ಕೈಕೊಟ್ಟ ಮಳೆ, ತಗ್ಗಿದ ಅಂತರ್ಜಲ: ಕೊಡಗಿನ ಬೆಳೆಗಾರರು ಕಂಗಾಲು

| Published : May 02 2024, 12:16 AM IST

ಕೈಕೊಟ್ಟ ಮಳೆ, ತಗ್ಗಿದ ಅಂತರ್ಜಲ: ಕೊಡಗಿನ ಬೆಳೆಗಾರರು ಕಂಗಾಲು
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗಿನಲ್ಲಿ ಬೇಸಿಗೆಯ ನಡುವೆ ಬರಬೇಕಾಗಿದ್ದ ಮಳೆ ದೂರವಾಗುತ್ತಿದ್ದಂತೆ ಬಿಸಿಲ ಧಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಕಾಫಿ ತೋಟಗಳನ್ನು, ಕಾಳುಮೆಣಸು ಬಳ್ಳಿಗಳನ್ನು ರಕ್ಷಿಸಿಕೊಳ್ಳಲು ಬೆಳೆಗಾರರು ಕೊಳವೆಬಾವಿಗಳಿಗೆ ಮೊರೆ ಹೋಗಿದ್ದು, ಅಲ್ಲೂ ಕೂಡ ಅಂತರ್ಜಲ ಕಡಿಮೆಯಾಗುವ ಮೂಲಕ ರೈತರನ್ನು ಆತಂಕಕ್ಕೀಡು ಮಾಡಿದೆ.

ಮುರಳೀಧರ್‌ ಶಾಂತಳ್ಳಿ

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಸುಡುಬಿಸಿಲು, ಮಳೆ ಗೈರು ಸೋಮವಾರಪೇಟೆ ತಾಲೂಕಿನಲ್ಲಿ ಕಾಫಿ, ಕಾಳುಮೆಣಸು ಸೇರಿದಂತೆ ಇತರೆ ಕೃಷಿ ಫಸಲಿನ ಮೇಲೆ ದುಷ್ಪರಿಣಾಮ ಬೀರಿದೆ. ಬಹುತೇಕ ನೀರಾವರಿ ಕೆರೆಗಳು, ಹೊಳೆ, ತೊರೆಗಳು, ಕೊಳವೆಬಾವಿಗಳು ಬತ್ತಿಹೋಗಿದ್ದು ರೈತರಿಗೆ ಸಮಸ್ಯೆಯೊಂದಿಗೆ ಆತಂಕಕ್ಕೆ ಈಡುಮಾಡಿದೆ.

ಇದೀಗ ದೇವರೇ ಗತಿ ಎಂದು ಮನೆದೇವರು ಮತ್ತು ಗ್ರಾಮದೇವರಿಗೆ ಮೊರೆ ಹೋಗುತ್ತಿದ್ದಾರೆ.

ಬೇಸಿಗೆಯ ನಡುವೆ ಬರಬೇಕಾಗಿದ್ದ ಮಳೆ ದೂರವಾಗುತ್ತಿದ್ದಂತೆ ಬಿಸಿಲ ಧಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಕಾಫಿ ತೋಟಗಳನ್ನು, ಕಾಳುಮೆಣಸು ಬಳ್ಳಿಗಳನ್ನು ರಕ್ಷಿಸಿಕೊಳ್ಳಲು ಬೆಳೆಗಾರರು ಕೊಳವೆಬಾವಿಗಳಿಗೆ ಮೊರೆ ಹೋಗಿದ್ದು, ಅಲ್ಲೂ ಕೂಡ ಅಂತರ್ಜಲ ಕಡಿಮೆಯಾಗುವ ಮೂಲಕ ರೈತರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ.

ರೈತರು ದಿನವಿಡೀ ಕಾಫಿ ಗಿಡಗಳಿಗೆ ನೀರು ಹಾರಿಸುತ್ತಿದ್ದಾರೆ. ಕಾಫಿ ತೋಟಗಳಲ್ಲಿರುವ ಕಾಳುಮೆಣಸು ಬಳ್ಳಿಗಳು ಒಣಗುತ್ತಿದ್ದು, ಅವುಗಳಿಗೂ ನೀರಿನ ಅವಶ್ಯಕತೆ ಹೆಚ್ಚಾಗಿದೆ.

ಅತೀ ಹೆಚ್ಚು ಅರೇಬಿಕಾ ಕಾಫಿ ಬೆಳೆಯುವ ಶನಿವಾರಸಂತೆ, ಕೊಡ್ಲಿಪೇಟೆ, ಸೋಮವಾರಪೇಟೆ ಕಸಬಾ ಹೋಬಳಿಗಳಲ್ಲಿ ಹೆಚ್ಚಿನ ಬೆಳೆಗಾರರು ಬೋರ್‌ವೆಲ್‌ಗಳಿಂದ ಸ್ಪ್ರಿಂಕ್ಲರ್‌ ಮೂಲಕ ನೀರು ಹಾಯಿಸಿ ಹೂ ಅರಳಿಸಿದ್ದಾರೆ. ಈಗ ಬ್ಯಾಕಿಂಗ್ ನೀರು ಕೊಡದಿದ್ದರೆ, ಕಾಫಿ ಗಿಡಗಳು ಒಣಗುವ ಆತಂಕ ಎದುರಾಗಿರುವುದರಿಂದ ನೀರು ಕೊಡಬೇಕಾಗಿದೆ.

