ಫಲಾನುಭವಿಗಳಿಗೆ ನೇರವಾಗಿ ತಲುಪುತ್ತಿದೆ. ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನವನ್ನು ಸಚಿವ ಜೋಶಿ ಅವರು ಒದಗಿಸಿದ್ದು, ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಉಚಿತ ಆರೋಗ್ಯ ಶಿಬಿರ, ಉಚಿತ ಹೊಲಿಗೆ ತರಬೇತಿ ಕೇಂದ್ರ ತೆರೆಯುವುದು ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಜೋಶಿ ಅವರಿಗೆ ಬೆಂಬಲ ನೀಡುವ ಮೂಲಕ ಮೋದಿ ಅವರ ಕೈ ಬಲಪಡಿಸಬೇಕಾಗಿದೆ ಎಂದರು.
ಹು-ಧಾ ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಬಿಜೆಪಿ ಮಂಡಳ ಅಧ್ಯಕ್ಷ ಕಲ್ಮೇಶ ಬೇಲೂರ, ರೈಲ್ವೆ ಸಲಹಾ ಸಮಿತಿ ಸದಸ್ಯರಾದ ಲಿಂಗರಾಜ ಮೂಲಿಮನಿ, ಪ್ರವೀಣ ಪವಾರ, ಶಿವಾಜಿ ಡೊಳ್ಳಿನ, ನಾರಾಯಣ ಮೋರೆ, ಸಂಜಯ ಚಂದರಗಿಮಠ, ಮಂಜು ಶೇರೆವಾಡ ಇನ್ನಿತರರು ಇದ್ದರು.