ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು ಎಮ್ ಎಮ್ ಎಮ್ ಗ್ರೂಪ್ಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣವಾದ ‘ಮಿಸ್ಟರ್ ಮದಿಮಯೆ’ ತುಳು ಸಿನಿಮಾ ಮಂಗಳೂರಿನ ಭಾರತ್ ಸಿನಿಮಾಸ್‌ನಲ್ಲಿ ಶುಕ್ರವಾರ ಬಿಡುಗಡೆಯಾಯಿತು. ಅತಿಥಿಗಳು ದೀಪ ಬೆಳಗಿಸುವ ಮೂಲಕ ಸಿನಿಮಾ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭಕೋರಿದರು.
ಬಳಿಕ ಮಾತಾಡಿದ ಆರ್.ಕೆ. ನಾಯರ್ ಅವರು, ಇಂದು ದೇಶ ವಿದೇಶಗಳಲ್ಲಿ ತುಳು ಸಿನಿಮಾ ಬಿಡುಗಡೆಯಾಗುತ್ತಿದೆ. ತುಳುವರು ವಿಶ್ವದೆಲ್ಲೆಡೆ ಸದ್ದು ಮಾಡುತ್ತಿದ್ದಾರೆ. ತುಳು ಭಾಷೆ ಬೆಳವಣಿಗೆಗೆ ಇದರಿಂದ ಸಹಾಯವಾಗುತ್ತದೆ. ಮಿ. ಮದಿಮಯೆ ಸಿನಿಮಾ ಗೆಲ್ಲಲಿ. ತುಳು ಭಾಷೆಯಲ್ಲಿ ಇನ್ನೂ ಹೆಚ್ಚಿನ ಸಿನಿಮಾಗಳು ಬರಲಿ ಎಂದು ಶುಭ ಹಾರೈಸಿದರು.ಚಿತ್ರ ನಿರ್ಮಾಪಕ ಟಿ.ಎ. ಶ್ರೀನಿವಾಸ್ ಮಾತನಾಡಿ, ಇಂದು ತುಳು ಸಿನಿಮಾಗಳಿಗೆ ಉಡುಪಿ, ಮಂಗಳೂರಿನಲ್ಲಿ ಥಿಯೇಟರ್ ಕೊಡುತ್ತಿಲ್ಲ ಅನ್ನುವುದು ಬೇಸರದ ವಿಚಾರ. ಇಂತಹ ಬೆಳವಣಿಗೆ ನಿಲ್ಲಬೇಕು. ತುಳು ಭಾಷೆಯ ಸಿನಿಮಾಗಳಿಗೆ ಮೊದಲ ಪ್ರಾಶಸ್ತ್ಯ ಸಿಗಬೇಕು. ತುಳುವರು ಒಗ್ಗಟ್ಟಾಗಿ ಸಿನಿಮಾವನ್ನು ಗೆಲ್ಲಿಸಬೇಕು ಎಂದರು.
ಬಳಿಕ ಮಾತಾಡಿದ ಹಾಸ್ಯನಟ ಭೋಜರಾಜ್ ವಾಮಂಜೂರ್ ಮಾತಾಡಿ, ತುಳು ಭಾಷೆಯಲ್ಲಿ ಹೊಸಬರ ತಂಡ ಕಷ್ಟಪಟ್ಟು ಮಾಡಿರುವ ಸಿನಿಮಾ ಮಿಸ್ಟರ್ ಮದಿಮಯೆ. ಎಲ್ಲರೂ ಸಿನಿಮಾ ನೋಡಿ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಎಂದರು.ತುಳು ಚಲನ ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್ ಧನರಾಜ್, ಪ್ರಕಾಶ್ ಪಾಂಡೇಶ್ವರ್, ಇಸ್ಮಾಯಿಲ್ ಮೂಡುಶೆಡ್ಡೆ, ಮುಹಮ್ಮದ್ ಆತಿಫ್, ತಸ್ಲೀಮ್, ತಮ್ಮ ಲಕ್ಷ್ಮಣ, ರಾಜೇಶ್ ಗುರೂಜಿ, ರಾಹುಲ್ ಅಮೀನ್, ನಾಯಕ ನಟ ಸಾಯಿಕೃಷ್ಣ ಕುಡ್ಲ, ನಾಯಕಿ ಶ್ವೇತಾ ಸುವರ್ಣ, ಜ್ಯೋತಿಷ್ ಶೆಟ್ಟಿ, ನಿರ್ಮಾಪಕ ಮಿಥುನ್ ಕೆ ಎಸ್, ಚೇತನ್, ರಾಜೇಶ್ ಸೆರಾವೋ, ನಿರ್ದೇಶಕ ನವೀನ್ ಕೆ. ಪೂಜಾರಿ ಮತ್ತಿತರರು ಇದ್ದರು. ಮಧುರಾಜ್ ಗುರುಪುರ ಕಾರ್ಯಕ್ರಮ ನಿರೂಪಿಸಿದರು.ಕರಾವಳಿಯಾದ್ಯಂತ ಏಕಕಾಲಕ್ಕೆ ರಿಲೀಸ್:ಮಿಸ್ಟರ್ ಮದಿಮಯೆ ಸಿನಿಮಾ ಮಂಗಳೂರಿನಲ್ಲಿ ಬಿಗ್ ಸಿನಿಮಾಸ್, ಸಿನಿಪೊಲಿಸ್, ಪಿವಿಆರ್, ಸುರತ್ಕಲ್ ನಲ್ಲಿ ಸಿನಿಗ್ಯಾಲಕ್ಸಿ, ಪಡುಬಿದ್ರಿಯಲ್ಲಿ ಬಿಗ್ ಸಿನಿಮಾಸ್, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್ , ಬೆಳ್ತಂಗಡಿಯಲ್ಲಿ ಭಾರತ್ , ಸುಳ್ಯದಲ್ಲಿ ಸಂತೋಷ್ ಚಿತ್ರಮಂದಿರದಲ್ಲಿ ಸಿನಿಮಾ ತೆರೆ ಕಂಡಿದೆ. ಮಂಗಳೂರಿನ ರೂಪವಾಣಿ ಮತ್ತು ಉಡುಪಿಯ ಕಲ್ಪನಾ ಥಿಯೇಟರ್‌ನಲ್ಲಿ ಜ.19ರಂದು ಬಿಡುಗಡೆಗೊಳ್ಳಲಿದೆ.