ಸಾರಾಂಶ
- ವೈಜ್ಞಾನಿಕ ಜಾತಿಗಣತಿ ವರದಿ ಈಗ ವಿರೋಧಿಸುವವರು ಆಗ ಏನು ಮಾಡುತ್ತಿದ್ದರು ಎಂದು ಜಿ.ಬಿ.ವಿನಯಕುಮಾರ ಪ್ರಶ್ನೆ
- - - ಕನ್ನಡಪ್ರಭ ವಾರ್ತೆ ದಾವಣಗೆರೆರಾಜ್ಯ ಸರ್ಕಾರ ಯಾವುದೇ ಒತ್ತ, ಪ್ರಭಾವಕ್ಕೂ ಮಣಿಯದೇ ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡಬೇಕು ಎಂದು ಸ್ವಾಭಿಮಾನಿ ಬಳಗ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಿ.ಬಿ.ವಿನಯಕುಮಾರ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ವೈಜ್ಞಾನಿಕವಾಗಿ ಸಿದ್ಧಗೊಂಡ ಜಾತಿಗಣತಿ ವರದಿಗೆ ಸಚಿವ ಸಂಪುಟದ ಅನುಮೋದನೆ ಪಡೆದು, ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.ರಾಜ್ಯದ ಎಲ್ಲ ಜಾತಿ, ವರ್ಗಗಳಿಗೂ ಸಾಮಾಜಿಕ ನ್ಯಾಯ ಒದಗಿಸಲು 2015ರ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಗಣತಿಯನ್ನು ರಾಜ್ಯ ಹಿಂದುಳಿದ ಆಯೋಗ ಅಧ್ಯಕ್ಷರಾಗಿದ್ದ ಎಚ್.ಕಾಂತರಾಜು ನೇತೃತ್ವದಲ್ಲಿ ಏ.11ರಿಂದ 30 ದಿನಗಳ ಕಾಲ ರಾಜ್ಯಾದ್ಯಂತ ಮನೆ ಮನೆಗಳಿಗೆ ತೆರಳಿ, ರಾಜ್ಯದ 1351 ಜಾತಿಗಳ ಪಟ್ಟಿ ಸಿದ್ಧಪಡಿಸಿ, ಜಾತಿ ಗಣತಿ ಮಾಡಲಾಗಿದೆ. ಗಣತಿ ಪೂರ್ಣವಾಗಿ ವರ್ಷಗಳೇ ಕಳೆದರೂ ಇಂದಿಗೂ ಸಾರ್ವಜನಿಕವಾಗಿ ಬಿಡುಗಡೆ ಮಾಡಿಲ್ಲ ಎಂದು ದೂರಿದರು.
ಎಲ್ಲ ಜಾತಿ ವರ್ಗಗಳ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸ್ಥಿತಗತಿ ಅರಿತು, ಅವಕಾಶ ವಂಚಿತ ಜಾತಿಗಳಿಗೆ ಅನುಕೂಲ ಮತ್ತು ಅವಕಾಶ ಮಾಡಿಕೊಡಲು ಜಾತಿಗಣತಿ ಅಂಕಿ ಅಂಶಗಳು ರಾಜ್ಯ ಸರ್ಕಾರಕ್ಕೆ ಮಾರ್ಗಸೂಚಿಯಾಗಲಿವೆ. 2015ರಲ್ಲಿ ಸಾರ್ವಜನಿಕವಾಗಿ ಪ್ರಕಟಣೆ ಹೊರಡಿಸಿ, ರಾಜ್ಯದ ಪ್ರತಿಯೊಂದು ಜಾತಿಗಳಿಗೂ ಪ್ರತ್ಯೇಕ ಒಂದೊಂದು ಸಂಖ್ಯೆ ನೀಡಿ, ಮನೆ ಮನೆ ಸಮೀಕ್ಷೆಯನ್ನು ವಿದ್ಯಾವಂತರು, ಶಿಕ್ಷಕರ ಸಹಕಾರದಲ್ಲಿ ಕೈಗೊಳ್ಳಲಾಗಿತ್ತು ಎಂದು ಅವರು ತಿಳಿಸಿದರು.ಈಗ ಜಾತಿ ಗಣತಿಗೆ ವಿರೋಧಿಸುತ್ತಿರುವವರು ಗಣತಿ ಆರಂಭದಲ್ಲೇ ಅಥವಾ ಗಣತಿ ಮುಗಿದ ನಂತರವಾದರೂ ತಮ್ಮಲ್ಲಿ ಅನುಮಾನಗಳಿದ್ದಿದ್ದರೆ ಅಂದೇ ವಿರೋಧ ವ್ಯಕ್ತಪಡಿಸಬೇಕಾಗಿತ್ತು. ಆದರೆ, ವರ್ಷಾನುಗಟ್ಟಲೇ ಸುಮ್ಮನಿದ್ದವರು ಈಗ ಜಾತಿಗಣತಿಯೇ ಅವೈಜ್ಞಾನಿಕ ಸಮೀಕ್ಷೆಯಾಗಿದೆ, ಜಾತಿಗಣತಿ ರದ್ದುಪಡಿಸಿ, ಹೊಸದಾಗಿ ಗಣತಿ ಕೈಗೊಳ್ಳುವಂತೆ ತೋಚಿದ ಸಲಹೆ, ಹೇಳಿಕೆಗಳ ನೀಡುತ್ತಿರುವುದು ಹಾಸ್ಯಾಸ್ಪದ ಸಂಗತಿ ಎಂದು ವ್ಯಂಗ್ಯವಾಡಿದರು.
