ಸಾರಾಂಶ
ಕೊಪ್ಪಳ: ಸಂವಿಧಾನ ಬದಲಿಸಿಯಾದರೂ ಮುಸ್ಲಿಮರಿಗೆ ಶೇ. 4 ಮೀಸಲಾತಿ ನೀಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳುವ ಮೂಲಕ ಕಾಂಗ್ರೆಸ್‌ನವರ ಸಂವಿಧಾನ ವಿರೋಧಿ ನೀತಿ ಬಯಲಾಗಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ರವಿಕುಮಾರ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಶೇ. 4ರಷ್ಟು ಮೀಸಲಾತಿ ನೀಡಿದ್ದನ್ನು ವಿರೋಧಿಸಿ ಸದನದ ಒಳಗೆ ಹೋರಾಟ ಮಾಡಿದ್ದೇವೆ. ಈಗ ಡಿ.ಕೆ. ಶಿವಕುಮಾರ ಇದಕ್ಕಾಗಿ ಸಂವಿಧಾನ ಬದಲಾಯಿಸುತ್ತೇವೆ ಎಂದಿದ್ದಾರೆ. ಇದು ಅವರ ಮನಸ್ಸಿನ ಮಾತಾಗಿದೆ ಎಂದರು.
ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿ ನೀಡಲು ಅವಕಾಶವಿಲ್ಲ. ಇದಕ್ಕಾಗಿಯೇ ಸಂವಿಧಾನ ಬದಲಾಯಿಸುತ್ತೇವೆ ಎಂದಿದ್ದಾರೆ. ಆದರೆ, ಅಲ್ಪಸಂಖ್ಯಾತರಿಗೆ ಧರ್ಮಾಧಾರಿತ ಮೀಸಲಾತಿ ನೀಡಲು ನಾವು ಬಿಡುವುದಿಲ್ಲ. ತೀವ್ರ ಹೋರಾಟ ಮಾಡುತ್ತೇವೆ ಎಂದರು.
ಮುಸ್ಲಿಮರ ಓಲೈಸುವುದಕ್ಕಾಗಿ ತುಷ್ಟೀಕರಣದ ಪರಮೋಚ್ಚ ಸ್ಥಿತಿಗೆ ತಲುಪಿದ್ದಾರೆ. ಮುಸ್ಲಿಮರಲ್ಲಿ ಮಾತ್ರ ಬಡವರಿದ್ದಾರಾ? ಹಿಂದೂಗಳಲ್ಲಿ ಬಡವರಿಲ್ಲವಾ? ಎಂದು ಪ್ರಶ್ನಿಸಿರುವ ರವಿಕುಮಾರ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಮುಸ್ಲಿಂ ಮೀಸಲಾತಿ ನೀಡುವುದಕ್ಕಾಗಿ ಏನು ಬೇಕಾದರೂ ಮಾಡಲು ಮುಂದಾಗಿದ್ದಾರೆ ಎಂದರು.
ಅಹೋರಾತ್ರಿ ಧರಣಿ:
ಏ. 1, 2 ಹಾಗೂ 3ರಂದು ಹುಬ್ಬಳ್ಳಿ, ಕೊಪ್ಪಳ, ತುಮಕೂರು, ಮೈಸೂರಿನಲ್ಲಿ ಅಹೋರಾತ್ರಿ ಹೋರಾಟ ಮಾಡುತ್ತೇವೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿ ರಾಜ್ಯ ನಾಯಕರು ಇದರಲ್ಲಿ ಭಾಗಿಯಾಗಲಿದ್ದಾರೆ ಎಂದ ಅವರು, ಕೊಪ್ಪಳದಲ್ಲಿ ಏ. 2ರಂದು ಹೋರಾಟ ನಡೆಯಲಿದೆ ಎಂದರು.
ವಿಧಾನಸೌಧದಲ್ಲಿ ಹೋರಾಟ ಮಾಡಿದ 18 ಶಾಸಕರನ್ನು ಅಮಾನತು ಮಾಡುವ ಮೂಲಕ ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿರುವ ರವಿಕುಮಾರ, ಮುಖ್ಯಮಂತ್ರಿ ಖುರ್ಚಿಗಾಗಿ ಹನಿಟ್ರ್ಯಾಪ್, ಮನಿಟ್ರ್ಯಾಪ್, ಸದನ ಟ್ರ್ಯಾಪ್ ಮಾಡುತ್ತಿದ್ದಾರೆ. ಇದೆಲ್ಲದರ ವಿರುದ್ಧ ಬಿಜೆಪಿ ದೊಡ್ಡ ಹೋರಾಟ ಮಾಡಲಿದೆ ಎಂದು ಹೇಳಿದರು.
ಕಾಂಗ್ರೆಸ್‌ಗೆ ಎಸ್‌ಸಿ-ಎಸ್‌ಟಿ, ಒಬಿಸಿ ಸಮಾಜದವರ ಬಗ್ಗೆ ಕಾಳಜಿ ಇಲ್ಲ. ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆ ತಂದಿದ್ದು ನಾವು ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ಗ್ಯಾರಂಟಿಗಾಗಿ ಈ ಹಣ ಬಳಕೆ ಮಾಡುತ್ತಿದ್ದಾರೆ. ದಲಿತರಿಗೆ ಇದ್ದ ಹಣ ಬಳಕೆ ಮಾಡಿದ್ದರ ಬಗ್ಗೆ ನಾಚಿಕೆ ಇದ್ದರೆ ಈ ಹಣ ವಾಪಸ್ ನೀಡಬೇಕು ಎಂದು ಆಗ್ರಹಿಸಿದರು.
ತೊಗರಿ ಬೆಳೆಗಾರರಿಗೆ ಪ್ಯಾಕೇಜ್ ನೀಡಬೇಕು. ₹800 ಕೋಟಿ ತೊಗರಿ ಬೆಳೆ ಹಾನಿಗೆ ನೀಡಬೇಕು ಎಂದು ರವಿಕುಮಾರ ಒತ್ತಾಯಿಸಿದರು.
ಈ ವೇಳೆ ವೆಂಕಟೇಶ ಹಾಲವರ್ತಿ, ರಮೇಶ ನಾಡಗೇರ, ಡಾ. ಬಸವರಾಜ ಕ್ಯಾವಟರ್, ಬಸವರಾಜ ದಢೇಸೂಗೂರು, ಶರಣು ತಳ್ಳಿಕೇರಿ. ನವೀನ ಗುಳಗಣ್ಣನವರ ಇದ್ದರು.