ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ:ಶಿವಾನಂದ ಗುಡಗನಟ್ಟಿ

| Published : Aug 29 2024, 12:46 AM IST

ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ:ಶಿವಾನಂದ ಗುಡಗನಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಬರುವ ಗಣೇಶ ಹಬ್ಬವನ್ನು ಅತೀ ವಿಜೃಂಭಣೆಯಿಂದ ಕಾನೂನಿನ ಅಡಿಯಲ್ಲಿ ಆಚರಿಸಲು ಎಲ್ಲ ಸಹಕಾರವಿದೆ. ಆದರೆ, ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕಾಗುವುದು ಎಂದು ಸಿಪಿಐ ಶಿವಾನಂದ ಗುಡಗನಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಬರುವ ಗಣೇಶ ಹಬ್ಬವನ್ನು ಅತೀ ವಿಜೃಂಭಣೆಯಿಂದ ಕಾನೂನಿನ ಅಡಿಯಲ್ಲಿ ಆಚರಿಸಲು ಎಲ್ಲ ಸಹಕಾರವಿದೆ. ಆದರೆ, ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕಾಗುವುದು ಎಂದು ಸಿಪಿಐ ಶಿವಾನಂದ ಗುಡಗನಟ್ಟಿ ಹೇಳಿದರು.

ಸ್ಥಳೀಯ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಪೊಲೀಸ್‌ ಇಲಾಖೆಯಿಂದ ನಡೆದ ಶಾಂತಿ ಪಾಲನೆ ಸಭೆಯಲ್ಲಿ ಮಾತನಾಡಿದ ಅವರು, ಒಮ್ಮೆ ಕಾನೂನು ಉಲ್ಲಂಘಿಸಿ ಪ್ರಕರಣದಡಿಯಲ್ಲಿ ಸಿಲುಕಿದರೇ ತೊಂದರೆ ಅನುಭವಿಸುವರು ನೀವೆಯಾಗುತ್ತೀರಿ, ಯಾರೂ ಜವಾಬ್ದಾರರಲ್ಲ. ಅದಕ್ಕಾಗಿ ಅದನ್ನೂ ಗಮನದಲ್ಲಿಟ್ಟುಕೊಂಡು ನಿಯಮಗಳ ಪ್ರಕಾರ ಯಾರಿಗೂ ತೊಂದರೆಯಾಗದಂತೆ ಹಬ್ಬವನ್ನು ಆಚರಣೆ ಮಾಡಬೇಕು. ನಿಮಗೆ ಎಲ್ಲ ಇಲಾಖೆಯಿಂದ ಒಂದೇ ದಿವಸದಲ್ಲಿ ಪರವಾಣಿಗೆ ಸಿಗುವಂತೆ ವ್ಯವಸ್ಥೆ ಕಲ್ಪಿಸುತ್ತೇವೆ. ಎಲ್ಲ ಮಂಡಳಿಯವರು ಪರವಾನಿಗೆಯನ್ನು ಪಡೆದು ನಿಗದಿಪಡಿಸಿದ ಸಮಯದಲ್ಲಿಯೇ ಗಣಪತಿಯನ್ನು ತರುವ, ವಿಸರ್ಜನೆಗೊಳಿಸುವ ಮಾರ್ಗ, ಸ್ಥಳವನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಲು ಅವಕಾಶವಿರುವುದಿಲ್ಲ ಮತ್ತು ಗಣಪತಿಯ ವಿಸರ್ಜನಾ ಸಮಯಕ್ಕೆ ಎರಡು ದಿವಸ ಮುಂಚಿತವಾಗಿ ಗಣಪತಿಯ ಆಶೀರ್ವಾದದ ವಸ್ತುಗಳನ್ನು ಸವಾಲ್ ಮಾಡಿ ರಾತ್ರಿ 10 ಗಂಟೆಯೊಳಗೆ ವಿಸರ್ಜನಾ ಕಾರ್ಯವನ್ನು ಮುಗಿಸಬೇಕು. ಪತ್ರಿಕೆಗಳು ಅಧಿಕೃತವಿರುವಂತೆ ಸಾಮಾಜಿಕ ಜಾಲ ತಾಣಗಳು ಅಧಿಕೃತವಾಗಿರುವುದಿಲ್ಲ. ಇವುಗಳಲ್ಲಿ ಬರುವ ವಿಷಯಗಳಿಗೆ ಕಿವಿಗೊಡಬೇಡಿ. ಅವುಗಳು ಆಧಾರ ರಹಿತವಾಗಿರುತ್ತವೆ ಎಂದು ಸೂಚನೆ ನೀಡಿದರು.

