18 ದಿನ ಮೊದಲೇ ನೀರು ಬಿಡಿ

| Published : Jul 25 2024, 01:17 AM IST

ಸಾರಾಂಶ

ಗೊರೂರು ಡ್ಯಾಂ ನಿಂದ ಪ್ರತಿವರ್ಷ ಜುಲೈ 19 ರ ಬದಲಿಗೆ ಜು.1ರಂದೇ ನೀರು ಬಿಡುಗಡೆ ಮಾಡಬೇಕು.

ಕನ್ನಡಪ್ರಭ ವಾರ್ತೆ, ತುಮಕೂರು

ಗೊರೂರು ಡ್ಯಾಂ ನಿಂದ ಪ್ರತಿವರ್ಷ ಜುಲೈ 19 ರ ಬದಲಿಗೆ ಜು.1ರಂದೇ ನೀರು ಬಿಡುಗಡೆ ಮಾಡಬೇಕು. ಇದರಿಂದಾಗಿ ಕೊನೆಯ ಭಾಗದ ರೈತರಿಗೆ ಸರಿಯಾದ ಸಮಯಕ್ಕೆ ನೀರು ಸಿಗಲಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಹೇಮಾವತಿ ನಾಲೆಗಳಿಗೆ ನೀರು ಬಿಡುಗಡೆ ಮಾಡಲಾಗಿದೆ. ಆದರೆ ಈ ವೇಳೆ ಕಾಮಗಾರಿ ಸಹ ನಡೆಯುತ್ತಿರುವುದರಿಂದ ನೀರು ಪೋಲಾಗುವ ಅಥವಾ ಕೊನೆಯ ಭಾಗಕ್ಕೆ ತಡವಾಗಿ ತಲುಪುವ ಸಾಧ್ಯತೆಗಳಿವೆ. ಆದ್ದರಿಂದ 19 ದಿನ ಮೊದಲು ನೀರು ಬಿಡಬೇಕು ಎಂದು ಆಗ್ರಹಿಸಿದರು.

ಜೂನ್ ತಿಂಗಳೊಳಗೆ ನಾಲಾ ವ್ಯಾಪ್ತಿಯ ಎಲ್ಲಾ ಕಾಮಗಾರಿಗಳನ್ನು ಒಂದು ನಿರ್ದಿಷ್ಟ ಹಂತಕ್ಕೆ ತರಬೇಕು. ನೀರು ಬಿಡುವ ಸಂದರ್ಭದಲ್ಲಿ ಕಾಮಗಾರಿ ಮಾಡುವುದು, ಹೂಳು ತೆಗೆಸುವುದು ಇತ್ಯಾದಿ ನಿರ್ವಹಣೆ ಕೆಲಸಗಳನ್ನು ಮಾಡುವುದರಿಂದ ಸಮಸ್ಯೆ ಆಗುತ್ತದೆ. ಈ ಬಗ್ಗೆ ಒಂದು ನಿರ್ದಿಷ್ಟ ಆದೇಶ ಹೊರಡಿಸಿ ಆದಷ್ಟು ಬೇಗ ಕಾಮಗಾರಿಯನ್ನು ಮುಗಿಸಬೇಕು ಎಂದು ತಿಳಿಸಿದರು.

