ಆಸ್ತಿ ತೆರಿಗೆ ಬಾಕಿದಾರರಿಗೆ ಸಿಹಿ ಸುದ್ಧಿ: ದುಬಾರಿ ದಂಡ, ಬಡ್ಡಿಗೆ ಬ್ರೇಕ್!

| Published : Feb 20 2024, 01:50 AM IST / Updated: Feb 20 2024, 01:09 PM IST

BBMP
ಆಸ್ತಿ ತೆರಿಗೆ ಬಾಕಿದಾರರಿಗೆ ಸಿಹಿ ಸುದ್ಧಿ: ದುಬಾರಿ ದಂಡ, ಬಡ್ಡಿಗೆ ಬ್ರೇಕ್!
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನಮಂಡಲ ಅಧಿವೇಶನದಲ್ಲಿ ಬಿಬಿಎಂಪಿ ಕಾಯ್ದೆ (ತಿದ್ದುಪಡಿ) 2020 ಮಂಡಿಸಲಾಗಿರುವ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ದುಬಾರಿ ದಂಡ ಹಾಗೂ ಬಡ್ಡಿ ವಿಧಿಸುವ ಪ್ರಕ್ರಿಯೆಗೆ ಬಿಬಿಎಂಪಿ ತಾತ್ಕಾಲಿಕ ಬ್ರೇಕ್‌ ಹಾಕಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಧಾನಮಂಡಲ ಅಧಿವೇಶನದಲ್ಲಿ ಬಿಬಿಎಂಪಿ ಕಾಯ್ದೆ (ತಿದ್ದುಪಡಿ) 2020 ಮಂಡಿಸಲಾಗಿರುವ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ದುಬಾರಿ ದಂಡ ಹಾಗೂ ಬಡ್ಡಿ ವಿಧಿಸುವ ಪ್ರಕ್ರಿಯೆಗೆ ಬಿಬಿಎಂಪಿ ತಾತ್ಕಾಲಿಕ ಬ್ರೇಕ್‌ ಹಾಕಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಹಾಗೂ ಸ್ವಯಂ ಘೋಷಿತ ಆಸ್ತಿ ತೆರಿಗೆ (ಎಸ್‌ಎಎಸ್‌) ಪದ್ಧತಿ ಅಡಿಯಲ್ಲಿ ತಪ್ಪು ಮಾಹಿತಿ ನೀಡಿದವರಿಗೆ ಬಿಬಿಎಂಪಿ ಕಾಯ್ದೆ 2020ರ ಪ್ರಕಾರ ನೋಟಿಸ್‌ ನೀಡುವುದರ ಜತೆಗೆ ಭಾರೀ ದಂಡ, ಬಡ್ಡಿ ವಿಧಿಸುವುದು ಹಾಗೂ ಆಸ್ತಿ ಜಪ್ತಿ ಮಾಡುವುದಕ್ಕೆ ಅವಕಾಶವಿತ್ತು. ‌

ಅದರಂತೆ ಬಿಬಿಎಂಪಿ ಕಂದಾಯ ವಿಭಾಗ 60 ಸಾವಿರಕ್ಕೂ ಹೆಚ್ಚಿನ ಆಸ್ತಿಗೆ ನೋಟಿಸ್‌ ನೀಡಿದ್ದಲ್ಲದೆ, 10 ಸಾವಿರಕ್ಕೂ ಹೆಚ್ಚಿನ ಆಸ್ತಿಗಳಿಗೆ ಬೀಗಮುದ್ರೆ ಹಾಕಿತ್ತು. 

ಬಿಬಿಎಂಪಿಯ ಈ ಕ್ರಮದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅದನ್ನು ಮನಗಂಡ ಸರ್ಕಾರ ಬಿಬಿಎಂಪಿ ಕಾಯ್ದೆ 2020ಕ್ಕೆ ತಿದ್ದುಪಡಿ ತಂದಿದ್ದು, ಅದನ್ನು ಅಧಿವೇಶನದಲ್ಲಿ ಮಂಡಿಸಿದೆ.