ಮಳೆ ದೂರವಾಗಿರುವುದರಿಂದ ಅಂತರ್ಜಲ ಕಡಿಮೆಯಾಗಿ, ಬೋರ್‍ವೆಲ್‍ಗಳಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿದೆ.

ಹೊಳೆ ಹರಿವು ಬಹುತೇಕ ಸ್ತಬ್ಧ:

ಸುಂಠಿಕೊಪ್ಪ ಹೋಬಳಿಯಲ್ಲಿ ರೋಬಸ್ಟಾ ಕಾಫಿ ಹೆಚ್ಚಿದ್ದು, ಬೆಳೆಗಾರರು ನೀರಿಗಾಗಿ ಹೊಳೆ, ಕೆರೆಗಳನ್ನು ಆಶ್ರಯಿಸಿದ್ದಾರೆ. ಅತೀ ಹೆಚ್ಚಿನ ರೋಬಸ್ಟಾ ಬೆಳೆಗಾರರು ಹರದೂರು ಹೊಳೆ ಹಟ್ಟಿಹೊಳೆಯ ನೀರನ್ನು ಆಶ್ರಯಿಸಿದ್ದರು. ಆದರೆ ಈಗಾಗಲೆ ಇವೆರಡು ಹೊಳೆಗಳಲ್ಲಿ ನೀರಿನ ಹರಿವು ತುಂಬಾ ಕಡಿಮೆಯಾಗಿದೆ.

ನದಿ, ಹೊಳೆಗಳಲ್ಲಿ ಅಕ್ರಮವಾಗಿ ಯಂತ್ರಗಳ ಮೂಲಕ ನೀರು ತೆಗೆಯದಂತೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಬೆಳೆಗಾರರು ಆತಂಕದಲ್ಲಿದ್ದಾರೆ. ಇರುವ ಕೊಳವೆಬಾವಿಗಳಲ್ಲಿನ ನೀರು ಸಾಕಾಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಕೊಳವೆ ಬಾವಿಗಳು ಬತ್ತಿವೆ.

ತಾಲೂಕಿನಲ್ಲಿ 200 ಸಂರಕ್ಷಿತ ಕೆರೆಗಳಿದ್ದು, ಗ್ರಾಮೀಣ ಭಾಗದ ಕೆರೆಗಳು ಬತ್ತುತ್ತಿದ್ದು, ಚಿಕ್ಕಪುಟ್ಟ ಹೊಳೆ, ತೋಡುಗಳಲ್ಲಿ ನೀರು ಬತ್ತಿವೆ. ಗ್ರಾಮೀಣ ಭಾಗದ ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡಿದ್ದವರು, ಬೋರ್‌ವೆಲ್‍ಗಳಿಂದ ನೀರನ್ನು ಬಿಟ್ಟು ಮೀನನ್ನು ಉಳಿಸಿಕೊಳ್ಳುತ್ತಿದ್ದಾರೆ.

ಮಳೆ ಬೀಳದಿದ್ದರೆ ಮುಂದಿನ ಕೆಲವೆ ದಿನಗಳಲ್ಲಿ ಕೆರೆಗಳು ಸಂಪೂರ್ಣ ಬತ್ತಿ, ದನಕರುಗಳಿಗೆ ಕುಡಿಯಲು ನೀರು ಇಲ್ಲದಂತಾಗಬಹುದು ಎಂದು ಕೃಷಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಲೂಕಿನಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ 2160 ಕೊಳವೆ ಬಾವಿಗಳಿವೆ. ಕಾಫಿ ಬೆಳೆಗಾರರು ಹಾಗು ಕೃಷಿಕರು ನೀರಾವರಿಗಾಗಿ ಕೊಳವೆಬಾವಿಗಳನ್ನು ತೋಡಿಸಿಕೊಂಡು ವ್ಯವಸಾಯ ಮಾಡುತ್ತಿದ್ದಾರೆ. ವಿದ್ಯುತ್ ಸಮಸ್ಯೆಯಿಂದ ನಿಗದಿತ ಪ್ರಮಾಣದಲ್ಲಿ ಕಾಫಿ ತೋಟಗಳಿಗೆ ನೀರು ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.ಆಕಾಶದತ್ತ ಮುಖ ಮಾಡಿದ ರೈತರು:

ಸೋಮವಾರಪೇಟೆ ತಾಲೂಕಿನಲ್ಲಿ ಒಟ್ಟು 28,590 ಹೆಕ್ಟೇರ್‌ನಲ್ಲಿ ಕಾಫಿ ಬೆಳೆಯಲಾಗುತ್ತಿದೆ. 22,900 ಹೆಕ್ಟೇರ್‌ನಲ್ಲಿ ಅರೇಬಿಕಾ ಕಾಫಿ ಹಾಗು 5690 ಹೆಕ್ಟೇರ್‌ನಲ್ಲಿ ರೋಬಸ್ಟಾ ಕಾಫಿ ಬೆಳೆಯಲಾಗುತ್ತಿದೆ. ಹಿಂಗಾರು, ಮುಂಗಾರು ನಂಬಿ ರೋಬಸ್ಟಾ ಬೆಳೆಯಲು ಸಾಧ್ಯವಾಗುತ್ತಿಲ್ಲ. ನೀರಿನ ಸೌಲಭ್ಯವಿದ್ದವರೂ ಮಾತ್ರ ಬೆಳೆಯಬಹುದು. ಸರಿಯಾದ ಸಮಯದಲ್ಲಿ ನೀರು ಸಿಗದಿದ್ದರೆ, ಫಸಲು ಪಡೆಯಲು ಸಾಧ್ಯವೇ ಇಲ್ಲ.

ಈಗ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಬಿಸಿಲು ಜಾಸ್ತಿಯಾಗುತ್ತಿದ್ದು, ಕಾಫಿ ಗಿಡಗಳ ಮೇಲೆ ದುಷ್ಪರಿಣಾಮ ಹೆಚ್ಚಾಗುತ್ತಿದೆ. ತಾಪಮಾನ ಜಾಸ್ತಿಯಾದರೆ, ಬಿಳಿ ಕಾಂಡಕೊರಕ ರೋಗಬಾಧೆ ಉಲ್ಬಣಿಸಬಹುದು ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ...................

ಕಳೆದ ಐದಾರು ವರ್ಷಗಳಿಂದ ಅಕಾಲಿಕಾ ಮಳೆಯಿಂದ ಬೆಳೆಗಾರರು ನಿರಂತರ ಫಸಲು ನಷ್ಟ ಅನುಭವಿಸಿ ಸಾಲಗಾರರಾಗಿದ್ದಾರೆ. ಈ ವರ್ಷವೂ ಕಾಫಿ ಉದುರಿ ಭರಿಸಲಾರದಷ್ಟು ನಷ್ಟವಾಗಿದೆ. ಸುಡುಬಿಸಿಲು ಕಾಫಿ ತೋಟಕ್ಕೆ ಮಾರಕವಾಗಿದೆ. ಈ ವರ್ಷವೂ ಫಸಲು ನಷ್ಟ ಅನುಭವಿಸುವುದು ಗ್ಯಾರೆಂಟಿ. ಸರ್ಕಾರ ಬೆಳೆಗಾರರ ರಕ್ಷಣೆ ಮಾಡಬೇಕು. ವಾಣಿಜ್ಯ ಬ್ಯಾಂಕ್ ಹಾಗು ಸಹಕಾರ ಸಂಘಗಳಲ್ಲಿ ಮಾಡಿರುವ ಬೆಳೆಗಾರರ ಸಂಪೂರ್ಣ ಸಾಲ ಮನ್ನಾ ಮಾಡಬೇಕು.

-ಮೋಹನ್ ಬೋಪಣ್ಣ, ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ.-------------------------------------------------------

ಉಷ್ಣಾಂಶ ದಿನೇದಿನೇ ಹೆಚ್ಚಾಗುತ್ತಿದೆ. ಈಗ ಮಳೆ ಅವಶ್ಯಕವಾಗಿತ್ತು. ನೀರಿನ ಸೌಲಭ್ಯವಿದ್ದವರು ನೀರು ಹಾರಿಸಿಕೊಂಡು ಅರೇಬಿಕಾ ಕಾಫಿ ಹೂ ಅರಳಿಸಿ, ನಂತರ 20 ದಿನಕ್ಕೆ ಬ್ಯಾಕಿಂಗ್ ನೀರು ಕೊಡಬೇಕು. ನಿಗದಿತ ಪ್ರಮಾಣದಲ್ಲಿ ತೋಟಕ್ಕೆ ಸುಣ್ಣ ಹಾಕುವುದು ಒಳ್ಳೆಯದು. ಸುಣ್ಣ ಹಾಕಿ ಒಂದು ತಿಂಗಳ ನಂತರ ರಾಸಾಯನಿಕ ಗೊಬ್ಬರ ಹಾಕಬೇಕು. ಮುಂಗಾರು ಪ್ರಾರಂಭಕ್ಕೆ ಎರಡು ವಾರ ಇದ್ದಾಗ ಅರೇಬಿಕಾ ಕಾಫಿ ತೋಟದಲ್ಲಿ ಮರಕಪಾತು ಮಾಡುವುದು ಒಳ್ಳೆಯದು.

-ಡಾ.ಚಂದ್ರಶೇಖರ್, ಉಪನಿರ್ದೇಶಕರು, ಕಾಫಿ ಮಂಡಳಿ.