ಪಿಎಸೈಗಳಾದ ಪ್ರವೀಣ ಗಂಗೋಳ, ಸುಮಾ ಗೋರಬಾಳ ಮಾತನಾಡಿ, ಗಣಪತಿ ಮಂಡಳಿಯವರು ಗಣಪತಿ ಕೂಡಿಸಲು ಪಂಚಾಯತಿ, ಹೆಸ್ಕಾಂ, ಪೊಲೀಸ್‌ ಇಲಾಖೆಯಿಂದ ಪರವಾನಿಗೆ ಪಡೆಯಬೇಕು. ಡಿಜೆ, ಡಾಲ್ಬಿ ಹಚ್ಚಲು ಅವಕಾಶವಿರುವುದಿಲ್ಲ. ಸ್ಪೀಕರ್ ಹಚ್ಚಲು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಅವಕಾಶವಿರುತ್ತದೆ. ಮಂಟಪದಲ್ಲಿ ಅಶ್ಲೀಲ ಹಾಡುಗಳನ್ನು, ಜೂಜು ಮುಂತಾದ ಆಟಗಳಿಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೇ ಕ್ರಮ ಜರುಗಿಸಬೇಕಾಗುತ್ತದೆ. ವಾಹನಗಳು ಸಂಚರಿಸಲು ತೊಂದರೆಯಾಗದಂತೆ ಮಂಟಪವನ್ನು ನಿರ್ಮಿಸಬೇಕು. ದೇವಸ್ಥಾನದಲ್ಲಿ ಗಣಪತಿಗಳನ್ನು ಕೂಡಿಸುವವರು ದೇವಸ್ಥಾನಗಳ ಕಮಿಟಿಯವರಿಂದ ಪರವಾನಿಗೆ ಪತ್ರ ತರುವುದಾಗಬೇಕು. ಎಲ್ಲ ಮಂಡಳಿಯವರು ನಿಯಮದಂತೆ ಹಬ್ಬವನ್ನು ಆಚರಣೆ ಮಾಡಬೇಕು ಎಂದರು.

ತಹಸೀಲ್ದಾರ್‌ ರವೀಂದ್ರ ಹಾದಿಮನಿ, ಪಪಂ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ, ಹೆಸ್ಕಾಂ ಎಸ್‌ಒ ಶ್ರೀಶೈಲ್ ಸವದತ್ತಿ ಮಾತನಾಡಿದರು. ಮುಖಂಡರಾದ ದಿನೇಶ ವಳಸಂಗ, ಬಸರವಾಜ ಸಂಗೋಳ್ಳಿ, ಅಬ್ದುಲ್‌ಸತ್ತಾರ ಗಡಕರಿ, ಬಸವರಾಜ ಕೋಲಕಾರ, ಶಿವು ಹಿರೇಮಠ, ಸೋಮಶೇಖರ ತೇಗೂರ ಮಾತನಾಡಿ, ಪರವಾನಿಗೆ ಪಡೆಯಲು ಸಿಂಗಲ್ ವಿಂಡೋ ವ್ಯವಸ್ಥೆ, ವಿಸರ್ಜನೆಗೆ ಕೃತಕ ನಾಲ್ಕು ಹೊಂಡಗಳನ್ನು ನಿರ್ಮಿಸಿ ಎಲ್ಲ ವಿಸರ್ಜನಾ ಸ್ಥಳಗಳಿಗೆ ಲೈಟಿಂಗ್ ವ್ಯವಸ್ಥೆ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಬೇಕೆಂದು ಕೇಳಿಕೊಂಡರು. ಅಫರಾದ ವಿಭಾಗದ ಪಿಎಸೈ ಪ್ರವೀಣ ಕೋಟಿ ನಿರೂಪಿಸಿ, ವಂದಿಸಿದರು.