ವಿಧಾನಮಂಡಲದಲ್ಲಿ ತಿದ್ದುಪಡಿ ಕಾಯ್ದೆ ಅನುಮೋದನೆಗೊಂಡು ಅನುಷ್ಠಾನಕ್ಕೆ ಬರುವವರೆಗೆ ತೆರಿಗೆ ಬಾಕಿ ಮತ್ತು ಎಸ್‌ಎಎಸ್‌ ಅಡಿ ತಪ್ಪು ಮಾಹಿತಿ ನೀಡಿದ ಆಸ್ತಿಗಳಿಗೆ ನೋಟಿಸ್‌ ನೀಡುವ ಹಾಗೂ ಬೀಗಮುದ್ರೆ ಹಾಕುವ ಕ್ರಮಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.

27 ಅಧಿಕಾರಿಗಳ ವಿರುದ್ಧ ಇಲಾಖಾ ಚಾರ್ಚ್‌ಶೀಟ್‌: ಬಾಕಿ ತೆರಿಗೆ ಹಾಗೂ ಕಂದಾಯ ವಿಭಾಗದಿಂದ ನೀಡಲಾಗುವ ತೆರಿಗೆ ವಸೂಲಿ ಗುರಿಯನ್ನು ಮುಟ್ಟದ 27 ಕಂದಾಯ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಿರುವ ಆಡಳಿತ ವಿಭಾಗದ ಉಪ ಆಯುಕ್ತರು, ಕಂದಾಯ ಅಧಿಕಾರಿಗಳ ವಿರುದ್ಧ ಮುಖ್ಯ ಆಯುಕ್ತರಿಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಕಂದಾಯ ಅಧಿಕಾರಿಗಳು ನಿಗದಿ ಮಾಡಲಾಗಿದ್ದ ಗುರಿಯಂತೆ ತೆರಿಗೆ ವಸೂಲಿ ಮಾಡಿಲ್ಲ. ತಮ್ಮ ವ್ಯಾಪ್ತಿಯಲ್ಲಿ ತೆರಿಗೆ ಬಾಕಿ ಉಳಿಸಿಕೊಂಡಿರುವ 50 ಆಸ್ತಿದಾರರ ಪಟ್ಟಿಯನ್ನು ಸಮರ್ಪಕವಾಗಿ ಮಾಡಿಲ್ಲ. 

ಮೇಲಧಿಕಾರಿಗಳು ನೀಡಿರುವ ಸೂಚನೆಯನ್ನು ಕಂದಾಯ ಅಧಿಕಾರಿಗಳು ಪಾಲಿಸಿಲ್ಲ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಸಂಘ ಆಕ್ರೋಶ: ಬಿಬಿಎಂಪಿ ಹಿರಿಯ ಅಧಿಕಾರಿಗಳ ಈ ಕ್ರಮಕ್ಕೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಆಕ್ರೋಶ ವ್ಯಕ್ತಪಡಿಸಿದೆ. 

ಈ ಕುರಿತು ಪ್ರತಿಕ್ರಿಯಿಸಿರುವ ಸಂಘದ ಅಧ್ಯಕ್ಷ ಎ.ಅಮೃತ್‌ರಾಜ್‌, ಕಂದಾಯ ವಸೂಲಿ ಸೇರಿದಂತೆ ಹಲವು ಕಾರ್ಯದೊತ್ತಡದಲ್ಲಿರುವ ಕಂದಾಯ ಅಧಿಕಾರಿಗಳ ವಿರುದ್ಧ ವಿನಾಕಾರಣ ಇಲಾಖಾ ವಿಚಾರಣೆ ನಡೆಸಿ, ದೋಷಾರೋಪ ಸಲ್ಲಿಸಿ ಅವರನ್ನು ತಪ್ಪಿತಸ್ಥರನ್ನಾಗಿ ಮಾಡಲಾಗುತ್ತಿದೆ. 

ಇದು ಸಿಬ್ಬಂದಿ ಮನೋಸ್ಥೈರ್ಯ ಕುಗ್ಗಿಸುವಂತಹದ್ದಾಗಿದೆ. ಕೂಡಲೇ ಅವರ ವಿರುದ್ಧದ ದೋಷಾರೋಪ ಪಟ್ಟಿ ರದ್ದುಗೊಳಿಸಬೇಕು. ಇಲ್ಲದಿದ್ದರೆ ಸಂಘದಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.