ದಿನಾಂಕ 1-7-24ಕ್ಕೆ ಡ್ಯಾಮ್‌ನಲ್ಲಿ ಸುಮಾರು 13.40 ಟಿಎಂಸಿ ನೀರು ಇತ್ತು. ಜು.1 ರಿಂದ ನೀರು ಹರಿಸಲು ಒತ್ತಾಯ ಮಾಡಿದರೂ ಬಿಡಲಿಲ್ಲ. ತದನಂತರ ಮಳೆ ಜಾಸ್ತಿಯಾದ ಕಾರಣ ಡ್ಯಾಮ್‌ಗೆ ನೀರಿನ ಒಳ ಹರಿವು ಹೆಚ್ಚಾದ್ದರಿಂದ ಈಗ ನೀರನ್ನು ಬಿಡಲಾಗಿದೆ.ಹೇಮಾವತಿ ಎಡದಂಡೆ ನಾಲೆ 72 ಕಿ.ಮೀ.ಯಲ್ಲಿ ಎರಡು ಭಾಗವಾಗಿ ಒಂದು ನಾಲೆ ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರ ಕಡೆಗೆ ಹೋದರೆ ಮತ್ತೊಂದು ನಾಲೆಯಿಂದ ತುಮಕೂರು ಭಾಗಕ್ಕೆ ನೀರು ಹರಿಸಲಾಗುತ್ತದೆ. ಹೇಮಾವತಿ ಎಡದಂಡೆ ನಾಲೆಯ ಒಟ್ಟು ನೀರು ಹರಿಯುವ ಸಾಮರ್ಥ್ಯ 3 ಸಾವಿರ ಕ್ಯೂಸೆಕ್ಸ್ ವಿನ್ಯಾಸ ಮಾಡಲಾಗಿದ್ದು, ಇದರಲ್ಲಿ ತುಮಕೂರು ವಲಯಕ್ಕೆ 2500 ಕ್ಯೂಸೆಕ್ಸ್, ಮಂಡ್ಯ ಜಿಲ್ಲೆಗೆ 1500 ಕ್ಯೂಸೆಕ್ಸ್ ನೀರು ಹರಿಯಲು ಕಾಲುವೆ ವಿನ್ಯಾಸ ಮಾಡಲಾಗಿದೆ ಎಂದರು. ಬಾಗೂರು ನವಿಲಿ ಸುರಂಗದವರೆಗೆ ಪ್ರಸ್ತುತ ಗೊರೂರು ವಲಯ ನಿರ್ವಹಣೆ ಮಾಡುತ್ತಿದ್ದರೆ ಇದೆ ಸುರಂಗದ ಎಕ್ಸಿಟ್ ಭಾಗದಿಂದ ಮುಂದಕ್ಕೆ ತುಮಕೂರು ವಲಯ ನಿರ್ವಹಣೆ ಮಾಡುತ್ತಿದೆ ಎಂದರು.ರಾಮನಗರ ಜಿಲ್ಲೆಗೆ ನೀರು ಹರಿಸಲು ಶ್ರೀರಂಗ ನೀರಾವರಿ ಯೋಜನೆ ಹೆಸರಿನಲ್ಲಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಮಾಡುತ್ತಿರುವುದು ಅವೈಜ್ಞಾನಿಕವಾಗಿದ್ದು ಈ ರೀತಿಯ ಪರಿಕಲ್ಪನೆ ಯಾವುದೇ ಯೋಜನೆಯಲ್ಲೂ ಇರುವುದಿಲ್ಲ ಎಂದರು.ತುಮಕೂರು ನಾಲೆಯಲ್ಲಿ ನೀರು ಹರಿಸಿದಾಗ ಮೊದಲು ಕೊನೆಯ ಭಾಗಕ್ಕೆ ಅಂದರೆ ಕುಣಿಗಲ್ ಭಾಗಕ್ಕೆ ನೀರು ತೆಗೆದುಕೊಂಡು ಹೋಗಬಹುದು ಎಂದರು.ಮುಖಂಡರಾದ ಎಂ.ಪಿ.ಪ್ರಸನ್ನಕುಮಾರ್, ಕೆ.ಪಿ.ಮಹೇಶ್, ಪ್ರಭಾಕರ್, ಯತೀಶ್‌ಕುಮಾರ್, ಕೆ.ಹರೀಶ್, ಉಮಾಶಂಕರ್, ಶಬ್ಬಿರ್ ಅಹಮದ್, ರಾಮಚಂದ್ರರಾವ್, ಗಣೇಶ್, ಸೈಯಸ್ ಅಬೂಬ್, ಮದನ್‌ಸಿಂಗ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.ಟಿಂ

ಹೇಮಾವತಿ ನೀರು: ಜಿಲ್ಲಾಧಿಕಾರಿ

ಹೇಮಾವತಿ ಯೋಜನೆ ವ್ಯಾಪ್ತಿಯ ಜಿಲ್ಲೆ ನಾಲೆಗಳಿಗೆ ಈಗಾಗಲೇ ನೀರು ಹರಿಯುತ್ತಿದ್ದು, ತುಮಕೂರು ನಗರಕ್ಕೆ ಪ್ರವೇಶಿಸಿದೆ. ಪ್ರಸ್ತುತ ಕಡಿಮೆ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಯಾವುದೇ ಸಮಯದಲ್ಲಿ ನೀರಿನ ಒಳಹರಿವು ಹೆಚ್ಚಳವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಶಾಲಾ ಮಕ್ಕಳ ಮೇಲೆ ಪೋಷಕರು ನಿಗಾವಹಿಸಬೇಕು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳು ಶಾಲೆ ಬಿಟ್ಟ ತಕ್ಷಣ ಮನೆ ಸೇರಬೇಕು. ನಾಲೆ ನೀರಿನಲ್ಲಿ ಈಜಲು ಹೋಗಬಾರದು. ನಾಲೆಯ ಬಳಿ ಸುಳಿದಾಡದಂತೆ ಎಚ್ಚರಿಕೆ ವಹಿಸಬೇಕೆಂದು ಶಾಲಾ ಮಕ್ಕಳಿಗೆ ತಿಳಿಹೇಳುವಂತೆ ಎಲ್ಲ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಿರ್ದೇಶಿಸಿದರು.

ಇಂದಿನ ವರದಿಯನುಸಾರ ತುಮಕೂರು ನಾಲಾ ವಲಯದಲ್ಲಿ 1150 ಕ್ಯೂಸೆಕ್ಸ್ ನೀರು ಹರಿಯುತ್ತಿದ್ದು, ಗರಿಷ್ಠ ಪ್ರಮಾಣದ ನೀರನ್ನು ಕೆರೆ-ಕಟ್ಟೆಗಳಿಗೆ ಭರ್ತಿ ಮಾಡಲು ಕ್ರಮಕೈಗೊಳ್ಳಬೇಕು. ಕಳೆದ ವರ್ಷದಲ್ಲಿ ಜಿಲ್ಲೆಗೆ ಅಗತ್ಯವಿರುವ ನೀರು ಪಡೆಯಲು ಸಾಧ್ಯವಾಗದೆ ನೀರಿನ ಸಮಸ್ಯೆ ಎದುರಾಗಿತ್ತು. ಈ ವರ್ಷ ಜಿಲ್ಲೆಗೆ ನೀರಿನ ಸಮಸ್ಯೆ ಬಾರದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.