- ಮಾಯಕೊಂಡ ಕ್ಷೇತ್ರದ ಹರೋಸಾಗರದಲ್ಲಿ ₹4 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿಪೂಜೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಯಾವುದೇ ಕೆಲಸವಾಗಲಿ, ಗುಣಮಟ್ಟದಿಂದ ಕೂಡಿರಬೇಕು. ಕಾಮಗಾರಿಯ ನಂತರ ಪರಿಶೀಲನೆ ಮಾಡಲಾಗುವುದು. ಕಳಪೆ ಕಂಡುಬಂದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್.ಬಸವಂತಪ್ಪ ಗುತ್ತಿಗೆದಾರ ಮತ್ತು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಚನ್ನಗಿರಿ ತಾಲೂಕಿನ ಹರೋಸಾಗರ ಗ್ರಾಮದಲ್ಲಿ ಭಾನುವಾರ ಲೋಕೋಪಯೋಗಿ ಇಲಾಖೆ ವತಿಯಿಂದ ₹4 ಕೋಟಿ ವೆಚ್ಚದ ಹರೋಸಾಗರ- ಕೋಟೆಹಾಳ್- ಮರಬನಹಳ್ಳಿ ಗ್ರಾಮಗಳ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.


ಸಾರ್ವಜನಿಕರಿಗೆ ಸುರಕ್ಷಿತ ಮತ್ತು ದೀರ್ಘಕಾಲ ಬಾಳುವ ರಸ್ತೆಗಳು ಅಗತ್ಯವಾಗಿವೆ. ಕಾಮಗಾರಿಗಳಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಸಹಿಸಲ್ಲ ಎಂದು ಎಚ್ಚರಿಕೆ ನೀಡಿದರು. ರಸ್ತೆ ನಿರ್ಮಾಣದಲ್ಲಿ ಗುಣಮಟ್ಟದ ವಸ್ತುಗಳನ್ನು ಬಳಸುವುದು ಮತ್ತು ಸಮಯಕ್ಕೆ ಸರಿಯಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಅತ್ಯಂತ ಮುಖ್ಯ. ಕಾಮಗಾರಿ ವಿಳಂಬವಾದರೆ ಸಾರ್ವಜನಿಕರು ನಮ್ಮ ಗಮನಕ್ಕೆ ತರಬೇಕು ಎಂದರು.

ಕಾಮಗಾರಿ ಮೇಲ್ವಿಚಾರಣೆಯನ್ನು ಅಧಿಕಾರಿಗಳು ನಿಯಮಿತವಾಗಿ ನಡೆಸಬೇಕು ಮತ್ತು ಯಾವುದೇ ದೂರುಗಳು ಬಂದರೆ ತಕ್ಷಣ ಕ್ರಮ ಕೈಗೊಳ್ಳಬೇಕು. ಡಾಂಬರ್‌ ಹಾಕುವಾಗ ಜಲ್ಲಿ ಹಾಗೂ ಇತರೆ ಸಾಮಗ್ರಿಗಳನ್ನು ಸಮಪ್ರಮಾಣದಲ್ಲಿ ಬಳಸಬೇಕು. ರಸ್ತೆ ಕಾಮಗಾರಿ ಮುಗಿದ ಕೆಲವೇ ತಿಂಗಳಲ್ಲಿ ಕಿತ್ತು ಹೋಗುವಂತಾಗಬಾರದು. ಹತ್ತಾರು ವರ್ಷಗಳ ಕಾಲ ಶಾಶ್ವತವಾಗಿ ಉಳಿಯುವ ಕೆಲಸ ಮಾಡಬೇಕು. ಗುತ್ತಿಗೆದಾರರು ಮತ್ತು ಅಧಿಕಾರಿಗಳು ಗುಣಮಟ್ಟದ ಕಾಮಗಾರಿ ನಡೆಸಬೇಕೆಂದು ತಾಕೀತು ಮಾಡಿದರು.

ಕ್ಷೇತ್ರದ ಪ್ರಮುಖ ರಸ್ತೆಗಳು ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಕ್ಷೇತ್ರದಲ್ಲಿ ಈಗಾಗಲೇ ಕೆಲವು ಪ್ರಮುಖ ರಸ್ತೆಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳುತ್ತಿವೆ. ನೂತನವಾಗಿ ನಿರ್ಮಾಣಗೊಂಡ ರಸ್ತೆಗಳನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಎಇಇ ರವಿಕುಮಾರ, ಜೆಇ ಧನರಾಜ್, ಗುತ್ತಿಗೆದಾರ ಮಹೇಶ್, ಗ್ರಾಮದ ಮುಖಂಡರಾದ ಶಿವಮೂರ್ತಿ, ಗಿರೀಶ್, ಹಾಲೇಶಪ್ಪ, ಗಂಗಾಧರ ಸ್ವಾಮಿ, ಪ್ರಕಾಶ್‌ ಗೌಡ್ರು, ಸಂದೀಪ್ ಪಾಟೀಲ್, ಅವಿನಾಶ್ ಪೂಜಾರ್, ಟಿ.ಎಸ್. ಬಸವರಾಜ್, ಹರಲಿಪುರ ರವಿಕುಮಾರ್, ಇದಾಯತ್, ಬಸವಾಪಟ್ಟಣ ಬಿ.ಜಿ.ಅಮಿತ್, ಶಾಹಿದ್ ಇತರರು ಉಪಸ್ಥಿತರಿದ್ದರು.

- - -

(ಕೋಟ್‌) ರಸ್ತೆಗಳ ಗುಣಮಟ್ಟವನ್ನು ಕಡ್ಡಾಯವಾಗಿ ಕಾಪಾಡಬೇಕು. ಯಾವುದೇ ಕಾಮಗಾರಿಗಳು ಕೈಗೊಂಡರೆ ದೀರ್ಘಕಾಲ ಶಾಶ್ವತವಾಗಿ ಉಳಿಯುವಂತಿರಬೇಕು. ಯಾವುದೇ ಕಾರಣಕ್ಕೂ ಸರ್ಕಾರದ ಹಣ ವ್ಯರ್ಥವಾಗಬಾರದು.

- ಕೆ.ಎಸ್.ಬಸವಂತಪ್ಪ, ಶಾಸಕ, ಮಾಯಕೊಂಡ ಕ್ಷೇತ್ರ.

- - -

-3ಕೆಡಿವಿಜಿ31:

ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಚನ್ನಗಿರಿ ತಾಲೂಕಿನ ಹರೋಸಾಗರ ಗ್ರಾಮದಲ್ಲಿ 4 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಕೆ.ಎಸ್.ಬಸವಂತಪ್ಪ ಭೂಮಿಪೂಜೆ ನೆರವೇರಿಸಿದರು.