ಜಾತಿಗಣತಿಗೆ ವಿರೋಧ ವ್ಯಕ್ತಪಡಿಸುತ್ತಿರುವವರ ವಾದ ಸಾರ್ವಜನಿಕರ ₹165 ಕೋಟಿ ವ್ಯರ್ಥವಾದರೂ ಪರವಾಗಿಲ್ಲ ಎಂಬಂತಿದೆ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಗಣತಿ ವರದಿಯನ್ನು 224 ವಿಧಾನಸಭಾ ಕ್ಷೇತ್ರದಲ್ಲಿ ಶೇ.80ರಷ್ಟಿರುವ ಶೋಷಿತ ಅಹಿಂದ ವರ್ಗಗಳು ಸ್ವಾಗತಿಸಿ, ತಕ್ಷಣವೇ ಸಾರ್ವಜನಿಕವಾಗಿ ಜಾತಿಗಣತಿ ವಿವರ ಬಹಿರಂಗಪಡಿಸಲು ಒತ್ತಾಯ ಮಾಡುತ್ತಿವೆ. ಶೇ.15ರಷ್ಟು ಜನ ವಿರೋಧಿಸುತ್ತಿದ್ದಾರೆ. ಶೇ.5ರ ತಟಸ್ಥವಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.ರಾಜ್ಯ ಸರ್ಕಾರವು ಜಾತಿ ಗಣತಿ ಪುರಸ್ಕರಿಸಿ, ಜಾರಿಗೊಳಿಸದೇ 9 ವರ್ಷಗಳು ವ್ಯರ್ಥವಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಯಾರ ಒತ್ತಡಕ್ಕೂ ಮಣಿಯದೇ, ನುಡಿದಂತೆ ನಡೆಯುತ್ತೇವೆಂಬ ಘೋಷವಾಕ್ಯಗಳನ್ನು ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಹೇಳುವಂತೆ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಗಣತಿ ವರದಿಯನ್ನು ಸಚಿವ ಸಂಪುಟದಲ್ಲಿ ಅನುಮೋದಿಸಿ, ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು ಎಂದು ಜಿ.ಬಿ.ವಿನಯಕುಮಾರ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಬಳಗದ ಸದಸ್ಯರಾದ ಶಿವಕುಮಾರ ಡಿ. ಶೆಟ್ಟರ್, ಜಿ.ಷಣ್ಮುಖಪ್ಪ ಇತರರು ಇದ್ದರು.- - -
ಕೋಟ್ * ಅಭಾವೀಮ ಒತ್ತಡಕ್ಕೆ ಮಣಿಯಬೇಕಿಲ್ಲ ಜಾತಿಗಣತಿ ವರದಿ ಬಿಡುಗಡೆ ಮಾಡದಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ತರಲು ಬೆಂಗಳೂರಿನಲ್ಲಿ ಅ.22ರಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಸಭೆ ಆಯೋಜನೆಯಾಗಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಗಟ್ಟಿ ನಿರ್ಧಾರ ಕೈಗೊಳ್ಳುವವರು ಅಂತಲೇ ಹೆಸರಾಗಿದ್ದಾರೆ. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೇ ವೈಜ್ಞಾನಿಕವಾಗಿ ಸಿದ್ಧಗೊಂಡ ಜಾತಿಗಣತಿ ವರದಿಯನ್ನು ಸಿಎಂ ನೇತೃತ್ವದ ಸರ್ಕಾರ ಬಹಿರಂಗಪಡಿಸಲಿ- ಜಿ.ಬಿ.ವಿನಯಕುಮಾರ, ಸಂಸ್ಥಾಪಕ ರಾಜ್ಯಾಧ್ಯಕ್ಷ, ಸ್ವಾಭಿಮಾನಿ ಬಳಗ
- - - -18ಕೆಡಿವಿ1:ದಾವಣಗೆರೆಯಲ್ಲಿ ಶುಕ್ರವಾರ ಸ್ವಾಭಿಮಾನಿ ಬಳಗ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಿ.ಬಿ.ವಿನಯಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.